ಪ್ರಶಸ್ತಿ ಪುರಸ್ಕಾರ ಕಲಾವಿದರಲ್ಲಿ ಹೊಸ ಚೈತನ್ಯ ಮೂಡಿಸುತ್ತದೆ : ಚಂದ್ರನಾಥ ಬಜಗೋಳಿ

Update: 2020-06-27 14:48 GMT

ಕಾರ್ಕಳ, ಜೂ.27: ಹೆಚ್ಚಿನ ಪುರಸ್ಕಾರಗಳು ಕಲಾವಿದರಲ್ಲಿ ಇನ್ನಷ್ಟು ಹೆಚ್ಚಿನ ಕಲಾ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಹೊಸ ಚೈತನ್ಯವನ್ನು ಮೂಡಿಸುತ್ತವೆ ಎಂದು ಕಾರ್ಕಳದ ಶಾಸಕ ವಿ.ಸುನಿಲ್ ಕುಮಾರ್ ಅಭಿಪ್ರಾಯ ಪಟ್ಟಿದ್ದಾರೆ.

ಕಾರ್ಕಳದ ಶಿರಡಿ ಸಾಯಿಮಂದಿರದಲ್ಲಿ ಶನಿವಾರ, ಮುದ್ರಾಡಿ ನಮ ತುಳುವೆರ್ ಕಲಾ ಸಂಘಟನೆ, ಸಂಸ ಥಿಯೇಟರ್ ಮತ್ತು ಅವಿರತ ಪುಸ್ತಕ ಬೆಂಗಳೂರು ಆರ್ಟ್ ಫೌಂಡೇಶನ್ ವತಿಯಿಂದ ನೀಡುವ ಸಿಜಿಕೆ-2020 ಪ್ರಶಸ್ತಿಯನ್ನು ಕಲಾವಿದ, ರಂಗ ನಿರ್ದೇಶಕ ಬಜಗೋಳಿಯ ಚಂದ್ರನಾಥ ಬಜಗೋಳಿ ಅವರಿಗೆ ಪ್ರದಾನ ಮಾಡಿ ಅವರು ಮಾತನಾಡುತಿದ್ದರು.

ಹಳ್ಳಿಗಾಡಿನ ಪ್ರತಿಭೆಗಳು ಇನ್ನಷ್ಟು ಗಟ್ಟಿಗೊಳ್ಳಬೇಕು. ಅವರಿಗೆ ಇನ್ನಷ್ಟು ಅವಕಾಶಗಳು ದೊರೆಯುವಂತಾಗಬೇಕು ಎಂದ ಸುನಿಲ್‌ಕುಮಾರ್, ಚಂದ್ರನಾಥ ಬಜಗೋಳಿ ಅವರ ಕಲಾಕ್ಷೇತ್ರದ ಕಾರ್ಯ ಚಟುವಟಿಕೆಗಳನ್ನು ಶ್ವಾಘಿಸಿದರು.

2020ನೇ ಸಾಲಿನ ಸಿಜಿಕೆ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಕಳೆದ 24 ವರ್ಷ ಗಳಿಂದ ಚಿತ್ರಕಲೆ ಮತ್ತು ರಂಗಭೂಮಿ ಸೇವೆ ಮಾಡುತ್ತಿರುವ ಚಂದ್ರನಾಥ ಬಜಗೋಳಿ, ಪ್ರಶಸ್ತಿ ನನ್ನ ವಿದ್ಯಾರ್ಥಿಗಳಿಗೆ ಮತ್ತು ನನ್ನನ್ನು ಪ್ರೀತಿಯಿಂದ ಬೆಳೆಸಿದ ಅಭಿಮಾನಿಗಳಿಗೆ ಅರ್ಪಿಸುತ್ತೇನೆ. ಕಲಾವಿದರು ಯಾವುದೇ ನಿರೀಕ್ಷೆಗಳನ್ನು ಇಟ್ಟುಕೊಂಡು ಕೆಲಸ ಮಾಡಬಾರದು. ನಿರೀಕ್ಷೆ ನಿಮಗೆ ದು:ಖವನ್ನು ನೀಡುತ್ತದೆ ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುದ್ರಾಡಿಯ ಧರ್ಮಯೋಗಿ ಮೋಹನ್ ಪಾತ್ರಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಡಿ.ಆರ್.ರಾಜು, ಸಾಯಿ ಮಂದಿರದ ಅಧ್ಯಕ್ಷ ಚಂದ್ರಹಾಸ ಸುವರ್ಣ ಹಾಗೂ ವಿಜಯ ಶೆಟ್ಟಿ ಉಪಸ್ಥಿತರಿದ್ದರು.

ನಮ ತುಳುವೆರ್ ಕಲಾ ಸಂಘಟನೆಯ ಅಧ್ಯಕ್ಷ ಸುಕುಮಾರ್ ಮೋಹನ್ ಅತಿಥಿಗಳನ್ನು ಸ್ವಾಗತಿಸಿ, ಕೊನೆಯಲ್ಲಿ ವಂದಿಸಿದರು. ರಿತಿಕಾ ಸಾಲಿಯಾನ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News