×
Ad

ತೈಲ ಬೆಲೆ ನಿಯಂತ್ರಿಸದಿದ್ದರೆ ಪ್ರತಿಭಟನೆ: ಟ್ಯಾಕ್ಸಿ, ಮ್ಯಾಕ್ಸಿಕ್ಯಾಬ್ ಚಾಲಕರ ಎಚ್ಚರಿಕೆ

Update: 2020-06-26 15:34 IST

ಮಂಗಳೂರು, ಜೂ.26: ಕೊರೋನ ಸೋಂಕು, ಲಾಕ್‌ಡೌನ್‌ನಿಂದ ಈಗಾಗಲೇ ಟ್ಯಾಕ್ಸಿ ಹಾಗೂ ಮ್ಯಾಕ್ಸಿಕ್ಯಾಬ್ ಚಾಲಕರು ಹಾಗೂ ಮಾಲಕರು ತತ್ತರಿಸಿದ್ದು, ಇದೀಗ ತೈಲ ಬೆಲೆ ಏರಿಕೆಯಿಂದ ಜೀವನವನ್ನೇ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೇಂದ್ರ ಹಾಗೂ ರಾಜ್ಯ ಸರಕಾರ ತೈಲ ಬೆಲೆ ನಿಯಂತ್ರಿಸದಿದ್ದಲ್ಲಿ ಪ್ರತಿಭಟನೆ ನಡೆಸುವುದು ಅನಿವಾರ್ಯ ಎಂದು ದ.ಕ. ಜಿಲ್ಲಾ ಟ್ಯಾಕ್ಸಿಮೆನ್ಸ್ ಮತ್ತು ಮ್ಯಾಕ್ಸಿಕ್ಯಾಬ್ ಅಸೋಸಿಯೇಶನ್ ಎಚ್ಚರಿಕೆ ನೀಡಿದೆ.

ಸುದ್ದಿಗೋಷ್ಠಿಯಲ್ಲಿಂದು ಟ್ಯಾಕ್ಸಿ ಹಾಗೂ ಮ್ಯಾಕ್ಸಿಕ್ಯಾಬ್ ಚಾಲಕರ ಪರಿಸ್ಥಿತಿಯನ್ನು ವಿವರಿಸಿದ ಅಧ್ಯಕ್ಷ ದಿನೇಶ್ ಕುಂಪಲ ಎಂ., ಲಾಕ್‌ಡೌನ್ ಸಂದರ್ಭ ಪರಿಹಾರವಾಗಿ ಸರಕಾರ ಘೋಷಣೆ ಮಾಡಿರುವಂತೆ ಟ್ಯಾಕ್ಸಿ ಚಾಲರಿಗೆ ಐದು ಸಾವಿರ ರೂ.ನ್ನು ಎಲ್‌ಎಂವಿ ಬ್ಯಾಡ್ಜ್ ಹೊಂದಿರುವ ಎಲ್ಲಾ ಚಾಲಕರಿಗೂ ಒದಗಿಸಬೇಕು ಎಂದು ಒತ್ತಾಯಿಸಿದರು.

ಸಂಘದಡಿ 2,500ಕ್ಕೂ ಅಧಿಕ ಟ್ಯಾಕ್ಸಿ ಮತ್ತು ಮ್ಯಾಕ್ಸಿಕ್ಯಾಬ್ ವಾಹನಗಳಿದ್ದು, ಪ್ರಯಾಣಿಕರ ಸಾಗಾಟದಿಂದಲೇ ಬರುವ ಆದಾಯದಲ್ಲಿ ಸಂಸಾರ ನಡೆಸುವ ಬಡ ಚಾಲಕ ಹಾಗೂ ಮಾಲಕರಾಗಿರುತ್ತಾರೆ. ಲಾಕ್‌ಡೌನ್ ಹಿನ್ನೆಲೆಯಲ್ಲಿ ಟ್ಯಾಕ್ಸಿ ಚಾಲರಿಗೆ ಘೋಷಣೆ ಮಾಡಿರುವ ಹಣ ಸರಕಾರದಿಂದ ಇನ್ನೂ ಸರಿಯಾಗಿ ಹಂಚಿಕೆಯಾಗಿಲ್ಲ. ಇದು ಟ್ಯಾಕ್ಸಿಗೆ ಮಾತ್ರ, ಮ್ಯಾಕ್ಸಿಕ್ಯಾಬ್‌ಗೆ ಇಲ್ಲ ಎಂಬ ತಾರತಮ್ಯವನ್ನೂ ಮಾಡಲಾಗುತ್ತಿದೆ. ಹಾಗಾಗಿ ಬ್ಯಾಡ್ಜ್ ಹೊಂದಿದವರಿಗೆ ಎಲ್ಲರಿಗೂ ಪರಿಹಾರ ಹಣವನ್ನು ನೀಡಬೇಕು ಎಂದವರು ಹೇಳಿದರು.

