ಮ.ಪ್ರದೇಶ: ಗುಂಡಿಕ್ಕಿ, ಮಾರಕಾಯುಧಗಳಿಂದ ದಾಳಿ ನಡೆಸಿ ವಿಹಿಂಪ ಗೋರಕ್ಷಕ ಘಟಕದ ನಾಯಕನ ಹತ್ಯೆ

Update: 2020-06-28 13:57 GMT

ಭೋಪಾಲ್: ವಿಶ್ವ ಹಿಂದೂ ಪರಿಷತ್ ನ ಗೋರಕ್ಷಕ ಘಟಕದ ನಾಯಕರೊಬ್ಬರ ಮೇಲೆ ದಾಳಿ ನಡೆಸಿದ ತಂಡವೊಂದು ಅವರನ್ನು ಗುಂಡಿಕ್ಕಿ ಹತ್ಯೆಗೈದಿರುವ ಘಟನೆ ಮಧ್ಯಪ್ರದೇಶದ ಹೊಶಾಂಗಬಾದ್ ಜಿಲ್ಲೆಯಲ್ಲಿ ನಡೆದಿದೆ. ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ವಿಶ್ವ ಹಿಂದೂ ಪರಿಷತ್ ನ ಗೋರಕ್ಷಾ ಘಟಕದ ನಾಯಕ ರವಿ ವಿಶ್ವಕರ್ಮ ಎಂಬವರು ಹೊಶಾಂಗಬಾದ್ ನಿಂದ ಇತರ ಇಬ್ಬರ ಜೊತೆ ವಾಪಸಾಗುತ್ತಿದ್ದಾಗ ಅವರ ಕಾರನ್ನು ಅಡ್ಡಗಟ್ಟಿದ ದುಷ್ಕರ್ಮಿಗಳ ತಂಡ ಅವರ ಮೇಲೆ ದಾಳಿ ನಡೆಸಿದೆ.

“ಕಾರಿನಲ್ಲಿದ್ದ ವಿಶ್ವಕರ್ಮ ಮತ್ತು ಇಬ್ಬರ ಮೇಲೆ ದುಷ್ಕರ್ಮಿಗಳ ತಂಡ ಮಾರಕಾಯುಧಗಳಿಂದ ದಾಳಿ ನಡೆಸಿತು. ಅವರು ಎರಡು ಸುತ್ತು ಗುಂಡು ಹಾರಿಸಿದ್ದರು. ಅದರಲ್ಲೊಂದು ವಿಶ್ವಕರ್ಮರ ಎದೆಗೆ ನುಗ್ಗಿದ್ದು, ಅವರು ಸ್ಥಳದಲ್ಲೇ ಮೃತಪಟ್ಟಿದ್ದರು. ಘಟನೆಯಲ್ಲಿ ಇನ್ನೂ ಇಬ್ಬರಿಗೆ ಗಾಯಗಳಾಗಿವೆ. ದಾಳಿಕೋರರು ಸ್ಥಳದಿಂದ ಕಾಲ್ಕಿತ್ತಿದ್ದಾರೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

“10 ಜನರ ವಿರುದ್ಧ ನಾವು ಪ್ರಕರಣ ದಾಖಲಿಸಿದ್ದು, ಅವರಿಗಾಗಿ ಹುಡುಕಾಟ ನಡೆಯುತ್ತಿದೆ. ಹಳೆಯ ದ್ವೇಷದ ಕಾರಣ ಈ ದಾಳಿ ನಡೆದಿರಬಹುದು” ಎಂದವರು ತಿಳಿಸಿದ್ದಾರೆ.

ಕೊಲೆ ಮತ್ತು ಕೊಲೆ ಯತ್ನ ಸೇರಿದಂತೆ ವಿಶ್ವ ಕರ್ಮನ ವಿರುದ್ಧ ಒಂದು ಡಝನ್ ಕ್ರಿಮಿನಲ್ ಪ್ರಕರಣಗಳಿದ್ದವು. ವರ್ಷಕ್ಕೆ ಲಕ್ಷಾಂತರ ಟನ್ ಆಹಾರ ಧಾನ್ಯಗಳ ಮಾರಾಟ ನಡೆಯುವ ಪಿಪರಿಯಾ ಮಂಡಿಯ ಮೇಲೆ ಹಿಡಿತವನ್ನು ಹೊಂದಲು ಎರಡು ಪರಸ್ಪರ ವಿರೋಧ ಗುಂಪುಗಳ ಕಾದಾಟದಲ್ಲಿ ಈ ಹತ್ಯೆ ನಡೆದಿದೆ ಎಂದು ಹೋಶಂಗಾಬಾದ್ ಎಸ್‌ಪಿ ಸಂತೋಷಸಿಂಗ್ ಗೌರ್ ತಿಳಿಸಿದರು.

ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಬಂಧನಕ್ಕಾಗಿ ಬಲೆ ಬೀಸಿದ್ದಾರೆ.

ತನ್ಮಧ್ಯೆ,ವಿಶ್ವಕರ್ಮ ಹತ್ಯೆ ಪೂರ್ವಯೋಜಿತವಾಗಿತ್ತು ಎಂದು ಆರೋಪಿಸಿರುವ ವಿಹಿಂಪ,ಹತ್ಯೆಯ ಕುರಿತು ಸಮಗ್ರ ತನಿಖೆಗೆ ಆಗ್ರಹಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News