ಬೆಳ್ತಂಗಡಿ: ಮನೆಮಂದಿಯನ್ನು ಕಟ್ಟಿಹಾಕಿ ಲಕ್ಷಾಂತರ ರೂ. ಮೌಲ್ಯದ ನಗ-ನಗದು ದರೋಡೆ

Update: 2020-06-26 04:00 GMT

ಬೆಳ್ತಂಗಡಿ, ಜೂ.26: ಮನೆಯೊಂದಕ್ಕೆ ನುಗ್ಗಿದ ಕಳ್ಳರು ಮನೆಮಂದಿಯನ್ನು ಕಟ್ಟಿ ಹಾಕಿ ಲಕ್ಷಾಂತರ ರೂ. ಮೌಲ್ಯದ ನಗ ನಗದು ದರೋಡೆಗೈದ ಘಟನೆ ತಾಲೂಕಿನ ಕಲ್ಮಂಜ ಗ್ರಾಮದ ನೀರಚಿಲುಮೆ ಎಂಬಲ್ಲಿ ಶುಕ್ರವಾರ ಮುಂಜಾನೆ 2:30 ರ ಸುಮಾರಿಗೆ ನಡೆದಿದೆ.

ನೀರಚಿಲುಮೆ ಸಮೀಪದ ನಿವಾಸಿ ಅಚ್ಯುತ ಭಟ್ ಎಂಬವರ ಮನೆಯಿಂದ ಈ ದರೋಡೆ ನಡೆದಿದ್ದು, ಕಳ್ಳರು 40 ಪವನ್ ಚಿನ್ನಾಭರಣ, ಒಂದು ಕೆಜಿ ಬೆಳ್ಳಿ, 25 ಸಾವಿರ ರೂ ನಗದು ಸೇರಿದಂತೆ 13 ಲಕ್ಷ‌ ರೂ. ಮೌಲ್ಯದ ಸೊತ್ತು ದರೋಡೆಗೈದಿದ್ದಾರೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.

ಅಚ್ಯುತ ಭಟ್ ಅವರು ಉಜಿರೆಯಲ್ಲಿ ಅಡಿಕೆ ವ್ಯಾಪಾರ ನಡೆಸುತ್ತಿದ್ದಾರೆ. ನಿನ್ನೆ ತಡರಾತ್ರಿ ಸುಮಾರು 2:30ರ ಸುಮಾರಿಗೆ  ನಾಯಿಗಳು ಬೊಗಳಿದ ಸದ್ದುಕೇಳಿ ಮನೆಮಂದಿ ಬಾಗಿಲು ತೆರೆದಿದ್ದಾರೆ. ಈ ವೇಳೆ ಅಶೋಕ್ ಭಟ್ ಮನೆಯಿಂದ ಹೊರಬಂದಾಗ  ಅವರನ್ನು ಹಿಡಿದ ದರೋಡೆಕೋರರು ಮನೆಯೊಳಗೆ ನುಗ್ಗಿದ್ದಾರೆ. ಬಳಿಕ ಅಚ್ಯುತ ಭಟ್ ಸೇರಿದಂತೆ ಮನೆಮಂದಿಯನ್ನು ಕಟ್ಟಿಹಾಕಿ ದರೋಡೆ ನಡೆಸಲಾಗಿದೆ. ನಾಲ್ವರು ದರೋಡೆಕೋರರು ಮುಸುಕುಧಾರಿಗಳಾಗಿದ್ದರೆನ್ನಲಾಗಿದೆ. ಒಂದು ವೇಳೆ ಪೊಲೀಸರಿಗೆ ಮಾಹಿತಿ ನೀಡಿದರೆ ಮನೆಮಂದಿಯ ಕೊಲ್ಲುವುದಾಗಿ ದರೋಡೆಕೋರರು ಬೆದರಿಕೆಯೊಡ್ಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಧರ್ಮಸ್ಥಳ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸ್ಥಳಕ್ಕೆ ಬೆಳ್ತಂಗಡಿ ಸರ್ಕಲ್ ಇನ್ಸ್‌ಪೆಕ್ಟರ್ ಸಂದೇಶ್ ಪಿ.ಜಿ , ಧರ್ಮಸ್ಥಳ ಪಿಎಸ್ಐ ಪವನ್ ನಾಯ್ಕ್ ಮತ್ತು ಪೊಲೀಸರು  ಭೇಟಿ ನೀಡಿ  ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸ್ಥಳಕ್ಕೆ ಮಂಗಳೂರಿನಿಂದ ಶ್ವಾನದಳವನ್ನು ತರಿಸಲಾಗುತ್ತಿದ್ದು, ಬೆರಳಚ್ಚು ತಜ್ಞರು ಆಗಮಿಸುತ್ತಿದ್ದು ಹೆಚ್ಚಿನ ಪರಿಶೀಲನೆ ನಡೆಸಲಾಗುತ್ತಿದೆ.  

ಮನೆಯವರನ್ನು ಕಟ್ಟಿ ಹಾಕಿ ದರೋಡೆ ನಡೆಸಿದ ಪ್ರಕರಣ ಜನರಲ್ಲಿ ಭಯ ಮೂಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News