×
Ad

ಟಿ.ಆರ್.ಎಫ್ ವತಿಯಿಂದ ಗೂಡಂಗಡಿ ವ್ಯಾಪಾರಿಗಳಿಗೆ ದಿನಬಳಕೆಯ ಸಾಮಾನು ವಿತರಣಾ ಕಾರ್ಯಕ್ರಮ

Update: 2020-06-27 19:40 IST

ಮಂಗಳೂರು, ಜೂ. 27: ಸ್ವ ಉದ್ಯೋಗಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಮುಂಚೂಣಿಯಲ್ಲಿರುವ ‘ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್’ನ ವತಿಯಿಂದ ಗೂಡಂಗಡಿ ವ್ಯಾಪಾರಿಗಳಿಗೆ ಗ್ರಾಹಕರ ದಿನಬಳಕೆಯ ಸಾಮಾನುಗಳ ವಿತರಣಾ ಕಾರ್ಯಕ್ರಮವು ನಗರದ ಕಂಕನಾಡಿಯಲ್ಲಿರುವ ಟಿಆರ್‌ಎಫ್ ಸಭಾಂಗಣದಲ್ಲಿ ಶನಿವಾರ ನಡೆಯಿತು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಎಕ್ಸ್ ಪರ್ಟೈಸ್ ಕಾಂಟ್ರಾಕ್ಟಿಂಗ್ ಕಂಪೆನಿಯ ಆಡಳಿತ ನಿರ್ದೇಶಕ ಕೆ.ಎಸ್. ಶೇಖ್ ಕರ್ನಿರೆ, ಹಲವು ವಿನೂತನ ಯೋಜನೆ ಮತ್ತು ಕಾರ್ಯಕ್ರಮಗಳ ಮೂಲಕ ಮನೆಮಾತಾಗಿರುವ ಟಿಆರ್‌ಎಫ್ ಸಂಸ್ಥೆಯು ಅರ್ಹ ಫಲಾನುಭವಿಗಳನ್ನೇ ಆಯ್ಕೆ ಮಾಡಿ ಅವರನ್ನು ಪ್ರೋತ್ಸಾಹಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ. ಟಿಆರ್‌ಎಫ್ ಸಂಸ್ಥೆಯ ಸೇವಾ ಕಾರ್ಯವು ಇತರ ಸಮಾಜ ಸೇವಾ ಸಂಸ್ಥೆಗಳಿಗೆ ಮಾದರಿಯಾಗಲಿ ಎಂದರು.

ಡೆಕ್ಕನ್ ಪ್ಲಾಸ್ಟ್ ಇಂಡಸ್ಟ್ರೀಸ್‌ನ ಆಡಳಿತ ನಿರ್ದೇಶಕ ಅಸ್ಗರ್ ಅಲಿ ಮಾತನಾಡಿ ‘ನಾವೆಲ್ಲಾ ಉದ್ಯಮ ರಂಗದಲ್ಲಿ ತಳವೂರಲು ನಮ್ಮ ಪ್ರಾಮಾಣಿಕತೆಯೇ ಕಾರಣವಾಗಿದೆ. ಉದ್ಯಮದಲ್ಲಿ ಏನಾದರೊಂದು ಸಾಧಿಸಬೇಕು ಎಂಬ ಗುರಿ ಇತ್ತೇ ವಿನಃ ನಮಗೆ ಮಾರ್ಗದರ್ಶಕರು ಅಥವಾ ಪ್ರೋತ್ಸಾಹಿಸುವವರು ಯಾರೂ ಇರಲಿಲ್ಲ. ಆದರೆ ಈಗ ಹಾಗಲ್ಲ. ಅರ್ಹರನ್ನು ಗುರುತಿಸಿ ಪ್ರೋತ್ಸಾಹಿಸುವವರು ಮತ್ತು ಬೆಂಬಲಿಸುವವರ ಸಂಖ್ಯೆ ಸಾಕಷ್ಟಿದೆ. ಇಂದಿನ ಫಲಾನುಭವಿಗಳು ಇಲ್ಲಿ ಲಭಿಸಿದ ಸಾಮಾನುಗಳನ್ನು ಮೂಲ ಬಂಡವಾಳವಾಗಿ ವ್ಯಾಪಾರದಲ್ಲಿ ಬಳಸಬೇಕು ಮತ್ತು ವ್ಯಾಪಾರದಲ್ಲಿ ಪ್ರಗತಿ ಹೊಂದಲು ಶ್ರಮಿಸಬೇಕು’ ಎಂದು ಕರೆ ನೀಡಿದರು.

