ಸ್ವರ್ಣ ನದಿಯಲ್ಲಿ ಅಕ್ರಮ ಮರಳುಗಾರಿಕೆ ಕರ್ತವ್ಯ ಲೋಪ ಮಾಡಿದವರ ವಿರುದ್ಧ ಕ್ರಮ: ಜಿಲ್ಲಾಧಿಕಾರಿ

Update: 2020-06-26 16:24 GMT

ಉಡುಪಿ, ಜೂ.26: ಸ್ವರ್ಣ ನದಿಯಲ್ಲಿ ಹೂಳೆತ್ತುವ ನೆಪದಲ್ಲಿ ಅಕ್ರಮವಾಗಿ ಮರಳುಗಾರಿಕೆ ಮಾಡಿದ ಹಗರಣಕ್ಕೆ ಸಂಬಂಧಿಸಿದಂತೆ ಕರ್ತವ್ಯ ಲೋಪ ಮಾಡಿದವರ ವಿರುದ್ಧ ಎಲ್ಲಾ ಕ್ರಮಗಳನ್ನು ಜರಗಿಸಿದ್ದೇವೆ. ಜಿಲ್ಲಾಡಳಿತ ಯಾವುದೇ ಕಾರಣಕ್ಕೂ ಅಕ್ರಮ ಮರಳುಗಾರಿಕೆ, ಗಣಿಗಾರಿಕೆಗೆ ಅವಕಾಶ ನೀಡುವುದಿಲ್ಲ ಎಂದು ಜಿಲ್ಲಾದಿಕಾರಿ ಜಿ.ಜಗದೀಶ್ ಸ್ಪಷ್ಟಪಡಿಸಿದ್ದಾರೆ.

ಸ್ವರ್ಣ ನದಿಯಲ್ಲಿ ಮರಳು ಲೂಟಿಗೆ ಸಂಬಂಧಿಸಿದಂತೆ ಕರ್ತವ್ಯ ಲೋಪ ಎಸಗಿದ ಆರೋಪದ ಮೇಲೆ ಜಿಲ್ಲಾದಿಕಾರಿಗಳ ವಿರುದ್ಧ ಯುವ ಕಾಂಗ್ರೆಸ್ ಲೋಕಾಯುಕ್ತಕ್ಕೆ ದೂರು ನೀಡಿರುವ ಕುರಿತಂತೆ ಇಂದು ಉಡುಪಿಯಲ್ಲಿ ಜಿಲ್ಲಾಧಿಕಾರಿಯವರ ಗಮನ ಸೆಳೆದಾಗ ಅವರು ತೀಕ್ಷ್ಣ ಪ್ರತಿಕ್ರಿಯೆ ನೀಡಿದರು.

ಯುವ ಕಾಂಗ್ರೆಸ್‌ನ ಆರೋಪ ಸಮಾಜದಲ್ಲಿ ತಪ್ಪು ಅಭಿಪ್ರಾಯವನ್ನು ಬಿಂಬಿಸುತ್ತದೆ. ಜಿಲ್ಲಾಧಿಕಾರಿಯವರು ಎಲ್ಲಾ ಕಡೆಗೆ ಹೋಗಿ ಮರಳು ಕಾಯಲು ಸಾಧ್ಯವಿಲ್ಲ. ಯಾರ ಜವಾಬ್ದಾರಿ ಏನು ಎಂಬ ಬಗ್ಗೆ ಸಂಬಂಧಿತ ಅಧಿಕಾರಿಗಳಿಗೆ ಸ್ಪಷ್ಟವಾದ ನಿರ್ದೇಶನವನ್ನು ನೀಡಿದ್ದೇನೆ ಎಂದವರು ತಿಳಿಸಿದರು.

ಈ ನಿಟ್ಟಿನಲ್ಲಿ ಕರ್ತವ್ಯ ಲೋಕ ಎಸಗಿದವರ ವಿರುದ್ಧ ಈಗಾಗಲೇ ಕ್ರಮ ಜರಗಿ ಸಿದ್ದೇವೆ. ಈಗಾಗಲೇ ತಪ್ಪಿತಸ್ಥರ ವಿರುದ್ಧ ದೂರು ದಾಖಲಿಸಿ ದ್ದೇವೆ. ಅವರ ಐದು ವಾಹನಗಳನ್ನು ಸೀಝ್ ಮಾಡಿಕೊಂಡಿದ್ದು, ಅಕ್ರಮ ಮರಳನ್ನೂ ಸಹ ವಶಪಡಿಸಿ ಕೊಂಡಿದ್ದೇವೆ ಎಂದು ಜಿ.ಜಗದೀಶ್ ವಿವರಿಸಿದರು.

ಕರ್ತವ್ಯದಲ್ಲಿ ನಿರ್ಲಕ್ಷ ತೋರಿದ್ದಕ್ಕಾಗಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳ ವಿರುದ್ಧ ಕ್ರಮ ಜರಗಿಸಲು ಲೋಕಾಯುಕ್ತಕ್ಕೆ ಶಿಫಾರಸ್ಸು ಮಾಡಿದ್ದೇವೆ. ನಿನ್ನೆ ಮತ್ತೆ ಮರಳು ದಾಸ್ತಾನು ಕಳ್ಳತನ ಮಾಡಿರುವ ಬಗ್ಗೆ ಹಿರಿಯಯ್ಕ ಠಾಣೆಯಲ್ಲಿ ದೂರು ದಾಖಲಿಸಿಕೊಂಡಿದ್ದೇವೆ ಎಂದರು.

ಅಕ್ರಮ ಮರಳುಗಾರಿಕೆಗೆ ಸಂಬಂಧಿಸಿದಂತೆ ಜಿಲ್ಲೆಯ ಜನತೆಗೆ ಒಂದು ಸಂದೇಶವನ್ನು ಸ್ಪಷ್ಟಪಡಿಸಬೇಕಿದೆ.ಯಾವುದೇ ಕಾರಣಕ್ಕೂ ಜಿಲ್ಲಾಡಳಿತ ಅಕ್ರಮವನ್ನು ಸಹಿಸುವುದಿಲ್ಲ. ಜಿಲ್ಲಾಡಳಿತ ಈ ನಿಟ್ಟಿನಲ್ಲಿ ಈಗಾಗಲೇ ತೆಗೆದುಕೊಂಡ ಕ್ರಮದ ಬಗ್ಗೆ ಸವಿಸ್ತಾಕವಾಗಿ ಲೋಕಾಯುಕ್ತಕ್ಕೆ ಹಾಗೂ ಸರಕಾರಕ್ಕೆ ಮಾಹಿತಿ ನೀಡಿದೆ. ಲೋಕಾಯುಕ್ತ ಮುಂದೆ ತೆಗೆದುಕೊಳ್ಳುವ ಕ್ರಮವನ್ನು ಜಿಲ್ಲಾಡಳಿತ ಸ್ವಾಗತಿಸುತ್ತದೆ. ಯಾವುದೇ ಕಾರಣಕ್ಕೂ ಜಿಲ್ಲೆಯಲ್ಲಿ ಅಕ್ರಮಕ್ಕೆ ಅವಕಾಶ ನೀಡುವುದಿಲ್ಲ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News