ಶಿರ್ವ: ತನ್ನ ವಾರ್ಡ್‌ನ ಸಮಗ್ರ ಮಾಹಿತಿಗಾಗಿ ಮೊಬೈಲ್ ಆ್ಯಪ್ ತಯಾರಿಸಿದ ಗ್ರಾಪಂ ಸದಸ್ಯ

Update: 2020-06-27 14:55 GMT

ಶಿರ್ವ, ಜೂ.27: ಶಿರ್ವ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಂಟಕಲ್ಲು ವಾರ್ಡ್ ಸದಸ್ಯ ಕೆ.ಆರ್.ಪಾಟ್ಕರ್, ಶಿರ್ವದ ಇನ್‌ಪೊಜಂಟ್ ಟೆಕ್ನಾಲಜಿಯ ಸಹಕಾರದೊಂದಿಗೆ ತಮ್ಮ ವಾರ್ಡ್‌ನ ಸಮಗ್ರ ಮಾಹಿತಿಯನ್ನು ದೇಶ ವಿದೇಶ ಗಳಿಗೆ ತಲುಪಿಸುವ ಉದ್ದೇಶದಿಂದ ‘ಬಂಟಕಲ್ಲು ವಾರ್ಡ್‌ವಾಣಿ’ ಎಂಬ ಪ್ರತ್ಯೇಕ ಆ್ಯಪ್ ಒಂದನ್ನು ತಯಾರಿಸಿದ್ದಾರೆ.

ಈ ವಾರ್ಡಿನ ಪ್ರಾಚೀನತೆ, ಸಾಂಸ್ಕೃತಿಕ, ಐತಿಹಾಸಿಕ ಹಿನ್ನೆಲೆ, ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ, ಕೃಷಿ ಮಾಹಿತಿ, ಅಭಿವೃದ್ಧಿ ಕಾರ್ಯಗಳು, ಸಂಗ್ರಹವಾದ ತೆರಿಗೆ, ಸಾರಿಗೆ ವ್ಯವಸ್ಥೆ, ಸಾಧನೆಗಳು, ದೈನಂದಿನ ಸುದ್ದಿಗಳು, ಸರಕಾರದಿಂದ ಆಗಿರುವ ಅಭಿವೃದ್ಧಿ ಕಾರ್ಯಗಳು ಮುಂತಾದ ಸಮಗ್ರ ಮಾಹಿತಿಗಳು ಈ ಆ್ಯಪ್‌ನಲ್ಲಿ ಸಿಗಲಿವೆ.

ಆ್ಯಂಡ್ರಾಯ್ಡ್ ಮೊಬೈಲ್ ಪ್ಲೇಸ್ಟೋರ್ ಮೂಲಕ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ ಅಥವಾ ಲಿಂಕ್ ಮೂಲಕವೂ ಲಾಗಿನ್ ಆಗಬಹುದಾಗಿದೆ. ತಮ್ಮ ಹೆಸರು ಮತ್ತು ಮೊಬೈಲ್ ಸಂಖ್ಯೆಯನ್ನು ಟೈಪ್ ಮಾಡಿ ರಿಜಿಸ್ಟರ್ ಆಗುವ ಮೂಲಕ ಲಾಗಿನ್ ಆಗಬಹುದು. ತಮ್ಮ ಹೆಸರು, ಮೊಬೈಲ್ ಸಂಖ್ಯೆ, ಊರನ್ನು ನಮೂದಿಸಿ ಸಲಹೆ ಸೂಚನೆಗಳನ್ನು ನೀಡಬಹುದಾಗಿದೆ. ಊರಿನ ಪ್ರಮುಖ ಕೃಷಿ ಮಲ್ಲಿಗೆಯನ್ನು ಮುಖಪುಟ ದಲ್ಲಿರುವ ಲೋಗೋದಲ್ಲಿ ಚಿತ್ರಿಸಲಾಗಿದೆ ಎಂದು ಗ್ರಾಪಂ ಸದಸ್ಯ ಕೆ.ಆರ್. ಪಾಟ್ಕರ್ ಮಾಹಿತಿ ನೀಡಿದರು.

ಜೂ.24ರಂದು ಬಂಟಕಲ್ಲು ಶ್ರೀಮಧ್ವವಾದಿರಾಜ ತಾಂತ್ರಿಕ ಮಹಾ ವಿದ್ಯಾ ಲಯದ ಪ್ರಾಚಾರ್ಯ ಡಾ.ಪ್ರೊ.ಮಹಾಬಲೇಶ್ವರ ಭಟ್ ಆ್ಯಪ್‌ಗೆ ಚಾಲನೆ ನೀಡಿದರು. ಕಾಪು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಪುಂಡಲೀಕ ಮರಾಠೆ, ಬಂಟಕಲ್ಲು ದೇವಳದ ಆಡಳಿತ ಮೊಕ್ತೇಸರ ಶಶಿಧರ ವಾಗ್ಲೆ, ಗ್ರಾಪಂ ಸದಸ್ಯೆ ವಾಲೆಟ್ ಕೆಸ್ತಲಿನೊ, ಶಿರ್ವ ರೋಟರಿ ನಿಯೋಜಿತ ಅಧ್ಯಕ್ಷ ವಿಷ್ಣು ಮೂರ್ತಿ ಸರಳಾಯ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News