ಮಂಗಳೂರು: ಕೊರೋನಕ್ಕೆ ಬಲಿಯಾದ ಯುವಕನ ಅಂತ್ಯಸಂಸ್ಕಾರಕ್ಕೆ ಸ್ಥಳೀಯರ ವಿರೋಧ

Update: 2020-06-28 08:21 GMT

ಮಂಗಳೂರು, ಜೂ.28: ಶನಿವಾರ ರಾತ್ರಿ ಕೊರೋನ ವೈರಸ್ ಸೋಂಕಿನಿಂದ ಮೃತಪಟ್ಟ ಸುರತ್ಕಲ್ ಸಮೀಪದ ಇಡ್ಯದ 31ರ ಹರೆಯದ ಯುವಕನ ಅಂತ್ಯಸಂಸ್ಕಾರಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ ಘಟನೆ ರವಿವಾರ ಮಧ್ಯಾಹ್ನ ಬೋಳಾರದಲ್ಲಿ ನಡೆದಿದೆ.

ಸುರತ್ಕಲ್ ಸಮೀಪದ ಇಡ್ಯದ ಮಸೀದಿಗೊಳಪಟ್ಟ ದಫನ ಭೂಮಿಯ ಕಬರ್‌ ಗುಂಡಿಯಲ್ಲಿ ನೀರು ಹರಿದು ಬರುತ್ತಿರುವುದರಿಂದ ಅಲ್ಲಿನ ಮಸೀದಿಯ ಪದಾಕಾರಿಗಳ ಮತ್ತು ಸಮುದಾಯದ ಮುಖಂಡರ ಮನವಿಯ ಮೇರೆಗೆ ಬೋಳಾರದ ಮಸೀದಿ ಆವರಣದ ದಫನ ಭೂಮಿಯಲ್ಲಿ ದಫನಕ್ಕಾಗಿ ಎಲ್ಲಾ ಸಿದ್ಧತೆಗಳನ್ನು ಮಾಡಲಾಗಿತ್ತು. ಅಷ್ಟರಲ್ಲಿ ಸ್ಥಳೀಯ ಕೆಲವು ಮಂದಿ ತೀವ್ರ ವಿರೋಧ ವ್ಯಕ್ತಪಡಿಸಿದರು. ಆ ಹಿನ್ನೆಲೆಯಲ್ಲಿ ಬೋಳಾರದ ಮಸೀದಿಯಲ್ಲಿ ದಫನ ಮಾಡುವ ಕಾರ್ಯವನ್ನು ಕೈ ಬಿಡಲಾಯಿತು.

ಈ ಬಗ್ಗೆ ‘ವಾರ್ತಾಭಾರತಿ’ಯ ಜೊತೆ ಮಾತನಾಡಿದ ಬೋಳಾರ ಮಸೀದಿಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹುಸೈನ್, “ಬೋಳಾರದ ಮುಹಿಯುದ್ದೀನ್ ಜುಮಾ ಮಸೀದಿಯ ಆವರಣದಲ್ಲಿರುವ ದಫನ ಭೂಮಿಯಲ್ಲಿ ಕೊರೋನಕ್ಕೆ ಬಲಿಯಾದ ಯುವಕನ ದಫನ ಮಾಡಲು ಎಲ್ಲಾ ಸಿದ್ಧತೆಗಳನ್ನು ಮಾಡಲಾಗಿತ್ತು. ಇದಕ್ಕೆ ಜಮಾಅತ್ ನ ಮುಖಂಡರು, ಮಸೀದಿಯ ಪದಾಧಿಕಾರಿಗಳು, ಕಮಿಟಿಯ ಸದಸ್ಯರ ಹಾಗೂ ಜಮಾಅತ್ ಸದಸ್ಯರ ಬೆಂಬಲವೂ ಇತ್ತು. ಜಮಾಅತ್ ಗೊಳಪಟ್ಟ ಯಾವುದೇ ಮನೆಯವರಿಂದಲೂ ಆಕ್ಷೇಪ ಇರಲಿಲ್ಲ. ಆದರೆ, ಮಸೀದಿಗೆ ಸಂಬಂಧವಿಲ್ಲದ ಸ್ಥಳೀಯ ಕೆಲವು ಮಂದಿ ವಿರೋಧ ವ್ಯಕ್ತಪಡಿಸಿದರು.

ಈ ಮಧ್ಯೆ ಇಡ್ಯ ಮಸೀದಿಯ ಮುಖಂಡರು ಕೂಡ ಸ್ಥಳೀಯರ ವಿರೋಧದ ಹಿನ್ನೆಲೆಯಲ್ಲಿ ದಫನ ಮಾಡುವುದು ಬೇಡ. ಸಮಾಜದಲ್ಲಿ ಸೌಹಾರ್ದ ಮುಖ್ಯ. ಈ ವಿಷಯದಲ್ಲಿ ಯಾವುದೇ ತರ್ಕ ಮಾಡುವುದು ಕೂಡ ಸರಿಯಲ್ಲ. ಬೋಳಾರದ ಪರಿಸರದಲ್ಲಿ ನೀವು ಎಂದಿನಂತೆ ಎಲ್ಲರ ಜೊತೆ ಸೌಹಾರ್ದವಾಗಿರಿ. ಯುವಕನ ದಫನ ಕಾರ್ಯವನ್ನು ಇಡ್ಯ ಪರಿಸರದಲ್ಲೇ ಮಾಡುವೆವು ಎಂದಿದ್ದಾರೆ. ಅದರಂತೆ ಇಲ್ಲಿಂದ ಮೃತದೇಹವನ್ನು ಕೊಂಡೊಯ್ಯಲಾಗಿದೆ” ಎಂದು ತಿಳಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News