ಕೋವಿಡ್-19 ಚೇತರಿಕೆ ಯೋಜನೆಯಲ್ಲಿ ಕಲ್ಲಿದ್ದಲು ಸೇರಿಸುವುದು ಸರಿಯಲ್ಲ: ಆಂಟೋನಿಯೊ ಗುಟೆರಸ್

Update: 2020-06-26 15:18 GMT

ವಿಶ್ವಸಂಸ್ಥೆ (ನ್ಯೂಯಾರ್ಕ್), ಜೂ. 26: ಕೋವಿಡ್-19 ಚೇತರಿಕೆ ಯೋಜನೆಯಲ್ಲಿ ಯಾವುದೇ ದೇಶವು ಕಲ್ಲಿದ್ದಲ್ಲನ್ನು ಸೇರಿಸುವುದು ಸರಿಯಲ್ಲ ಎಂದು ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಹೇಳಿದ್ದಾರೆ. ಬದಲಿಗೆ, ಮಾಲಿನ್ಯರಹಿತ ಇಂಧನ ಮೂಲಗಳ ಮೇಲೆ ಹೂಡಿಕೆಗಳನ್ನು ಮಾಡಬೇಕಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ವಾಣಿಜ್ಯ ಗಣಿಗಾರಿಕೆಗಾಗಿ ಕಲ್ಲಿದ್ದಲು ನಿಕ್ಷೇಪಗಳ ಹರಾಜು ಪ್ರಕ್ರಿಯೆಯನ್ನು ಭಾರತ ಆರಂಭಿಸಿದ ಒಂದು ವಾರದ ಬಳಿಕ ಅವರು ಈ ಹೇಳಿಕೆ ನೀಡಿದ್ದಾರೆ.

ಕೋವಿಡ್-19 ಸಾಂಕ್ರಾಮಿಕಕ್ಕೆ ವಿಶ್ವಸಂಸ್ಥೆ ಯಾವ ರೀತಿ ಪ್ರತಿಕ್ರಿಯಿಸಿದೆ ಎಂಬುದರ ವಿವರಗಳನ್ನು ಗುಟೆರಸ್ ಗುರುವಾರ ವಿಶ್ವಸಂಸ್ಥೆಯಲ್ಲಿ ಮಂಡಿಸಿದರು. ಕಳೆದ ಮೂರು ತಿಂಗಳುಗಳ ಅವಧಿಯಲ್ಲಿ ಮಾರಕ ಸಾಂಕ್ರಾಮಿಕಕ್ಕೆ ಸಂಬಂಧಿಸಿ ಜಾಗತಿಕ ಸಂಸ್ಥೆಯು ಯಾವ ಕ್ರಮಗಳನ್ನು ತೆಗೆದುಕೊಂಡಿದೆ ಎಂಬ ವಿವರಗಳು ಹಾಗೂ ಉತ್ತಮವಾಗಿ ಚೇತರಿಸಿಕೊಳ್ಳಲು ಏನು ಮಾಡಬೇಕು ಎನ್ನುವುದಕ್ಕೆ ಸಂಬಂಧಿಸಿದ ಮಾರ್ಗನಕ್ಷೆಯನ್ನೂ ವರದಿ ಒಳಗೊಂಡಿದೆ.

‘‘ಮೊದಲಿದ್ದ ವ್ಯವಸ್ಥೆಗೆ ನಾವು ಹಿಂದಿರುಗುವುದು ಸಾಧ್ಯವಿಲ್ಲ ಹಾಗೂ ಬಿಕ್ಕಟ್ಟನ್ನು ಬಿಗಡಾಯಿಸಿದ ವ್ಯವಸ್ಥೆಗಳನ್ನು ನಾವು ಮತ್ತೆ ನಿರ್ಮಿಸಲಾಗದು. ಹೆಚ್ಚು ಸಹ್ಯ, ಸರ್ವರನ್ನೂ ಒಳಗೊಂಡ, ಲಿಂಗ-ಸಮಾನತೆಯ ಸಮಾಜಗಳು ಮತ್ತು ಆರ್ಥಿಕತೆಗಳನ್ನು ನಾವು ಮರುನಿರ್ಮಿಸಬೇಕಾಗಿದೆ’’ ಎಂದು ವೀಡಿಯೊ ಕಾನ್ಫರೆನ್ಸ್ ಮೂಲಕ ನಡೆಸಲಾದ ಪತ್ರಿಕಾಗೋಷ್ಠಿಯಲ್ಲಿ ಅವರು ಹೇಳಿದರು.

