ಸೆಲೂನ್‌ಗೆ ರವಿವಾರ ರಜೆ ಮುಂದುವರೆಸಲು ಸವಿತಾ ಸಮಾಜ ನಿರ್ಧಾರ
ಉಡುಪಿ, ಜೂ.27: ಕೊರೋನ ಭೀತಿಯ ಹಿನ್ನೆಲೆಯಲ್ಲಿ ಮಂಗಳವಾರದ ಬದಲು ರವಿವಾರ ಸೆಲೂನ್‌ಗಳಿಗೆ ರಜೆ ನೀಡುವ ಸವಿತಾ ಸಮಾಜ ಸಂಘಟನೆ ಯ ನಿರ್ಧಾರಕ್ಕೆ ವಿರುದ್ಧವಾಗಿ ಕೆಲವರು, ಸೆಲೂನ್‌ಗಳನ್ನು ತೆರೆದಿಟ್ಟರೂ ಸಾರ್ವಜನಿಕರು ಹಿರಿಯರು, ಮಕ್ಕಳ ಆರೋಗ್ಯದ ಹಿತದೃಷ್ಠಿಯಿಂದ ರವಿವಾರ ಸೆಲೂನ್‌ಗಳಿಗೆ ತೆರಳದೆ ವಾರದ ಇತರ ದಿನಗಳಲ್ಲಿ ಸೇವೆ ಪಡೆಯುವಂತೆ ಸವಿತಾ ಸಮಾಜ ಮನವಿ ಮಾಡಿದೆ.
ಜಿಲ್ಲಾ ಸವಿತಾ ಸಮಾಜದ ನಿರ್ಣಯದಂತೆ ಈವರೆಗೆ ನಾಲ್ಕು ರವಿವಾರ ರಜೆ ಆಗಿದ್ದರೂ, ಉಡುಪಿ ನಗರ, ಮಣಿಪಾಲ ಮತ್ತು ಶಿರ್ವ ಮುದರಂಗಡಿ ಯಲ್ಲಿ ಕೆಲವು ಸೆಲೂನ್ ಮಾಲಕರ ಅಸಹಕಾರದಿಂದ ಸಮಸ್ಯೆ ಆಗಿರುವುದರಿಂದ ಜೂ.26ರಂದು ಜಿಲ್ಲಾ ಸವಿತಾ ಸಮಾಜದ ತುರ್ತು ಸಮಾಲೋಚನಾ ಸಭೆ ಯನ್ನು ನಡೆಸಲಾಯಿತು.
ಸಾಮಾಜಿಕ ಸ್ವಾಸ್ಥ ಹಾಗೂ ಕ್ಷೌರಿಕರ ಆರೋಗ್ಯವನ್ನು ಕಾಪಾಡುವುದು ಮತ್ತು ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚಾಗುವುದರಿಂದ ರವಿವಾರ ಸೆಲೂನ್‌ಗಳಲ್ಲಿ ಒತ್ತಡ ಜಾಸ್ತಿಯಾಗಿ ನಿಯಮಾವಳಿಗಳನ್ನು ಪಾಲಿಸಲು ಆಗದೆ ಕ್ಷೌರ ವೃತ್ತಿಗೆ ತೊಂದರೆಯಾಗಲಿದೆ. ಆದುದರಿಂದ ಸದ್ಯದ ಮಟ್ಟಿಗೆ ರವಿವಾರ ಸೆಲೂನ್‌ಗಳಿಗೆ ರಜೆ ಮಾಡಿ ಮಂಗಳವಾರ ತೆರೆದು, ಈ ಹಿಂದೆ ನಿರ್ಧರಿಸಿದಂತೆ ಮುಂದುವರೆಸುವಂತೆ ಬಗ್ಗೆ ಸಭೆಯಲ್ಲಿ ನಿರ್ಧರಿಸಲಾಯಿತು ಎಂದು ಸಂಘದ ಪ್ರಕಟಣೆ ತಿಳಿಸಿದೆ.