ಹುಷಾರ್... ಗ್ರಾಮೀಣ ಭಾರತದ ಮೂವರು ವೈದ್ಯರಲ್ಲಿ ಇಬ್ಬರು ನಕಲಿ!

Update: 2020-06-27 05:00 GMT

ಹೊಸದಿಲ್ಲಿ, ಜೂ.27: ಗ್ರಾಮೀಣ ಪ್ರದೇಶದ ಪ್ರತಿ ಮೂವರು ವೈದ್ಯರ ಪೈಕಿ ಯಾವುದೇ ವೈದ್ಯಕೀಯ ಶಿಕ್ಷಣದ ಅರ್ಹತೆ ಇಲ್ಲದ ನಕಲಿ ವೈದ್ಯರು ಅಥವಾ ಆಧುನಿಕ ವೈದ್ಯಪದ್ಧತಿಯ ಗಂಧಗಾಳಿಯೂ ಗೊತ್ತಿಲ್ಲದವರು ಎನ್ನುವ ಆತಂಕಕಾರಿ ಅಂಶ ಸಮೀಕ್ಷೆಯೊಂದರಿಂದ ಬಹಿರಂಗವಾಗಿದೆ. ಸಾರ್ವಜನಿಕ ಮತ್ತು ಖಾಸಗಿ ಆರೋಗ್ಯಸೇವಾ ಲಭ್ಯತೆ ಮತ್ತು ಗುಣಮಟ್ಟದ ಬಗ್ಗೆ ನಡೆದ ಭಾರತದ ಮೊಟ್ಟಮೊದಲ ಸಮಗ್ರ ಸಮೀಕ್ಷೆಯಲ್ಲಿ ಈ ವೈದ್ಯರ ವೈದ್ಯಕೀಯ ಜ್ಞಾನವನ್ನು ಮೌಲ್ಯಮಾಪನ ಮಾಡಲಾಗಿದೆ.

ದೇಶದಲ್ಲಿ ಶೇಕಡ 75ರಷ್ಟು ಗ್ರಾಮಗಳಲ್ಲಿ ಕನಿಷ್ಠ ಒಬ್ಬ ವೈದ್ಯರಿದ್ದು, ಸರಾಸರಿ ಪ್ರತಿ ಗ್ರಾಮದಲ್ಲಿ ಮೂವರು ವೈದ್ಯರಿದ್ದಾರೆ. ಈ ಪೈಕಿ ಶೇಕಡ 86ರಷ್ಟು ಮಂದಿ ಖಾಸಗಿ ವೈದ್ಯರು ಹಾಗೂ 68% ಮಂದಿಗೆ ಯಾವುದೇ ಔಪಚಾರಿಕ ವೈದ್ಯಕೀಯ ತರಬೇತಿ ಇಲ್ಲ ಎನ್ನುವುದು 2019ರಲ್ಲಿ 19 ರಾಜ್ಯಗಳ 1,519 ಗ್ರಾಮಗಳಲ್ಲಿ ಸೆಂಟರ್ ಫಾರ್ ಪಾಲಿಸಿ ರೀಸರ್ಚ್ (ಪಿಸಿಆರ್) ನಡೆಸಿದ ಸಮೀಕ್ಷೆಯಿಂದ ದೃಢಪಟ್ಟಿದೆ. ಈ ಅಧ್ಯಯನ ವರದಿಯನ್ನು ಸೋಶಿಯಲ್ ಸೈನ್ಸ್ ಆ್ಯಂಡ್ ಮೆಡಿಸಿನ್ ನಿಯತಕಾಲಿಕದಲ್ಲಿ ಪ್ರಕಟಿಸಲಾಗಿದೆ.

ಇದಕ್ಕೂ ಮುನ್ನ 2016ರಲ್ಲಿ ವಿಶ್ವ ಆರೋಗ್ಯಸಂಸ್ಥೆ ನಡೆಸಿದ ದ ಹೆಲ್ತ್ ವರ್ಕ್‌ಫೋರ್ಸ್ ಇನ್ ಇಂಡಿಯಾ ಅಧ್ಯಯನದಲ್ಲಿ, ಅಲೋಪಥಿಕ್ ಚಿಕಿತ್ಸೆ ನೀಡುವ ಶೇಕಡ 57.3ರಷ್ಟು ವೈದ್ಯರಿಗೆ ವೈದ್ಯಕೀಯ ಅರ್ಹತೆಗಳಿಲ್ಲ ಎನ್ನುವುದು ದೃಢಪಟ್ಟಿತ್ತು. ಜತೆಗೆ ಶೇಕಡ 31.4ರಷ್ಟು ವೈದ್ಯರು ಸೆಕೆಂಡರಿ ಶಾಲಾ ಶಿಕ್ಷಣವಷ್ಟೇ ಪಡೆದಿದ್ದಾರೆ ಎಂದು ವರದಿ ಹೇಳಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News