‘‘ಯಾವುದೇ ದೇಶವು ತನ್ನ ಕೋವಿಡ್-19 ಚೇತರಿಕೆ ಯೋಜನೆಯಲ್ಲಿ ಕಲ್ಲಿದ್ದಲ್ಲನ್ನು ಸೇರಿಸುವುದಕ್ಕೆ ಯಾವುದೇ ಒಳ್ಳೆಯ ಕಾರಣವಿಲ್ಲ. ಇದು ಮಾಲಿನ್ಯ ಉಂಟುಮಾಡದ, ಮಾಲಿನ್ಯಕಾರಕ ಅನಿಲಗಳನ್ನು ಹೊರಬಿಡದ, ಉತ್ತಮ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಹಾಗೂ ಹಣ ಉಳಿಸುವ ಇಂಧನ ಮೂಲಗಳಲ್ಲಿ ಹೂಡಿಕೆ ಮಾಡುವ ಸಮಯವಾಗಿದೆ’’ ಎಂದು ವಿಶ್ವಸಂಸ್ಥೆ ಮುಖ್ಯಸ್ಥರು ಅಭಿಪ್ರಾಯಪಟ್ಟರು.

ಭಾರತವನ್ನು ಗಮನದಲ್ಲಿಟ್ಟು ಹೇಳಿದರೇ?

ಗುಟೆರಸ್ ಯಾವುದೇ ದೇಶವನ್ನು ಹೆಸರಿಸಿಲ್ಲವಾದರೂ, ವಾಣಿಜ್ಯ ಗಣಿಗಾರಿಕೆಗಾಗಿ ಕಲ್ಲಿದ್ದಲು ನಿಕ್ಷೇಪಗಳ ಹರಾಜು ಪ್ರಕ್ರಿಯೆಗೆ ಚಾಲನೆ ನೀಡಲು ಭಾರತ ತೆಗೆದುಕೊಂಡಿರುವ ನಿರ್ಧಾರವನ್ನು ಗಮನದಲ್ಲಿರಿಸಿ ಅವರು ಈ ಹೇಳಿಕೆ ನೀಡಿದ್ದಾರೆ ಎಂದು ವಿಶ್ವಸಂಸ್ಥೆಯಲ್ಲಿರುವ ಮೂಲಗಳು ತಿಳಿಸಿವೆ.

ಕೋವಿಡ್-19 ಲಾಕ್‌ಡೌನ್‌ನಿಂದ ಹೊರಬರುವ ಸಮಯದಲ್ಲಿ ತಮ್ಮ ಇಂಧನ ಅವಶ್ಯಕತೆಗಳಿಗಾಗಿ ಇತರ ದೇಶಗಳೂ ಕಲ್ಲಿದ್ದಲ್ಲನ್ನು ಬಳಸಬಹುದು ಎಂಬ ಭೀತಿಯ ಹಿನ್ನೆಲೆಯಲ್ಲಿ, ಭಾರತದ ಈ ಕ್ರಮಕ್ಕೆ ಕಳವಳ ವ್ಯಕ್ತವಾಗಿದೆ ಎಂದು ಮೂಲಗಳು ಹೇಳಿವೆ.

ವಾಣಿಜ್ಯ ಗಣಿಗಾರಿಕೆಗಾಗಿ 41 ಕಲ್ಲಿದ್ದಲು ನಿಕ್ಷೇಪಗಳ ಹರಾಜು ಪ್ರಕ್ರಿಯೆಗೆ ಪ್ರಧಾನಿ ನರೇಂದ್ರ ಮೋದಿ ಕಳೆದ ವಾರ ಚಾಲನೆ ನೀಡಿದ್ದಾರೆ. ಇದು ಭಾರತದ ಕಲ್ಲಿದ್ದಲು ವಲಯವನ್ನು ಖಾಸಗಿ ಕಂಪೆನಿಗಳಿಗೆ ತೆರೆಯುತ್ತದೆ. ಭಾರತ ಸ್ವಾವಲಂಬನೆಯನ್ನು ಸಾಧಿಸುವ ನಿಟ್ಟಿನಲ್ಲಿ ಇದೊಂದು ಮಹತ್ತರ ಹೆಜ್ಜೆಯಾಗಿದೆ ಎಂದು ಭಾವಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News