ದ.ಕ.ಜಿಲ್ಲೆ : ಎಂಟು ಮಕ್ಕಳು, ವೃದ್ಧರು ಸಹಿತ 49 ಮಂದಿಗೆ ಕೊರೋನ ಪಾಸಿಟಿವ್
ಮಂಗಳೂರು, ಜೂ. 27: ದ.ಕ. ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೋನ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬರುತ್ತಿದೆ. ಮಕ್ಕಳು, ವೃದ್ಧರು, ರೋಗಿಗಳಲ್ಲೇ ಸೋಂಕು ವ್ಯಾಪಿಸಿದೆ. ಶನಿವಾರ 49 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ.
ಜಿಲ್ಲೆಯಲ್ಲಿ ಇದುವರೆಗಿನ ಒಟ್ಟು ಸೋಂಕಿತರ ಸಂಖ್ಯೆ 576ಕ್ಕೆ ಏರಿಕೆಯಾಗಿದ್ದು, ಈ ಪೈಕಿ 10 ಮಂದಿ ಹೊರ ಜಿಲ್ಲೆಯವರು. ಈ ನಡುವೆ 38 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ.
ಸೋಂಕಿತರ ಪೈಕಿ 14 ಮಂದಿ ಸೌದಿ ಅರೇಬಿಯಾ, ದಮಾಮ್, ದುಬೈ, ಶಾರ್ಜಾ, ಕತರ್‌ನಿಂದ ಬಂದವರಲ್ಲಿ ಸೋಂಕು ತಗುಲಿದೆ. ಮೂವರು ‘ಐಎಲ್‌ಐ’ ಪ್ರಕರಣ, ನಾಲ್ವರು ಎಸ್‌ಎಆರ್‌ಐ ಪ್ರಕರಣ, ಆರು ಮಂದಿ ಅಂಡರ್ ಟ್ರೇಸಿಂಗ್ ಪ್ರಕರಣ, ಪ್ರಾಥಮಿಕ ಸಂಪರ್ಕದಲ್ಲಿದ್ದ 22 ಮಂದಿ ಯಲ್ಲಿ ಸೋಂಕು ಇರುವುದು ಪತ್ತೆಯಾಗಿದೆ.
ಜೂ.21, 22ರಂದು ಸೌದಿ ಅರೇಬಿಯಾ, ದಮಾಮ್‌ನಿಂದ ಬಂದಿದ್ದ 11 ವರ್ಷದ ಬಾಲಕ, 41, 57 ವರ್ಷದ ಪುರುಷರು, 39 ವರ್ಷದ ಮಹಿಳೆ, ಜೂ.23ರಂದು ದುಬೈನಿಂದ ಬಂದಿದ್ದ 68 ವರ್ಷದ ವೃದ್ಧ, 56 ವರ್ಷದ ಮಹಿಳೆ, ಜೂ.19, 23ರಂದು ದುಬೈ, ಕತರ್‌ನಿಂದ ಆಗಮಿಸಿದ್ದ 57, 23 ವರ್ಷದ ಮಹಿಳೆಯರು ಹಾಗೂ 58, 26, 27, 24 ವರ್ಷದ ಪುರುಷರನ್ನು ಕ್ವಾರಂಟೈನ್‌ನಲ್ಲಿ ಇರಿಸಲಾಗಿತ್ತು. ಜೂ.19ರಂದು ಕತರ್‌ನಿಂದ ಆಗಮಿಸಿದ್ದ 32 ವರ್ಷದ ಪುರುಷ, ಜೂ.21ರಂದು ಶಾರ್ಜಾದಿಂದ ಆಗಮಿಸಿದ್ದ 41, 48 ವರ್ಷದ ಪುರುಷರಲ್ಲಿ ಸೋಂಕು ದೃಢಪಟ್ಟಿತ್ತು.
ಪಿ-9590ರ ಸಂಪರ್ಕದಲ್ಲಿದ್ದ 17 ಮಂದಿಯ ವರದಿಯಲ್ಲಿ ಪಾಸಿಟಿವ್ ಇರುವುದು ಪತ್ತೆಯಾಗಿದೆ. ಎರಡು ವರ್ಷದ ಬಾಲಕ, ಎರಡು ವರ್ಷದ ಬಾಲಕಿ, ಆರು ವರ್ಷದ ಇಬ್ಬರು ಬಾಲಕರು, 12 ವರ್ಷದ ಬಾಲಕ, 15 ವರ್ಷದ ಬಾಲಕಿ ಸೇರಿದಂತೆ 17 ಮಂದಿಯಲ್ಲಿ ಸೋಂಕು ಇರುವುದು ಪತ್ತೆಯಾಗಿದೆ. ಪಿ-10582ರ ಪ್ರಾಥಮಿಕ ಸಂಪರ್ಕಿತ 58 ವರ್ಷದ ಪುರುಷ, ಪಿ-10581ರ ಸಂಪರ್ಕಿತ 70 ವರ್ಷದ ವೃದ್ಧೆ, ಪಿ-10275ರ ಸಂಪರ್ಕಿತ 23, 23 ವರ್ಷದ ಯುವಕರು, ಪಿ-10588ರ ಸಂಪರ್ಕಿತ 32 ವರ್ಷದ ಹೆಂಗಸಿನಲ್ಲಿ ಸೋಂಕು ದೃಢವಾಗಿದೆ.
