×
Ad

ಗಲ್ವಾನ್ ನದಿ ತಿರುವಿನಲ್ಲಿ ಕಪ್ಪು ಟಾರ್ಪಾಲಿನ್‌ಗಳು, ಎಲ್‌ಎಸಿ ಬಳಿ 16 ಚೀನಿ ಬಿಡಾರಗಳು ಪತ್ತೆ: ವರದಿ

Update: 2020-06-27 22:26 IST
Photo: NDTV

ಹೊಸದಿಲ್ಲಿ,ಜೂ.27: ತನಗೆ ಲಭ್ಯವಾಗಿರುವ ಗಲ್ವಾನ್ ಕಣಿವೆಯ ನೂತನ ಉಪಗ್ರಹ ಚಿತ್ರಗಳು ಗಲ್ವಾನ್ ನದಿಗೆ ನಿರ್ಮಿಸಲಾಗಿರುವ ಒಡ್ಡಿನ ಮೇಲೆ ಕಪ್ಪು ಟಾರ್ಪಾಲಿನ್ ಹೊದಿಕೆಗಳನ್ನು ತೋರಿಸುತ್ತಿದ್ದು,ಇವು ಪ್ರದೇಶದಲ್ಲಿಯ ವಾಸ್ತವಿಕ ನಿಯಂತ್ರಣ ರೇಖೆ (ಎಲ್‌ಎಸಿ)ಯ ಸುತ್ತುಮುತ್ತಲಿನ ಚೀನಿ ನೆಲೆಗಳು ಎಂದು ನಂಬಲಾಗಿದೆ ಎಂದು NDTVಯು ವರದಿ ಮಾಡಿದೆ. ಈ ವಿಭಾಗದಲ್ಲಿ ಎಲ್‌ಎಸಿಯ ಒಂಭತ್ತು ಕಿ.ಮೀ.ಗಳ ಒಳಗೆ ಚೀನಿ ಸೇನೆಯ ಕನಿಷ್ಠ 16 ಬಿಡಾರಗಳನ್ನೂ ಈ ಚಿತ್ರಗಳು ತೋರಿಸಿವೆ.

 ಚೀನಾ ಈ ಪ್ರದೇಶದಿಂದ ಹಿಂದಕ್ಕೆ ಸರಿದಿಲ್ಲ ಮತ್ತು ಭಾರೀ ಸಂಖ್ಯೆಯಲ್ಲಿ ತನ್ನ ಸೈನಿಕರ ನಿಯೋಜನೆಯನ್ನು ಮುಂದುವರಿಸಿದೆ ಎನ್ನುವುದನ್ನು ಎನ್‌ಡಿಟಿವಿಯು ಪ್ಲಾನೆಟ್ ಲ್ಯಾಬ್ಸ್‌ನಿಂದ ಪಡೆದುಕೊಂಡಿರುವ ಜೂ.25 ಮತ್ತು 26ರ ಈ ಉಪಗ್ರಹ ಚಿತ್ರಗಳು ಸ್ಪಷ್ಟವಾಗಿ ತೋರಿಸುತ್ತಿದ್ದು,ಇದು ಎಲ್‌ಎಸಿಯ ಭಾರತೀಯ ಪ್ರದೇಶದಲ್ಲಿ ಕಾರ್ಯಾಚರಿಸುತ್ತಿರುವ ಭಾರತೀಯ ಸೇನೆಗೆ ನೇರವಾದ ಬೆದರಿಕೆಯಾಗಿದೆ. ಜೂ.22ರಂದು ನಡೆದಿದ್ದ ಲೆಫ್ಟಿನಂಟ್ ಜನರಲ್ ಮಟ್ಟದ ಅಧಿಕಾರಿಗಳ ನಡುವಿನ ಮಿಲಿಟರಿ ಮಾತುಕತೆಗಳಲ್ಲಿ ಲಡಾಖ್‌ನ ಎಲ್ಲ ವಿವಾದಾಸ್ಪದ ಪ್ರದೇಶಗಳಿಂದ ತಮ್ಮ ಪಡೆಗಳನ್ನು ಹಿಂದೆಗೆದುಕೊಳ್ಳಲು ಭಾರತ ಮತ್ತು ಚೀನಾ ಒಪ್ಪಿಕೊಂಡಿದ್ದವು.

ಗಲ್ವಾನ್ ಪ್ರದೇಶದಲ್ಲಿ ಚೀನಾ ತನ್ನ ನಿಯೋಜನೆಯನ್ನು ಇನ್ನಷ್ಟು ಹೆಚ್ಚಿಸಿರುವುದನ್ನು ನೂತನ ಚಿತ್ರಗಳು ಸೂಚಿಸುತ್ತಿವೆ.

 ಜೂ.25ರ ಚಿತ್ರವು ಗಲ್ವಾನ್ ನದಿಯು ತುಂಬಿ ಹರಿಯುತ್ತಿರುವುದನ್ನು ತೋರಿಸಿದೆ,ಇದೇ ವೇಳೆಗೆ ನದಿಗೆ ಅಡ್ಡವಾಗಿ ಭಾರತೀಯ ಪಡೆಗಳು ನಿರ್ಮಿಸಿದ್ದ ಕಲ್ಲಿನ ಗೋಡೆಗೆ ಹಾನಿಯುಂಟಾಗಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಈ ವರದಿಯು ಯಾವುದೇ ಭಾರತೀಯ ಸೇನಾ ಶಿಬಿರಗಳನ್ನು ತೋರಿಸಿಲ್ಲ.

ಎಲ್‌ಎಸಿಯ ಆಚೆಗೆ,ಅದಕ್ಕೆ ಹೊಂದಿಕೊಂಡಂತಿರುವ ಚೀನಿ ಅತಿಕ್ರಮಣ ಎನ್ನಲಾಗಿರುವ ಗಲ್ವಾನ್ ಒಡ್ಡು ಈ ಪ್ರದೇಶದಲ್ಲಿಯ ಭಾರತೀಯ ಪಡೆಗಳಿಗೆ ತುಂಬ ಮಹತ್ವದ್ದಾಗಿವೆ. ಗಲ್ವಾನ್ ನದಿಯ ಕಡಿದಾದ ತಿರುವಿನಲ್ಲಿರುವ ಈ ಒಡ್ಡು ಗಲ್ವಾನ್ ಕಣಿವೆಯಲ್ಲಿನ ಸಮೀಪದ ಭಾರತೀಯ ನೆಲೆಗಳ ಮೇಲೆ ಕಣ್ಣಿರಿಸಲು ಚೀನಿ ಪಡೆಗಳಿಗೆ ಸಾಧ್ಯವಾಗಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News