ದಿಲ್ಲಿಯಲ್ಲಿ ಕೋವಿಡ್-19 ಸೋಂಕು ಸಾಮುದಾಯಿಕವಾಗಿ ಹರಡಿಲ್ಲ: ಅಮಿತ್ ಶಾ

Update: 2020-06-28 14:17 GMT

ಹೊಸದಿಲ್ಲಿ,ಜೂ.28: ದಿಲ್ಲಿಯಲ್ಲಿ ಕೋವಿಡ್-19 ಸೋಂಕು ಸಮುದಾಯ ಹಂತವನ್ನು ತಲುಪಿಲ್ಲ ಎಂದು ರವಿವಾರ ಇಲ್ಲಿ ಹೇಳಿದ ಕೇಂದ್ರ ಗೃಹಸಚಿವ ಅಮಿತ್ ಶಾ ಅವರು,ಜುಲೈ 31ರ ವೇಳೆಗೆ ರಾಷ್ಟ್ರ ರಾಜಧಾನಿಯಲ್ಲಿ ಕೊರೋನ ವೈರಸ್ ಪ್ರಕರಣಗಳ ಸಂಖ್ಯೆ 5.5 ಲಕ್ಷಕ್ಕೇರಲಿದೆ ಎಂಬ ದಿಲ್ಲಿ ಉಪಮುಖ್ಯಮಂತ್ರಿ ಮನೀಷ ಸಿಸೋಡಿಯಾ ಅವರ ಹೇಳಿಕೆಯು ಜನರಲ್ಲಿ ಭೀತಿಯನ್ನು ಸೃಷ್ಟಿಸಿದೆ ಎಂದು ಆರೋಪಿಸಿದರು.

ದಿಲ್ಲಿಯಲ್ಲಿ ಕೊರೋನ ವೈರಸ್ ಪಿಡುಗು ಆ ಹಂತವನ್ನು ತಲುಪುವುದಿಲ್ಲ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.

ವೈರಸ್‌ನ್ನು ನಿಯಂತ್ರಿಸಲು ಸರಣಿ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಮತ್ತು ವಿವಿಧ ಮಟ್ಟಗಳಲ್ಲಿ ಸಮನ್ವಯವನ್ನು ಹೆಚ್ಚಿಸಲು ವಿವಿಧ ಏಜೆನ್ಸಿಗಳ ಸಭೆಗಳನ್ನು ನಡೆಸಲಾಗುತ್ತಿದೆ ಎಂದ ಶಾ,ಜೂನ್ ಎರಡನೇ ವಾರದ ಸುಮಾರಿಗೆ ಸಿಸೋಡಿಯಾ ನೀಡಿದ್ದ ಹೇಳಿಕೆಯು ಅಂಕಿಅಂಶಗಳನ್ನು ಆಧರಿಸಿತ್ತು. ಅವರ ಅಂದಾಜು ಸರಿಯೋ ತಪ್ಪೋ ಎನ್ನುವ ಗೋಜಿಗೆ ತಾನು ಹೋಗುವುದಿಲ್ಲ. ಆದರೆ ಅವರ ಹೇಳಿಕೆಯು ಜನರಲ್ಲಿ ಭೀತಿಯನ್ನು ಸೃಷ್ಟಿಸಿದೆ ಮತ್ತು ಕೆಲವರು ದಿಲ್ಲಿಯನ್ನು ತೊರೆಯಲು ಆರಂಭಿಸಿದ್ದಾರೆ ಎಂದರು.

 ದಿಲ್ಲಿಯ ಲೆ.ಗ.ಅನಿಲ ಬೈಜಾಲ್ ಅವರ ನೇತೃತ್ವದಲ್ಲಿ ನಡೆದಿದ್ದ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ್ದ ಸಿಸೋಡಿಯಾ,ಜೂ.15ರ ವೇಳೆಗೆ ದಿಲ್ಲಿಯಲ್ಲಿ ಕೊರೋನ ಪ್ರಕರಣಗಳ ಸಂಖ್ಯೆ 44,000ಕ್ಕೆ ಹೆಚ್ಚಲಿದ್ದು,6,600 ಹಾಸಿಗೆಗಳು ಅಗತ್ಯವಾಗುತ್ತವೆ. ಜು.30ರ ವೇಳೆಗೆ ಪ್ರಕರಣಗಳ ಸಂಖ್ಯೆ ಒಂದು ಲಕ್ಷ ಆಗಲಿದ್ದು,15,000 ಹಾಸಿಗೆಗಳು ಬೇಕಾಗುತ್ತವೆ. ಜು.15ರ ವೇಳೆಗೆ 2.5 ಲ.ಪ್ರಕರಣಗಳಾಗಲಿದ್ದು,ಜು.31ರ ವೇಳೆಗೆ ಇದು ಸುಮಾರು 5.5ಲ.ಕ್ಕೆ ತಲುಪಲಿದೆ ಎಂದು ಹೇಳಿದ್ದರು.

 ಜು.31ರಂದು 5.5 ಲ.ಪ್ರಕರಣಗಳ ಸ್ಥಿತಿ ಬರುವುದಿಲ್ಲ ಎಂದು ತಾನು ವಿಶ್ವಾಸದಿಂದ ಹೇಳಬಲ್ಲೆ ಎಂದ ಶಾ,ಹೆಚ್ಚು ಪರೀಕ್ಷೆಗಳು ಮತ್ತು ಸಂಪರ್ಕ ಪತ್ತೆ ಸೇರಿದಂತೆ ಮುನ್ನೆಚ್ಚರಿಕೆ ಕ್ರಮಗಳಿಗೆ ಹೆಚ್ಚು ಒತ್ತು ನೀಡಲಾಗಿರುವುದರಿಂದ ಜು.31ರ ವೇಳೆಗೆ ದಿಲ್ಲಿಯ ಸ್ಥಿತಿ ಉತ್ತಮವಾಗಿರುತ್ತದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News