ಕೊಣಾಜೆ: ಮೂಕ ಪ್ರಾಣಿಯ ನೋವಿಗೆ ಸ್ಪಂದಿಸಿದ ಯುವಕರು

Update: 2020-06-27 12:54 GMT

ಕೊಣಾಜೆ: ಕಳೆದ ಕೆಲವು ತಿಂಗಳಿಂದ ಕಾಲು‌ ನೋವಿನಿಂದ ಬಳಲುತ್ತಿದ್ದ ಹಾಗು ನಡೆದಾಡಲೂ‌ ಕಷ್ಟ ಪಡುತ್ತಿದ್ದ ಹೋರಿಯೊಂದಕ್ಕೆ ನಡುಪದವಿನ ಯುವಕರು ಪ್ರಥಮ ಚಿಕಿತ್ಸೆ‌ ನೀಡಿ ಮಾನವೀಯತೆ ಮೆರೆದಿದ್ದಾರೆ.

ಕಾಲು ನೋವಿನಿಂದ ಹೋರಿಯ ಪಾದದಲ್ಲಿ ಹುಳಗಳೂ ಆಗಿ ಹೋರಿ ನೋವಿನಿಂದಲೇ ಹೆಜ್ಜೆಯಿಡುತ್ತಿತ್ತು. ಕುಂಟುತ್ತಾ ಹೋಗುತ್ತಿದ್ದ ಈ ಮೂಕ ಪ್ರಾಣಿಯ ವೇದನೆಯನ್ನು ಕಂಡು ಹಲವರು ಸಾಮಾಜಿಕ ಜಾಲತಾಣದ ಮೂಲಕ ಚಿಕಿತ್ಸೆಗಾಗಿ‌ ಭಿನ್ನವಿಸಿದರೂ ಯಾರಿಂದಲೂ ಸೂಕ್ತ ಸ್ಪಂದನೆಯು ಸಿಕ್ಕಿರಲಿಲ್ಲ.

ಯುವಕರಿಂದ ಸ್ಪಂದನೆ

ಕಾಲು ನೋವಿನಿಂದ ಕುಂಟುತ್ತಿದ್ದ ಹೋರಿಯನ್ನು ಗಮನಿಸಿದ ನಡುಪದವಿನ ಯುವಕರು ಅದಕ್ಕೆ  ಸೂಕ್ತ ಚಿಕಿತ್ಸೆ ನೀಡಿದ್ದಾರೆ. ಹೋರಿಯ ಪಾದಗಳು ಸಂಪೂರ್ಣವಾಗಿ ಕೊಳೆತು ಹೋಗಿ ಅದರಲ್ಲಿ ಹುಳಗಳು ಆಗಿದ್ದು ಅದನ್ನು ಯುವಕರೇ ಸ್ವಚ್ಛಗೊಳಿಸಿ ಪ್ರಾಥಮಿಕ‌ ಚಿಕಿತ್ಸೆ ನೀಡಿ ಬಳಿಕ ಪಶು ವೈದ್ಯರನ್ನು ಸಂಪರ್ಕಿಸಿದ್ದಾರೆ. ಅಲ್ಲದೆ‌ ಹೋರಿ ಗುಣಮುಖವಾಗುವವರೆಗೂ ಚಿಕಿತ್ಸೆ ಮುಂದುವರಿಸುತ್ತೇವೆ ಎಂದು ಯುವಕರು ತಿಳಿಸಿದ್ದಾರೆ.

ಅಬ್ಬಾಸ್, ಅನ್ವರ್,  ಇಸ್ಮಾಯಿಲ್, ಫೈರೋಝ್, ಆರಿಫ್, ರಿಯಾಝ್ ದುಬೈ, ನಝುರ್, ಅನ್ಸಾರ್, ಮುಸ್ತಫಾ, ಸಮೀರ್, ಆಶಿಕ್  ಸೇರಿದಂತೆ  ಆರ್ಯನ್ಸ್ ತಂಡ, ಹಾರ್ಬರ್ಸ್ ತಂಡದ ಯುವಕರು ಸಹಕಾರ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News