30 ವರ್ಷಗಳಿಂದ ಮಹಿಳೆಯಾಗಿದ್ದಾಕೆ ಆಸ್ಪತ್ರೆಗೆ ಹೋದ ನಂತರ ‘ಪುರುಷ’!

Update: 2020-06-26 10:53 GMT

ಕೊಲ್ಕತ್ತಾ: ಮೂವತ್ತು ವರ್ಷಗಳ ಕಾಲ ಯಾವುದೇ ಸಮಸ್ಯೆಯೆದುರಿಸದ ಮಹಿಳೆಯೊಬ್ಬರು ಇತ್ತೀಚೆಗೆ ಹೊಟ್ಟೆ ನೋವಿನ ಸಮಸ್ಯೆಯ ಕಾರಣ ಆಸ್ಪತ್ರೆಗೆ ತೆರಳಿದಾಗ ಆಕೆಯನ್ನು ಪರೀಕ್ಷಿಸಿದ ವೈದ್ಯರು ಆಕೆ ವೃಷಣದ ಕ್ಯಾನ್ಸರ್‍ ನಿಂದ ಬಳಲುತ್ತಿರುವ ಒಬ್ಬ `ಪುರುಷ' ಎಂದು ಪತ್ತೆ ಹಚ್ಚಿದ್ದಾರೆ.

ಈಕೆಯ 28 ವರ್ಷದ ಸೋದರಿ ಕೂಡ ನಂತರ ವೈದ್ಯಕೀಯ ಪರೀಕ್ಷೆಗೊಳಗಾದಾಗ ಆಕೆ ಕೂಡ ‘ಎಂಡ್ರೋಜನ್ ಇನ್ಸೆನ್ಸಿಟಿವಿಟಿ ಸಿಂಡ್ರೋಮ್' ಎಂಬ ಸಮಸ್ಯೆಯಿಂದ ಬಳಲುತ್ತಿರುವುದು ಬೆಳಕಿಗೆ ಬಂತು. ಈ ಸಮಸ್ಯೆಯಿರುವವರ ದೇಹ ಮಹಿಳೆಯರಂತಿದ್ದರೂ ದೇಹದೊಳಗಿನ ಅಂಶಗಳು ಮಾತ್ರ ಪುರುಷರದ್ದಾಗಿರುತ್ತದೆ.

ಮೊದಲು ವೈದ್ಯಕೀಯ ಪರೀಕ್ಷೆಗೊಳಗಾದ 30 ವರ್ಷದ ಮಹಿಳೆ ಬಿರ್ಭುಮ್ ನಿವಾಸಿಯಾಗಿದ್ದು, ಕಳೆದ  ಒಂಬತ್ತು ವರ್ಷಗಳ ಹಿಂದೆ ಆಕೆಗೆ ವಿವಾಹವಾಗಿದೆ. ಎರಡು ತಿಂಗಳ ಹಿಂದೆ ತೀವ್ರ ಹೊಟ್ಟೆ ನೋವಿನ ಕಾರಣ ಆಕೆ ನಗರದ ನೇತಾಜಿ ಸುಭಾಸ್ ಚಂದ್ರ ಬೋಸ್ ಕ್ಯಾನ್ಸರ್ ಆಸ್ಪತ್ರೆಗೆ ತಪಾಸಣೆಗಾಗಿ ಬಂದಾಗ ಆಕೆಯ ವೈದ್ಯಕೀಯ ಪರೀಕ್ಷೆಗಳನ್ನು ಕ್ಯಾನ್ಸರ್ ತಜ್ಞರಾದ ಡಾ. ಅನುಪಮ್ ದತ್ತಾ ಹಾಗೂ ಡಾ. ಸೌಮೇನ್ ದಾಸ್ ನಡೆಸಿದ್ದರು. ಆಗ ಆಕೆಯ ಅಂಗಾಂಗಗಳು- ಸ್ತನಗಳಿಂದ ಹಿಡಿದು ಜನನಾಂಗದವರೆಗೆ ಎಲ್ಲವೂ ಮಹಿಳೆಯರ ದೇಹವನ್ನೇ ಹೋಲುತ್ತಿದ್ದರೂ ಆಕೆಯ ದೇಹದೊಳಗೆ ಗರ್ಭಕೋಶ ಹಾಗೂ ಅಂಡಾಶಯಗಳಿಲ್ಲದೇ ಇರುವುದು ಅವರಿಗೆ ತಿಳಿದು ಬಂದಿತ್ತು. ಆಕೆಗೆ ಋತುಸ್ರಾವ ಕೂಡ ಆಗುತ್ತಿರಲಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

ಇಂತಹ ಸಮಸ್ಯೆ ಪ್ರತಿ 22,000 ಜನರ ಪೈಕಿ ಒಬ್ಬರಲ್ಲಿ ಮಾತ್ರ ಕಂಡು ಬರುತ್ತವೆ. ಈ ಮಹಿಳೆಯ ದೇಹದೊಳಗೆ ವೃಷಣಗಳಿರುವುದು ವೈದ್ಯರಿಗೆ ಕಂಡು ಬಂದಿದ್ದು ಬಯಾಪ್ಸಿ ನಡೆಸಿದಾಗ ಆಕೆಗೆ ವೃಷಣದ ಕ್ಯಾನ್ಸರ್ ಅಥವಾ ‘ಸೆಮಿನೋಮ’ ಇರುವುದು ಪತ್ತೆಯಾಗಿದೆ. ಸದ್ಯ ಆಕೆಗೆ ಕೀಮೋಥೆರಪಿ ನೀಡಲಾಗುತ್ತಿದ್ದು ಆಕೆಯ ಸ್ಥಿತಿ ಸ್ಥಿರವಾಗಿದೆ. ಮಹಿಳೆಯ ಇಬ್ಬರು ಚಿಕ್ಕಮ್ಮಂದಿರೂ ಇದೇ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ವರದಿಯಾಗಿದೆ.  

ಈಗ ವೈದ್ಯರು ಆಕೆ ಹಾಗೂ ಆಕೆಯ ಪತಿಯ ಜತೆಗೆ ಸಮಾಲೋಚನೆ ನಡೆಸುತ್ತಿದ್ದು, ಹಿಂದಿನಂತೆಯೇ ಜೀವನ ಮುಂದುವರಿಸಲು ಸಲಹೆ ನೀಡಿದ್ದಾರೆ. ದಂಪತಿ ಮಕ್ಕಳನ್ನು ಪಡೆಯಬೇಕೆಂದು ಬಹಳ ಪ್ರಯತ್ನಿಸಿದ್ದರೂ ವಿಫಲರಾಗಿದ್ದರು ಎಂದು ವೈದ್ಯರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News