‘ಭಾರತದ ಜಾರ್ಜ್ ಫ್ಲಾಯ್ಡ್ ಗಳು’: ತಮಿಳುನಾಡು ಕಸ್ಟಡಿ ಸಾವು ಪ್ರಕರಣದ ವಿರುದ್ಧ ಭಾರೀ ಆಕ್ರೋಶ

Update: 2020-06-27 09:08 GMT

ಚೆನ್ನೈ: ತಮಿಳುನಾಡಿನ ತೂತುಕುಡಿಯಲ್ಲಿ ಪೊಲೀಸ್ ದೌರ್ಜನ್ಯದಿಂದ ಪಿ ಜಯರಾಜ್ ಮತ್ತವರ ಪುತ್ರ ಬೆನಿಕ್ಸ್ ಸಾವನ್ನಪ್ಪಿದ ಘಟನೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸೆಲೆಬ್ರಿಟಿಗಳು, ಜನರು, ರಾಜಕೀಯ ನಾಯಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಗುಜರಾತ್ ನ ಪಕ್ಷೇತರ ಶಾಸಕ ಜಿಗ್ನೇಶ್ ಮೇವಾನಿ  ಈ ಘಟನೆಯನ್ನು ಅಮೆರಿಕಾದಲ್ಲಿನ ಜಾರ್ಜ್ ಫ್ಲಾಯ್ಡ್ ಹತ್ಯೆ ಘಟನೆಗೆ ಹೋಲಿಸಿ ಟ್ವೀಟ್ ಮಾಡಿದ್ದಾರೆ. 

ಲಾಕ್ ಡೌನ್ ಅವಧಿ ನಂತರವೂ ತಮ್ಮ ಮೊಬೈಲ್ ಫೋನ್ ಮಳಿಗೆ ತೆರೆದಿಟ್ಟಿದ್ದರು ಎಂಬ ಕಾರಣಕ್ಕೆ ಪೊಲೀಸರಿಂದ ಬಂಧಿಸಲ್ಪಟ್ಟ ನಾಲ್ಕು ದಿನಗಳ ನಂತರ ಬೆನಿಕ್ಸ್ ಹಾಗೂ ಜಯರಾಜ್ ಮೃತಪಟ್ಟಿದ್ದರು. ಅವರ ಮೇಲೆ ನಡೆಸಲಾದ ಅಮಾನುಷ ದೌರ್ಜನ್ಯದಿಂದ ಸಾವನ್ನಪ್ಪಿದ್ದಾರೆಂದು ಅವರ ಕುಟುಂಬ ಆರೋಪಿಸಿತ್ತು.

“ಪ್ರೀತಿಯ ಬಾಲಿವುಡ್ ಸೆಲೆಬ್ರಿಟಿಗಳೇ, ತಮಿಳುನಾಡಿನಲ್ಲಿ ಏನು ನಡೆದಿದೆಯೆಂಬುದನ್ನು ಕೇಳಿದ್ದೀರಾ ಅಥವಾ ನಿಮ್ಮ ಇನ್‍ ಸ್ಟಾಗ್ರಾಂ ಹೋರಾಟ ಕೇವಲ ಇತರ ದೇಶಗಳ ವಿಚಾರಗಳಿಗೆ ಸೀಮಿತವೇ?, ಭಾರತದ ಜಾರ್ಜ್ ಫ್ಲಾಯ್ಡ್‍ ಗಳು ಬಹಳಷ್ಟಿದ್ದಾರೆ. ಇಂತಹ ಪೊಲೀಸ್ ಹಿಂಸೆ ಹಾಗೂ ಲೈಂಗಿಕ ದೌರ್ಜನ್ಯದ ಕಥೆ ಎದೆಯನ್ನೇ ಒಡೆಯುವಂತಿದೆ'' ಎಂದು ಮೇವಾನಿ ಟ್ವೀಟ್ ಮಾಡಿದ್ದಾರೆ.

ಕ್ರಿಕೆಟಿಗ ಶಿಖರ್ ಧವನ್ ಟ್ವೀಟ್ ಮಾಡಿ “ತಮಿಳುನಾಡಿನಲ್ಲಿ ಜಯರಾಜ್ ಮತ್ತು ಬೆನಿಕ್ಸ್ ಅವರ ಮೇಲೆ ನಡೆದ ದೌರ್ಜನ್ಯದ ಸುದ್ದಿ ಓದಿ ಆಘಾತವಾಯಿತು. ನಾವು ನಮ್ಮ ದನಿಯೆತ್ತಿ ಅವರ ಕುಟುಂಬಕ್ಕೆ ನ್ಯಾಯವೊದಗಿಸಬೇಕು” ಎಂದಿದ್ದಾರೆ.

“ಯಾರೂ ಕಾನೂನಿಗಿಂತ ಮಿಗಿಲಲ್ಲ, ಈ ಅಮಾನವೀಯ ಕೃತ್ಯದ ಕುರಿತಂತೆ ನ್ಯಾಯ ದೊರಕಬೇಕು'' ಎಂದು ತಮಿಳು ನಟ ಜಯಂ ರವಿ ಟ್ವೀಟ್ ಮಾಡಿದ್ದಾರೆ.

ಘಟನೆಯ ಬಗ್ಗೆ ಎಲ್ಲೆಡೆ ಆಕ್ರೋಶ ಮೂಡಿರುವಂತೆಯೇ  ಇಬ್ಬರು ಎಸ್ಸೈಗಳ ಸಹಿತ ನಾಲ್ಕು ಮಂದಿ ಪೊಲೀಸರನ್ನು ಅಮಾನತುಗೊಳಿಸಲಾಗಿದೆ. ಟ್ಯುಟಿಕೊರಿನ್‍ ನಲ್ಲಿ ಶುಕ್ರವಾರ ಬೃಹತ್ ಪ್ರತಿಭಟನೆಯೂ ನಡೆದು ಅಂಗಡಿಮುಂಗಟ್ಟುಗಳು ಬಂದ್ ಆಗಿದ್ದವು. ಘಟನೆಗೆ ಸಂತಾಪ ಸೂಚಿಸಿದ ಮುಖ್ಯಮಂತ್ರಿ  ಇ ಕೆ ಪಳನಿಸ್ವಾಮಿ ಕುಟುಂಬಕ್ಕೆ ರೂ 20 ಲಕ್ಷ ಪರಿಹಾರ ಹಾಗೂ ಒಬ್ಬ ಸದಸ್ಯನಿಗೆ ಉದ್ಯೋಗ ಘೋಷಿಸಿದ್ದಾರೆ.

ಮದ್ರಾಸ್ ಹೈಕೋರ್ಟಿನ ಮಧುರೈ ಪೀಠ ಈ ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News