ಕಾಟ್ಯಾಂಕ್ಟ್ ಅಂಡರ್ ಟ್ರೇಸಿಂಗ್ ಪ್ರಕರಣದಲ್ಲಿ 65, 57 ವರ್ಷದ ಪುರುಷ, 23, 34, 44, 26 ವರ್ಷದ ಮಹಿಳೆಯರು, ಐಎಲ್‌ಐ ಪ್ರಕರಣದಲ್ಲಿ ಪುತ್ತೂರಿನ 40 ವರ್ಷದ ಮಹಿಳೆ, ಮಂಗಳೂರಿನ 22 ವರ್ಷದ ಯುವತಿ, ಪುತ್ತೂರಿನ 19 ವರ್ಷದ ಯುವಕ ಹಾಗೂ ಎಸ್‌ಎಆರ್‌ಐ ಪ್ರಕರಣದಲ್ಲಿ ಪುತ್ತೂರಿನ 80 ವರ್ಷದ ಹೆಂಗಸು, ಬಂಟ್ವಾಳದ 48 ವರ್ಷದ ಹೆಂಗಸು, 76 ವರ್ಷದ ಪುರುಷ, ಮಂಗಳೂರಿನ 35 ವರ್ಷದ ಪುರುಷರಲ್ಲಿ ಸೋಂಕು ದೃಢಗೊಂಡಿದೆ. ಎಲ್ಲ ಸೋಂಕಿತರನ್ನು ವೆನ್ಲಾಕ್ ಕೊವೀಡ್ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ತಿಳಿಸಿದ್ದಾರೆ.
ವೃದ್ಧರಲ್ಲಿ ಸೋಂಕು ಹೆಚ್ಚಳ: ಜಿಲ್ಲೆಯಲ್ಲಿ ವೃದ್ಧರಲ್ಲೂ ಕೊರೋನ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಜಿಲ್ಲೆಯ 80, 70 ವರ್ಷದ ಹೆಂಗಸು, 76, 68, 65, 65 ವರ್ಷದ ಪುರುಷರಲ್ಲಿ ಸೋಂಕು ಪತ್ತೆಯಾಗಿದೆ. ಇದರಿಂದ ಸಾರ್ವಜನಿಕ ವಲಯದಲ್ಲಿ ಮತ್ತಷ್ಟು ಭೀತಿ ಉಲ್ಬಣಿಸಿದೆ.
38 ಮಂದಿ ಗುಣಮುಖ: ಸಮಾಧಾನಕರ ಬೆಳವಣಿಗೆಯಲ್ಲಿ ಶನಿವಾರ 60 ವರ್ಷದ ವೃದ್ಧೆ ಸಹಿತ 38 ಮಂದಿ ಕೋವಿಡ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಮರಳಿದ್ದಾರೆ. ಇದರೊಂದಿಗೆ 416 ಮಂದಿ ಇದುವರೆಗೆ ಸೋಂಕು ಮುಕ್ತರಾದಂತಾಗಿದೆ. ಈಗ ಚಿಕಿತ್ಸೆಯಲ್ಲಿರುವ ಬಹುತೇಕ ಮಂದಿಯ ಆರೋಗ್ಯ ಸ್ಥಿತಿ ಸ್ಥಿರವಾಗಿದೆ.
49 ವರ್ಷದ ವ್ಯಕ್ತಿಯು ಡಯಾಬಿಟಿಸ್‌ಮತ್ತು ನ್ಯುಮೋನಿಯದಿಂದ ಬಳಲುತ್ತಿದ್ದು, ಇವರನ್ನು ಐಸಿಯುನಲ್ಲಿ ದಾಖಲಿಸಿ, ಎಚ್‌ಎಫ್‌ಎನ್‌ಸಿ ಮೂಲಕ ಆಮ್ಲಜನಕ ನೀಡಲಾಗುತ್ತಿದೆ. 57 ವರ್ಷದ ಹೆಂಗಸನ್ನು ಲಿವರ್ ಕಾಯಿಲೆ, ಡಯಾಬಿಟಿಸ್, ಹೃದಯರೋಗ ಹಾಗೂ ನ್ಯುಮೋನಿಯದಿಂದ ಬಳಲುತ್ತಿದ್ದಾರೆ. ಇನ್ನು 78 ವರ್ಷದ ವೃದ್ಧನನ್ನು ಡಯಾಬಿಟಿಸ್, ಅಧಿಕ ರಕ್ತದೊತ್ತಡ, ಪಾರ್ಕಿನ್‌ಸನ್ ಕಾಯಿಲೆ ಮತ್ತು ನ್ಯುಮೋನಿಯದಿಂದ ಬಳಲುತ್ತಿದ್ದಾರೆ. 59 ವರ್ಷದ ವೃದ್ಧ ಹೃದ್ರೋಗ, ನ್ಯುಮೋನಿಯ ಬಳಲುತ್ತಿದ್ದು, ಐಸಿಯುನಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಶನಿವಾರ ಒಟ್ಟು 232 ವರದಿಗಳು ಪ್ರಯೋಗಾಲಯದಿಂದ ಬಂದಿದ್ದು, ಅವುಗಳಲ್ಲಿ 49 ಪಾಸಿಟಿವ್ ಆಗಿದ್ದರೆ, ಉಳಿದೆಲ್ಲವೂ ನೆಗೆಟಿವ್ ಆಗಿವೆ. ಹೊಸದಾಗಿ 175 ಮಂದಿಯ ಸ್ಯಾಂಪಲ್‌ನ್ನು ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ. ಒಟ್ಟು 145 ಮಂದಿಯ ವರದಿ ಇನ್ನಷ್ಟೇ ಬರಲು ಬಾಕಿಯಿದೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.