ಮಾಸುನ್ ಟೈಲ್ಸ್ ಆ್ಯಂಡ್ ಗ್ರಾನೈಟ್ಸ್‌ನ ಆಡಳಿತ ನಿರ್ದೇಶಕ ಮುನೀರ್ ಮೊಯ್ದಿನ್, ಭಾರತೀಯ ಮಾನವ ಹಕ್ಕುಗಳ ಸಂರಕ್ಷಣಾ ವೇದಿಕೆ ಬಂಟ್ವಾಳ ತಾಲೂಕು ಇದರ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಎಂ.ಎಂ. ಇಬ್ರಾಹೀಂ ಮೋನು ನಂದಾವರ ಭಾಗವಹಿಸಿದ್ದರು. ಟಿಆರ್‌ಎಫ್ ಸ್ಥಾಪಕಾಧ್ಯಕ್ಷ ಅಬ್ದುರ್ರವೂಫ್ ಪುತ್ತಿಗೆ ಅಧ್ಯಕ್ಷತೆ ವಹಿಸಿದ್ದರು.

ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದ ಟಿಆರ್‌ಎಫ್ ಅಧ್ಯಕ್ಷ ರಿಯಾಝ್ ಕಣ್ಣೂರು ಗೂಡಂಗಡಿ ವ್ಯಾಪಾರ ಮಾಡುವವರ ಪೈಕಿ ಸುಮಾರು 120ಕ್ಕೂ ಅರ್ಜಿಗಳು ಬಂದಿತ್ತು. ಆ ಪೈಕಿ ಇಂದು 45 ಮಂದಿಗೆ ತಲಾ 7 ಸಾವಿರ ರೂ. ಮೌಲ್ಯದ ಸಾಮಾನನ್ನು ವಿತರಿಸಿದರೆ, ಉಳಿದವರಿಗೆ ಹಂತ ಹಂತವಾಗಿ ಕೊಡಲಾಗುವುದು. ಶನಿವಾರದ ಫಲಾನುಭವಿಗಳ ಪೈಕಿ ವಿಧವೆಯರು ಮತ್ತು ವಿಕಲಚೇತನರು ಅಧಿಕ ಸಂಖ್ಯೆಯಲ್ಲಿದ್ದರು. ಈ ಯೋಜನೆಗೆ ಉದ್ಯಮಿ ಕೆಎಸ್ ಸೈಯದ್ ಹಾಜಿ ಕರ್ನಿರೆ ಮತ್ತಿತರರು ಸಾಕಷ್ಟು ಸಹಕಾರ ನೀಡಿದ್ದರು ಎಂದರು.

ಹಮೀದ್ ಕಣ್ಣೂರು ಕಾರ್ಯಕ್ರಮ ನಿರೂಪಿಸಿದರು. ನಕಾಶ್ ಬಾಂಬಿಲ ವಂದಿಸಿದರು. ಮಜೀದ್ ತುಂಬೆ ಮತ್ತು ಹಕೀಂ ಸಹಕರಿಸಿದ್ದರು. ಸುರಕ್ಷಿತ ಅಂತರ, ಕಡ್ಡಾಯ ಮಾಸ್ಕ್ ಧರಿಸುವಿಕೆ ಇತ್ಯಾದಿ ಕೋವಿಡ್-19 ನಿಯಮಾವಳಿಯನ್ನು ಪಾಲಿಸಿ ಕಾರ್ಯಕ್ರಮ ನಡೆಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News