ಉಡುಪಿಯಲ್ಲಿ ರಕ್ತದ ಕೊರತೆಯಿಲ್ಲ: ಜಿಲ್ಲಾಧಿಕಾರಿ ಜಿ. ಜಗದೀಶ್
ಉಡುಪಿ, ಜೂ.26: ಉಡುಪಿ ಜಿಲ್ಲೆಯಲ್ಲಿ ರಕ್ತದಾನದ ಕೊರತೆ ಆಗದಂತೆ ಸಂಘ-ಸಂಸ್ಥೆಗಳು, ರಕ್ತದಾನಿಗಳೆಲ್ಲ ಸೇರಿ ಕೊರೋನಾದ ಸಂದರ್ಭ ದಲ್ಲೂ ಹಲವಾರು ರಕ್ತದಾನ ಶಿಬಿರಗಳನ್ನು ಮಾಡಿ ಕೊರೋನಾ ಹೋರಾಟದಲ್ಲಿ ಸಾಥ್ ನೀಡಿದ್ದಾರೆ ಎಂದು ಜಿಲ್ಲಾಧಿಕಾರಿ ಜಿ ಜಗದೀಶ್ ಹೇಳಿದ್ದಾರೆ.
ಶುಕ್ರವಾರ, ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉಡುಪಿ, ಜಿಲ್ಲಾ ಪೊಲೀಸ್ ಇಲಾಖೆ ಉಡುಪಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಹಾಗೂ ತಡೆಗಟ್ಟುವ ಘಟಕ ಉಡುಪಿ, ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಉಡುಪಿ, ಆರೋಗ್ಯ ಇಲಾಖೆ ಗುತ್ತಿಗೆ ಮತ್ತು ಹೊರ ಗುತ್ತಿಗೆ ನೌಕರರ ಸಂಘ ಉಡುಪಿ, ಬಡಗಬೆಟ್ಟು ಕೊ ಆಪರೇಟಿವ್ ಸೊಸೈಟಿ ಉಡುಪಿ, ಹರ್ಷ, ಪೂರ್ಣಪ್ರಜ್ಞ ಕಾಲೇಜಿನ ಎನ್ನೆಸ್ಸೆಸ್ ವಿಭಾಗ, ವೀರಕೇಸರಿ ಸಂಘಟನೆ ಸಾಸ್ತಾನ, ಕೋಡಿತಲೆ, ಕರಾವಳಿ ಸ್ವಯಂಪ್ರೇರಿತ ರಕ್ತದಾನಿಗಳ ಸಂಘ ಗಂಗೊಳ್ಳಿ ಮತ್ತು ರಕ್ತನಿಧಿ ಕೇಂದ್ರ ಜಿಲ್ಲಾ ಆಸ್ಪತ್ರೆ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ವಿಶ್ವ ರಕ್ತದಾನಿಗಳ ದಿನಾಚರಣೆ ಮತ್ತು ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಮತ್ತು ಅತೀ ಹೆಚ್ಚು ಬಾರಿ ರಕ್ತದಾನ ಮಾಡಿದ ಮಹನೀಯರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಜಿಲ್ಲೆಯಲ್ಲಿ ಅತೀ ಹೆಚ್ಚು ರಕ್ತದಾನ ಮಾಡಿದವರನ್ನು ಸನ್ಮಾನಿಸಿ ಮಾತನಾಡಿದರು.
ಜಿಲ್ಲಾಡಳಿತದ ಮುಖ್ಯ ಉದ್ದೇಶ ಸಮುದಾಯಕ್ಕೆ ಯಾವುದೇ ಕಾರಣಕ್ಕೂ ಕೊರೋನ ಹರಡಬಾರದು, ಸೋಂಕನ್ನು ತಡೆಯಬೇಕೆಂಬುದೇ ಆಗಿದೆ. ಜನರು ಈಗಾಗಲೇ ಕೊರೋನಾ ಮುಗಿಯಿತು ಎಂಬ ಮನೋಭಾವನೆಯಲ್ಲಿದ್ದಾರೆ. ಕೊರೋನಾ ಮುಗಿದಿಲ್ಲ. ಕೆಲವು ವ್ಯಕ್ತಿಗಳು ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಹಾಕಿಕೊಳ್ಳದೇ, ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳದೇ ತಿರುಗಾಡುತ್ತಿದ್ದಾರೆ. ಅಂಥವರ ವಿರುದ್ಧ ಮುಂದಿನ ದಿನಗಳಲ್ಲಿ ದಂಡ ಹಾಕುವುದಲ್ಲದೇ, ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು. ಮಾಸ್ಕ್ ಹಾಕದೇ, ಸುರಕ್ಷಿತಾ ಅಂತರವನ್ನು ಕಾಪಾಡಿಕೊಳ್ಳ ದವರು ಸೋಂಕನ್ನು ಹರಡುವ ಏಜೆಂಟ್‌ಗಳಾಗಿರುತ್ತಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಅತೀ ಹೆಚ್ಚು ರಕ್ತದಾನ ಮಾಡಿದ ರಕ್ತದಾನಿಗಳಾದ, ರಯ್ಯನ್ ಫೆರ್ನಾಂಡಿಸ್ ಕುರ್‌ಕಲ್, ನಂದನ್ ಶೆಟ್ಟಿ ಅಮಾಸೆಬೈಲು, ಮಣಿಕಂಠ ಖಾರ್ವಿ ಸಾಸ್ತಾನ, ಗಾಯತ್ರಿ ಉಪಾಧ್ಯಾಯ ಉಡುಪಿ, ಸುಧಾಕರ ನಾಯಕ್ ಕಬಿಯಾಡಿ, ಗಿರಿಜ ಸುವರ್ಣ ಸಾಲಿಗ್ರಾಮ ಇವರನು್ನ ಜಿಲ್ಲಾಧಿಕಾರಿ ಸನ್ಮಾನಿಸಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ಎಎಸ್ಪಿಕುಮಾರಚಂದ್ರ, ಡಿಹೆಚ್‌ಓ ಡಾ. ಸುಧೀರ್ ಚಂದ್ರ ಸೂಡ , ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ. ಚಿದಾನಂದ ಸಂಜು ಎಸ್, ಜಿಲ್ಲಾ ಸರ್ಜನ್ ಡಾ.ಮಧುಸೂದನ ನಾಯಕ್, ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಸುಬ್ರಮಣ್ಯ ಶೇರೆಗಾರ್, ಬಡಗಬೆಟ್ಟು ಕೋ- ಆಪರೇಟಿವ್ ಸೊಸೈಟಿಯ ಪ್ರಧಾನ ವ್ಯವಸ್ಥಾಪಕ ಜಯಕರ ಶೆಟ್ಟಿ ಇಂದಾ್ರಳಿ ಮತ್ತಿತರರು ಉಪಸ್ಥಿತರಿದ್ದರು.
ಮಂಜುನಾಥ್ ಕಾರ್ಯಕ್ರಮ ನಿರೂಪಿಸಿ, ಜಿಲ್ಲಾ ಮೇಲ್ವಿಚಾರಕ ಮಹಾಬಲೇಶ್ವರ ವಂದಿಸಿದರು.