×
Ad

ಪಡುಬಿದ್ರೆ ಬೀಚ್‍ನ್ನು ರಾಜ್ಯದಲ್ಲೇ ಮಾದರಿಯಾಗಿ ಅಭಿವೃದ್ಧಿಗೊಳಿಸಲಾಗುವುದು : ಮಹೇಶ್ವರ ರಾವ್

Update: 2020-06-26 22:59 IST

ಕಾಪು : ಬ್ಲೂ ಫ್ಲಾಗ್ ಯೋಜನೆಯಡಿ ಪಡುಬಿದ್ರಿ ಬೀಚ್‍ನ್ನು ರಾಜ್ಯದಲ್ಲೇ ಮಾದರಿಯಾಗಿ ಅಭಿವೃದ್ಧಿಗೊಳಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮಹೇಶ್ವರ ರಾವ್ ಹೇಳಿದರು.

ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅನುಷ್ಠಾನ ಹಂತದಲ್ಲಿರುವ ಸರ್ಕಾರದ ವಿವಿಧ ಯೋಜನೆಗಳ ಪುನರ್ ಪರಿಶೀಲನೆ ನಡೆಸಿ ಮಾತನಾಡಿದರು. ಕಾಪು ತಾಲೂಕಿನಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಈಗಾಗಲೇ 3 ಕೋಟಿ ರೂ. ಅನುದಾನ ಮಂಜೂರಾಗಿದೆ. 6 ಕೋಟಿ ರೂಪಾಯಿ ವೆಚ್ಚದ ಹೊಸ ಯೋಜನೆಯೂ ಸಿದ್ದಗೊಳ್ಳುತ್ತಿದೆ. ಈ ಯೋಜನೆಗಳಡಿ ಪಡುಬಿದ್ರಿ ಮತ್ತು ಕಾಪು ಬೀಚ್‍ಗಳನ್ನು ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದೆ ಎಂದರು.

ಹೆಜಮಾಡಿ ಬಂದರು, ಕಾಪು ಬೀಚ್, ಕಾಪು ಮಿನಿ ವಿಧಾನಸೌಧ ಮತ್ತು ಬೃಹತ್ ಕುಡಿಯುವ ನೀರಿನ ಯೋಜನೆ ಮಂಜೂರಾಗಿದ್ದು, ಈ ಯೋಜನೆಗಳು ಅನುಷ್ಠಾನ ಹಂತದಲ್ಲಿದೆ. ರಾಜ್ಯ ಸರ್ಕಾರದ ಸೂಚನೆಯ ಮೇರೆಗೆ ಈ ಕಾಮಗಾರಿಗಳನ್ನು ಮುಂದುವರಿಸಲು ಪರಿಶೀಲನೆಗಾಗಿ ಇಲ್ಲಿಗೆ ಭೇಟಿ ನೀಡಿರುವುದಾಗಿ ಅವರು ತಿಳಿಸಿದರು.

ಶಾಸಕ ಲಾಲಾಜಿ ಆರ್. ಮೆಂಡನ್ ಮಾತನಾಡಿ, ಕಾಪು ಕ್ಷೇತ್ರದಲ್ಲಿ ಹಲವಾರು ಯೋಜನೆಗಳು ಅನುಷ್ಟಾನ ಹಂತದಲ್ಲಿವೆ. ಹಿಂದಿನ ಯೋಜನೆ ಗಳ ಜೊತೆಗೆ ಹೊಸ ಯೋಜನೆಗಳ ಅನುಷ್ಠಾನಕ್ಕೆ ರಾಜ್ಯ ಹಣಕಾಸು ಇಲಾಖೆಯ ಮಂಜೂರಾತಿ ಅಗತ್ಯವಿದೆ. , ಅದಕ್ಕಾಗಿ ಪುನರ್ ಪರಿಶೀಲನೆ ನಡೆಸಿದ್ದು, ಶೀಘ್ರ ಈ ಯೋಜನೆಗಳು ಅನುಷ್ಟಾನ ಗೊಳ್ಳುವ ನಿರೀಕ್ಷೆಯಿದೆ ಎಂದರು.

ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್, ಉಡುಪಿ ಜಿಲ್ಲಾ ಪಂ. ಸದಸ್ಯೆ ಶಿಲ್ಪಾ ಜಿ. ಸುವರ್ಣ, ಕಾಪು ತಹಶೀಲ್ದಾರ್ ಮಹಮ್ಮದ್ ಇಸಾಕ್, ಕಾಪು ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ್ ನಾವಡ, ಪುರಸಭೆ ಸದಸ್ಯ ಅನಿಲ್ ಕುಮಾರ್, ಮಮತಾ ಕೆ. ಸಾಲ್ಯಾನ್, ಕಾಪು ಕಂದಾಯ ಪರಿವೀಕ್ಷಕ ಕೆ. ರವಿ ಶಂಕರ್, ಉಪ ತಹಶಿಲ್ದಾರ್ ಚಂದ್ರಹಾಸ ಬಂಗೇರ, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಚಂದ್ರಶೇಖರ ನಾಯಕ್, ಮೆಸ್ಕಾಂ ಅಧಿಕಾರಿ ಹರೀಶ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News