‘ಪಿಎಂ ಕೇರ್ಸ್’ ನಿಧಿಗೆ ಚೀನಿ ಕಂಪೆನಿಗಳಿಂದ ದೇಣಿಗೆ ಸಲ್ಲಿಕೆ: ಕಾಂಗ್ರೆಸ್ ಆರೋಪ

Update: 2020-06-28 13:55 GMT

ಹೊಸದಿಲ್ಲಿ,ಜೂ.28: ಚೀನಿ ಕಂಪೆನಿಗಳಿಂದ ದೇಣಿಗೆಗಳ ವಿಷಯದಲ್ಲಿ ಪ್ರತಿಪಕ್ಷ ಕಾಂಗ್ರೆಸ್ ಮತ್ತು ಆಡಳಿತ ಬಿಜೆಪಿ ನಡುವೆ ರಾಜಕೀಯ ಕೆಸರೆರಚಾಟದ ಮಧ್ಯೆಯೇ ಕಾಂಗ್ರೆಸ್ ಪಕ್ಷವು ಪಿಎಂ ಕೇರ್ಸ್ ನಿಧಿಯೂ ಚೀನಿ ಕಂಪನಿಗಳಿಂದ ದೇಣಿಗೆಗಳನ್ನು ಸ್ವೀಕರಿಸಿದೆ ಎಂದು ಆರೋಪಿಸಿದೆ.

 ರವಿವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹಿರಿಯ ಕಾಂಗ್ರೆಸ್ ವಕ್ತಾರ ಅಭಿಷೇಕ್ ಮನು ಸಿಂಘ್ವಿ ಅವರು,

“ಚೀನಾ ಬಹಿರಂಗವಾಗಿ ಯುದ್ಧಕ್ಕೆ ಕಾಲು ಕೆರೆಯುತ್ತಿದ್ದರೂ ಪ್ರಧಾನಿ ನರೇಂದ್ರ ಮೋದಿಯವರೇಕೆ ಪಿಎಂ ಕೇರ್ಸ್ ನಿಧಿಗೆ ಚೀನಿ ದೇಣಿಗೆಗಳನ್ನು ಸ್ವೀಕರಿಸಿದ್ದಾರೆ?, ವಿವಾದಾತ್ಮಕ ಚೀನಿ ಕಂಪನಿ ಹುವೆಯಿಂದ ಪ್ರಧಾನಿ ಏಳು ಕೋ.ರೂ.ಸ್ವೀಕರಿಸಿದ್ದಾರಾ?, ಹುವೆ ಚೀನಾದ ಸೇನೆಯೊಂದಿಗೆ ನೇರ ಸಂಪರ್ಕವನ್ನು ಹೊಂದಿದೆಯೇ?, ಟಿಕ್‌ಟಾಕ್ ಒಡೆತನವನ್ನು ಹೊಂದಿರುವ ಚೀನಿ ಕಂಪನಿಯು ವಿವಾದಾತ್ಮಕ ಪಿಎಂ ಕೇರ್ಸ್ ನಿಧಿಗೆ 30 ಕೋ.ರೂ.ಗಳ ದೇಣಿಗೆಯನ್ನು ನೀಡಿದೆಯೇ?” ಎಂದು ಪ್ರಶ್ನಿಸಿದರು.

  ಶೇ.38ರಷ್ಟು ಚೀನಿ ಪಾಲುಗಾರಿಕೆಯನ್ನು ಹೊಂದಿರುವ ಪೇಟಿಎಂ 100 ಕೋ.ರೂ.ಗಳನ್ನು ಹಾಗೂ ಒಪ್ಪೊ ಒಂದು ಕೋ. ಮತ್ತು ಶಿಯೋಮಿ 15 ಕೋ.ರೂ.ಗಳನ್ನು ನಿಧಿಗೆ ನೀಡಿವೆಯೇ ಎಂದೂ ಕಾಂಗ್ರೆಸ್ ಪ್ರಶ್ನಿಸಿದೆ.

ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿ (ಪಿಎಂಎನ್‌ಆರ್‌ಎಫ್)ಗೆ ಬಂದಿದ್ದ ದೇಣಿಗೆಗಳನ್ನು ಮೋದಿಯವರು ಪಿಎಂ ಕೇರ್ಸ್ ನಿಧಿಗೆ ತಿರುಗಿಸಿದ್ದಾರಾ ಮತ್ತು ಎಷ್ಟು ನೂರು ಕೋಟಿ ರೂ.ಗಳನ್ನು ಹೀಗೆ ತಿರುಗಿಸಲಾಗಿದೆ ಎಂದು ಪ್ರಶ್ನಿಸಿದ ಸಿಂಘ್ವಿ,2020 ಮೇ 20ಕ್ಕೆ ಇದ್ದಂತೆ ಪಿಎಂ ಕೇರ್ಸ್ ನಿಧಿಯಲ್ಲಿ 9,678 ಕೋ.ರೂ.ಗಳು ಸಂಗ್ರಹಗೊಂಡಿವೆ ಎಂದು ವರದಿಯು ತಿಳಿಸಿದೆ. ಚೀನಿ ಪಡೆಗಳು ನಮ್ಮ ಭೂಪ್ರದೇಶವನ್ನು ಅತಿಕ್ರಮಿಸಿದ್ದರೂ ಪ್ರಧಾನಿಯವರು ಪಿಎಂ ಕೇರ್ಸ್ ನಿಧಿಗೆ ಚೀನಿ ಕಂಪನಿಗಳಿಂದ ದೇಣಿಗೆಗಳನ್ನು ಸ್ವೀಕರಿಸಿರುವುದು ಆಘಾತವನ್ನುಂಟು ಮಾಡಿದೆ ಎಂದರು.

  ಪಿಎಂ ಕೇರ್ಸ್ ನಿಧಿಯ ಸಾಂವಿಧಾನಿಕ ಅಥವಾ ಕಾರ್ಯಾಚರಣೆ ನಿಯಮಾವಳಿಗಳು,ಅದು ಹೇಗೆ ನಿಯಂತ್ರಿಸಲ್ಪಡುತ್ತಿದೆ ಮತ್ತು ಅದರಲ್ಲಿಯ ಹಣವನ್ನು ಹೇಗೆ ಬಳಸಲಾಗುತ್ತಿದೆ ಎನ್ನುವುದು ಯಾರಿಗೂ ತಿಳಿದಿಲ್ಲ. ಅದು ಸಿಎಜಿ ಲೆಕ್ಕ ಪರಿಶೋಧನೆಗೂ ಒಳಪಟ್ಟಿಲ್ಲ. ಪ್ರಧಾನಿಯವರೊಬ್ಬರೇ ಈ ನಿಧಿಯನ್ನು ಅಪಾರದರ್ಶಕವಾಗಿ ಮತ್ತು ಗೌಪ್ಯವಾಗಿ ನಿರ್ವಹಿಸುತ್ತಿರುವಂತಿದೆ ಎಂದೂ ಸಿಂಘ್ವಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News