ಲಾಕ್‌ಡೌನಿಂದಾಗಿ ಸುಮಾರು ನಾಲ್ಕು ತಿಂಗಳಿನಿಂದ ವಾಹನಗಳು ರಸ್ತೆಗಿಳಿದಿಲ್ಲ. ಇದೀಗ ರಸ್ತೆಗಿಳಿದರೂ ಬಾಡಿಗೆ ತುಂಬಾ ವಿರಳವಾಗಿದೆ. ಈ ಸಂದರ್ಭದಲ್ಲಿ ಆರ್‌ಬಿಐ ಮೂಲಕ ಬ್ಯಾಂಕ್‌ಗಳಿಗೆ ಯಾವುದೇ ಸಾಲ ವಸೂಲಿಗೆ ಒತ್ತಾಯ ಮಾಡದಂತೆ ಸೂಚನೆ ನೀಡಿದೆ. ಸಾಲದ ಕಂತನ್ನು ಬಡ್ಡಿ ರಹಿತವಾಗಿ ಪಡೆಯಬೇಕಿದ್ದರೂ ಬ್ಯಾಂಕ್‌ಗಳು ಮಾತ್ರ ವಹಾನಗಳ ಮಾಲಕರಿಗೆ ಕರೆ ಮಾಡಿ ಸಾಲ ವಸೂಲಾತಿಗೆ ಒತ್ತಾಯಿಸುತ್ತಿವೆ. ಈ ಬಗ್ಗೆ ಸರಕಾರ ಸಂಬಂಧಪಟ್ಟ ಬ್ಯಾಂಕ್‌ಗಳಿಗೆ ಅಧಿಸೂಚನೆ ನೀಡಬೇಕು. ಮಾತ್ರವಲ್ಲದೆ, ಟ್ಯಾಕ್ಸಿ ಹಾಗೂ ಮ್ಯಾಕ್ಸಿ ಕ್ಯಾಬ್ ವಾಹನಗಳಿಗೆ ಮುಂದಿನ ಆರು ತಿಂಗಳ ಕಾಲ ತೆರಿಗೆ ಹಾಗೂ ವಿಮೆಯಿಂದ ವಿನಾಯಿತಿ ನೀಡಲು ಸಂಬಂಧಪಟ್ಟ ಇಲಾಖೆಗಳಿಗೆ ಸೂಚಿಸಬೇಕು ಎಂದು ಅವರು ಒತ್ತಾಯಿಸಿದರು.


ಕೋವಿಡ್ ನಿರ್ಮೂಲನೆಯಲ್ಲಿ ತೊಡಗಿದ ಟ್ಯಾಕ್ಸಿಗಳಿಗೆ ಗೌರವಧನ ನೀಡಿ

ಕೋವಿಡ್-19 ನಿರ್ಮೂಲನೆ ಕಾರ್ಯದಲ್ಲಿದ್ದ ಪೊಲೀಸ್ ಇಲಾಖೆ ಹಾಗೂ ಆರೋಗ್ಯ ಇಲಾಖೆಗಳಿಗೆ ಸಂಚಾರಕ್ಕಾಗಿ ಜಿಲ್ಲಾಡಳಿತ ಸಂಘದ ಮೂಲಕ ಸುಮಾರು 150 ವಾಹನಗಳನ್ನು ಜಿಲ್ಲೆಯಾದ್ಯಂತ ಒದಗಿಸಿದೆ. ಸುಮಾರು 57 ದಿನಗಳಾದರೂ ಇನ್ನೂ ಅವರಿಗೆ ಒದಗಿಸಬೇಕಾದ ಗೌರವಧನ ನೀಡಲಾಗಿಲ್ಲ. ಇದರಿಂದಾಗಿ ಆ ವಾಹನಗಳ ಚಾಲಕರ ಕುಟುಂಬ ನಿರ್ವಹಣೆ ಕಷ್ಟಸಾಧ್ಯವಾಗಿದೆ. ಜಿಲ್ಲಾಡಳಿತಕ್ಕೆ ಈ ಬಾರಿ ಮನವಿ ನೀಡಿದ್ದರೂ ಸ್ಪಂದನೆ ದೊರಕಿಲ್ಲ ಎಂದು ದಿನೇಶ್ ಕುಂಪಲ ಎಂ. ಬೇಸರ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಆನಂದ್ ಕೆ., ಉಪಾಧ್ಯಕ್ಷರಾದ ಹರೀಶ್ ಶೆಟ್ಟಿ ಕುತ್ತಾರು, ದಿನೇಶ್ ಮಂಗಳಾದೇವಿ, ಸುರೇಶ್ ಸುರತ್ಕಲ್ ಉಪಸ್ಥಿತರಿದ್ದರು 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News