×
Ad

ನರೇಗಾ ಯೋಜನೆಯಲ್ಲಿ ಗುರಿ ಸಾಧನೆ: ಉಡುಪಿ ಜಿಲ್ಲೆಗೆ ನಾಲ್ಕನೆ ಸ್ಥಾನ

Update: 2020-06-27 20:21 IST

ಉಡುಪಿ, ಜೂ.27: ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ (ನರೇಗಾ) ಯೋಜನೆಯಲ್ಲಿ ಗುರಿ ಮುಟ್ಟುವ ಸಾಧನೆ ಮಾಡುವ ಮೂಲಕ ಉಡುಪಿ ಜಿಲ್ಲೆ ಇಡೀ ರಾಜ್ಯದಲ್ಲಿ ನಾಲ್ಕನೆ ಸ್ಥಾನ ಪಡೆದುಕೊಂಡಿದೆ.

ಈ ಸಂಬಂಧ ಗ್ರಾಮೀಣ ಅಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ರಾಜ್ಯ ಮಟ್ಟದ ಜೂನ್ ತಿಂಗಳಿನ ಜಿಲ್ಲಾವಾರು ರ್ಯಾಂಕಿಂಗ್ ಪಟ್ಟಿ ಯನ್ನು ಬಿಡುಗಡೆಗೊಳಿಸಿದೆ. ಇದರಲ್ಲಿ ಬಳ್ಳಾರಿ ಪ್ರಥಮ, ರಾಮನಗರ ದ್ವಿತೀಯ, ಉತ್ತರ ಕನ್ನಡ ತೃತೀಯ ಸ್ಥಾನದಲ್ಲಿವೆ.

ನರೇಗಾ ಯೋಜನೆಯಲ್ಲಿ ಜಿಲ್ಲಾ ಮಟ್ಟದಲ್ಲಿ ನೀಡಲಾದ ಮಾನವ ಶ್ರಮದ ಗುರಿ, ಕೆಲಸದ ಅವಧಿ, ಅನುಷ್ಠಾನ ಇಲಾಖೆಗಳ ಅಭಿವೃದ್ಧಿ, ಜಿಯೋ ಟ್ಯಾಗಿಂಗ್, ಕೂಲಿ ಮತ್ತು ಸಾಮಾಗ್ರಿಗಳ ಅನುಪಾತ 60:40 ಮಿತಿ ಕಾಯ್ದು ಕೊಂಡ ಜಿಲ್ಲೆಗಳು ರ್ಯಾಂಕಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿವೆ.

ಉಡುಪಿ ಜಿಲ್ಲೆಯಲ್ಲಿ ನರೇಗಾದಲ್ಲಿ 15,147 ಮಂದಿ ಉದ್ಯೋಗ ಪಡೆದು ಕೊಂಡಿದ್ದು, 2020-21ನೇ ಸಾಲಿನಲ್ಲಿ ಇಲಾಖೆಯು 5.12 ಲಕ್ಷ ಮಾನವ ದಿನದ ಗುರಿಯನ್ನು ಹೊಂದಿದೆ. ಅದರಲ್ಲಿ ಈಗಾಗಲೇ 1.63 ಲಕ್ಷ ಮಾನವ ದಿನದ ಗುರಿಯನ್ನು ಸಾಧಿಸಿದೆ. ಈ ಮೂಲಕ ವಾರ್ಷಿಕ ಗುರಿಯಲ್ಲಿ ಶೇ.60 ರಷ್ಟು ಸಾಧನೆ ಮಾಡಲಾಗಿದೆ ಎಂದು ಉಡುಪಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಕಿರಣ್ ಪಡ್ನೆಕರ್ ತಿಳಿಸಿದ್ದಾರೆ.

ಕೊರೊನಾ ಲಾಕ್‌ಡೌನ್ ಪರಿಣಾಮ ಕೆಲಸ ಇಲ್ಲದೆ ಸಂಕಷ್ಟ ಪಡುತ್ತಿದ್ದ ಕಾರ್ಮಿಕರಿಗೆ ನರೇಗಾ ಕೆಲಸ ನೀಡಿದೆ. ಇದರಿಂದ ಈ ಯೋಜನೆಯ ಮೂಲಕ ಗ್ರಾಮೀಣ ಪ್ರದೇಶದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಲಾಕ್‌ಡೌನ್ ವಿಧಿಸಲಾದ ಮೂರು ತಿಂಗಳಿನಲ್ಲಿ ಉಡುಪಿ ಮತ್ತು ದ.ಕ. ಜಿಲ್ಲೆಯಲ್ಲಿ 18,230 ಕುಟುಂಬಗಳು ಈ ಯೋಜನೆಯ ಸದುಪಯೋಗಪಡಿಸಿಕೊಂಡಿವೆ. ಪ್ರತಿದಿನಕ್ಕೆ ಒಬ್ಬ ವ್ಯಕ್ತಿಗೆ 275 ರೂ.(ಹಿಂದೆ 249ರೂ.) ನೀಡಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News