ಕೊರೋನ ಸೋಂಕು ನಿಯಂತ್ರಣ: ಉತ್ತರ ಪ್ರದೇಶದ ಸಾಧನೆಗೆ ಪ್ರಧಾನಿ ಶ್ಲಾಘನೆ

Update: 2020-06-26 15:19 GMT

ಹೊಸದಿಲ್ಲಿ, ಜೂ.26: ಕೊರೋನ ಸೋಂಕು ಹರಡದಂತೆ ಉತ್ತರಪ್ರದೇಶ ಕೈಗೊಂಡಿರುವ ಉಪಕ್ರಮಗಳನ್ನು ಪ್ರಧಾನಿ ಮೋದಿ ಶ್ಲಾಘಿಸಿದ್ದು, ಕೊರೋನ ಸೋಂಕಿನ ವಿರುದ್ಧದ ಹೋರಾಟದಲ್ಲಿ ರಾಜ್ಯದ ಜನತೆ ಇಡೀ ವಿಶ್ವಕ್ಕೆ ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ ಎಂದಿದ್ದಾರೆ.

ಇಂಗ್ಲೆಂಡ್, ಫ್ರಾನ್ಸ್, ಇಟಲಿ ಮತ್ತು ಸ್ಪೇನ್ ರಾಷ್ಟ್ರಗಳ ಒಟ್ಟು ಜನಸಂಖ್ಯೆ 24 ಕೋಟಿಯಾಗಿದ್ದರೆ ಉತ್ತರಪ್ರದೇಶ ರಾಜ್ಯದ ಜನಸಂಖ್ಯೆಯೂ 24 ಕೋಟಿಯಾಗಿದೆ. ಒಂದೊಮ್ಮೆ ವಿಶ್ವವನ್ನೇ ಜಯಿಸಿದ್ದ ಮೇಲಿನ ನಾಲ್ಕು ದೇಶಗಳಲ್ಲಿ ಕೊರೋನ ಸೋಂಕಿಗೆ ಬಲಿಯಾದವರ ಸಂಖ್ಯೆ 1,30,000 ಆಗಿದ್ದರೆ ಉತ್ತರಪ್ರದೇಶದಲ್ಲಿ ಮೃತರ ಸಂಖ್ಯೆ ಕೇವಲ 600 ಮಾತ್ರ ಎಂದು ಪ್ರಧಾನಿ ಮೋದಿ ಹೇಳಿದರು. ಆತ್ಮನಿರ್ಭರ ಉತ್ತರಪ್ರದೇಶ ರೋಜ್‌ಗಾರ್ ಅಭಿಯಾನಕ್ಕೆ ವೀಡಿಯೊ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

ಕೊರೋನ ಸೋಂಕಿನ ವಿರುದ್ಧದ ಕಾರ್ಯಾಚರಣೆಯಲ್ಲಿ ಉತ್ತರಪ್ರದೇಶದ ಜನತೆ ಧೈರ್ಯ ಮತ್ತು ಜಾಣ್ಮೆ ಪ್ರದರ್ಶಿಸಿದ್ದಾರೆ. ಪರಿಸ್ಥಿತಿ ಕೈಮೀರದಂತೆ ಆರಂಭದಿಂದಲೂ ಎಚ್ಚರಿಕೆಯಿಂದ ನಡೆದುಕೊಂಡಿದ್ದಾರೆ ಎಂದು ಮೋದಿ ಶ್ಲಾಘಿಸಿದರು. ಕೊರೋನ ಸೋಂಕಿಗೆ ಔಷಧ ಸಿದ್ಧವಾಗುವವರೆಗೆ, ಸುರಕ್ಷಿತ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದು ಮತ್ತು ಕೈಗಳನ್ನು ತೊಳೆದುಕೊಳ್ಳುವುದು ಅತ್ಯಗತ್ಯವಾಗಿದೆ ಎಂದರು.

ಇದೇ ಸಂದರ್ಭ ಅವರು ಉತ್ತರಪ್ರದೇಶದ ಗ್ರಾಮಸ್ಥರೊಂದಿಗೆ ಸಂವಾದ ನಡೆಸಿದರು. ಕೇಂದ್ರ ಸರಕಾರ ರೂಪಿಸಿರುವ ಉದ್ಯೋಗ ಅಭಿಯಾನದಡಿ ಉತ್ತರಪ್ರದೇಶದ 1 ಕೋಟಿಗೂ ಅಧಿಕ ಜನರಿಗೆ (ಇದರಲ್ಲಿ 30 ಲಕ್ಷ ವಲಸೆ ಕಾರ್ಮಿಕರು) ಉದ್ಯೋಗ ಒದಗಿಸುವ ಗುರಿ ಹೊಂದಲಾಗಿದೆ. ಕಳೆದ ವಾರ ಪ್ರಧಾನಿ ಚಾಲನೆ ನೀಡಿದ ಗರೀಬ್ ಕಲ್ಯಾಣ್ ರೋಜ್‌ಗಾರ್ ಅಭಿಯಾನದ ಅಂಗವಾಗಿರುವ ಈ ಯೋಜನೆಯಡಿ ಉತ್ತರಪ್ರದೇಶದ 31 ಜಿಲ್ಲೆಗಳನ್ನು ಸೇರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News