ಕೊರೋನ ರೋಗಿಗಳ ಮೇಲೆ ಪತಂಜಲಿ ಔಷಧಿ ಪ್ರಯೋಗ: ಆಸ್ಪತ್ರೆಗೆ ಸರಕಾರದ ನೋಟಿಸ್

Update: 2020-06-26 17:02 GMT

ಜೈಪುರ,ಜೂ.24: ಪತಂಜಲಿ ಆಯುರ್ವೇದ ಸಂಸ್ಥೆಯ ಔಷಧಿ ಕೊರೋನಿಲ್‌ ನ ಪ್ರಾಯೋಗಿಕ ಪರೀಕ್ಷೆಗಳನ್ನು ಕೊರೋನ ವೈರಸ್ ರೋಗಿಗಳ ಮೇಲೆ ನಡೆಸಿದ್ದ ಜೈಪುರದ ರಾಷ್ಟ್ರೀಯ ವೈದ್ಯಕೀಯ ವಿಜ್ಞಾನ ಸಂಸ್ಥೆ (ನಿಮ್ಸ್ ) ಆಸ್ಪತ್ರೆಗೆ ರಾಜಸ್ಥಾನ ಆರೋಗ್ಯ ಇಲಾಖೆಯು ನೋಟಿಸ್ ಜಾರಿಗೊಳಿಸಿದೆ.

   ‘‘ನಿಮ್ಸ್ ಆಸ್ಪತ್ರೆಗೆ ಬುಧವಾರ ಸಂಜೆ ನೋಟಿಸ್ ನೀಡಲಾಗಿದ್ದು, ಮೂರು ದಿನಗಳೊಳಗೆ ಉತ್ತರಿಸುವಂತೆ ತಿಳಿಸಲಾಗಿದೆ. ರೋಗಿಗಳ ಮೇಲೆ ಔಷಧಿಯ ಪ್ರಾಯೋಗಿಕ ಪರೀಕ್ಷೆ ನಡೆಸಲು ಆಸ್ಪತ್ರೆಯು ರಾಜ್ಯ ಸರಕಾರದ ಅನುಮತಿಯನ್ನು ಪಡೆದಿರಲಿಲ್ಲ’’ ಎಂದು ಜೈಪುರದ ಮುಖ್ಯ ವೈದ್ಯಕೀಯ ಹಾಗೂ ಆರೋಗ್ಯ ಅಧಿಕಾರಿ ನರೋತ್ತಮ ಶರ್ಮಾ ತಿಳಿಸಿದ್ದಾರೆ.

ಈ ಬಗ್ಗೆ ಜೈಪುರದ ನಿಮ್ಸ್‌ನ ಉತ್ತರಕ್ಕಾಗಿ ಕಾಯಲಾಗುತ್ತಿದೆ ಎಂದವರು ತಿಳಿಸಿದ್ದಾರೆ. ಪತಂಜಲಿ ಬಿಡುಗಡೆಗೊಳಿಸಿರುವ ಕೊರೋನಿಲ್ ಹಾಗೂ ಶ್ವಾಸರಿ ಎಂಬ ಔಷಧಿಗಳು ಕೊರೋನ ಸೋಂಕನ್ನು ಗುಣಪಡಿಸುವ ಸಾಮರ್ಥ್ಯವನ್ನು ಹೊಂದಿರುವುದಾಗಿ ಬಾಬಾರಾಮ್ ದೇವ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಈ ಔಷಧಿಯನ್ನು ದೇಶದ ವಿವಿಧ ಆಸ್ಪತ್ರೆಗಳಲ್ಲಿ ಯಶಸ್ವಿಯಾಗಿ ಪರೀಕ್ಷಿಸಲಾಗಿದೆಯೆಂದು ಅವರು ಹೇಳಿದ್ದರು.

  ಕೊರೋನಿಲ್ ಔಷಧಿಯ ಬಗ್ಗೆ ಮಂಗಳವಾರ ಆಯುಷ್ ಸಚಿವಾಲಯ ಬಾಬಾ ರಾಮ್‌ದೇವ್ ಅವರ ಪತಂಜಲಿ ಸಂಸ್ಥೆಯಿಂದ ಮಾಹಿತಿಯನ್ನು ಕೇಳಿತ್ತು ಹಾಗೂ ಈ ಔಷಧಿಯು ಕೊರೋನ ವೈರಸ್ ಸೋಂಕನ್ನು ಗುಣಪಡಿಸಬಲ್ಲದು ಎಂದು ಜಾಹೀರಾತು ನೀಡುವುದನ್ನು ನಿಷೇಧಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News