370ನೆ ವಿಧಿ ರದ್ದತಿ ಬಳಿಕ ಸಲ್ಲಿಸಿದ್ದ ಶೇ.99ರಷ್ಟು ಹೇಬಿಯಸ್ ಕಾರ್ಪಸ್ ಅರ್ಜಿಗಳು ಈಗಲೂ ಬಾಕಿ

Update: 2020-06-28 14:23 GMT

ಹೊಸದಿಲ್ಲಿ,ಜೂ.28: ಕಳೆದ ವರ್ಷದ ಆಗಸ್ಟ್‌ನಲ್ಲಿ ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಹಿಂದೆಗೆದುಕೊಂಡ ಬಳಿಕ ಜಮ್ಮು ಕಾಶ್ಮೀರ ಉಚ್ಚ ನ್ಯಾಯಾಲಯದಲ್ಲಿ ಸಲ್ಲಿಸಲಾಗಿರುವ ಹೇಬಿಯಸ್ ಕಾರ್ಪಸ್ ಅರ್ಜಿಗಳ ಪೈಕಿ ಶೇ.99ರಷ್ಟು ಅರ್ಜಿಗಳು ಈಗಲೂ ವಿಚಾರಣೆಗೆ ಬಾಕಿಯಿವೆ.

ಜಮ್ಮುಕಾಶ್ಮೀರ ಹೈಕೋರ್ಟ್ ವಕೀಲರ ಸಂಘದ ಕಾರ್ಯಕಾರಿ ಸಮಿತಿಯು ಜೂ.25ರಂದು ಭಾರತದ ಮುಖ್ಯ ನ್ಯಾಯಾಧೀಶ (ಸಿಜೆಐ) ಎಸ್.ಎ.ಬೊಬ್ಡೆ ಅವರಿಗೆ ಬರೆದಿರುವ ಪತ್ರದಲ್ಲಿ ಈ ವಿಷಯವನ್ನು ತಿಳಿಸಿದೆ ಎಂದು Theprint.in ವರದಿ ಮಾಡಿದೆ.

ಆ.5ರಂದು 370 ಮತ್ತು 35ಎ ವಿಧಿಗಳನ್ನು ರದ್ದುಗೊಳಿಸಿದಾಗ ಜಮ್ಮುಕಾಶ್ಮೀರ ಸಿಪಿಸಿಯಡಿ ಕಾಶ್ಮೀರ ಕಣಿವೆಯ ಸುಮಾರು 13,000 ಜನರನ್ನು ಬಂಧಿಸಲಾಗಿತ್ತು ಮತ್ತು ಸಾರ್ವಜನಿಕ ಸುರಕ್ಷಾ ಕಾಯ್ದೆ (ಪಿಎಸ್‌ಎ)ಯಡಿ ನೂರಾರು ಜನರ ವಿರುದ್ಧ ಪ್ರಕರಣಗಳು ದಾಖಲಾಗಿದ್ದವು. ಆ.6ರಿಂದ ಜಮ್ಮುಕಾಶ್ಮೀರ ಉಚ್ಚ ನ್ಯಾಯಾಲಯದಲ್ಲಿ 600ಕ್ಕೂ ಹೆಚ್ಚು ಹೇಬಿಯಸ್ ಕಾರ್ಪಸ್ ಅರ್ಜಿಗಳನ್ನು ಸಲ್ಲಿಸಲಾಗಿದೆ ಮತ್ತು ಈವರೆಗೆ ಶೇ.1ರಷ್ಟೂ ಪ್ರಕರಣಗಳು ಇತ್ಯರ್ಥಗೊಂಡಿಲ್ಲ ಎಂದು ಸಮಿತಿಯು ತಿಳಿಸಿದೆ.

ವಕೀಲರ ಸಂಘದ ಅಧ್ಯಕ್ಷ ಮಿಯಾಂ ಅಬ್ದುಲ್ ಕಯೂಂ ಅವರಿಗಾಗಿ ಸಲ್ಲಿಸಲಾಗಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಪ್ರಸ್ತಾಪಿಸಿರುವ ಪತ್ರವು,ಅರ್ಜಿಯ ಬಗ್ಗೆ ನಿರ್ಧರಿಸಲು ಆರು ತಿಂಗಳು ಸಮಯವನ್ನು ತೆಗೆದುಕೊಂಡಿದ್ದ ಉಚ್ಚ ನ್ಯಾಯಾಲಯವು ಮೇಲ್ಮವಿಯ ಬಗ್ಗೆ ನಿರ್ಧಾರ ಕೈಗೊಳ್ಳಲು ಇನ್ನೊಂದು ಮೂರು ತಿಂಗಳುಗಳನ್ನು ತೆಗೆದುಕೊಂಡಿತ್ತು ಎಂದು ತಿಳಿಸಿದೆ.

ಜಮ್ಮು-ಕಾಶ್ಮೀರದಲ್ಲಿ ಅಂತರ್ಜಾಲ ವೇಗದ ಮೇಲಿನ ನಿರ್ಬಂಧದಿಂದಾಗಿ ವಕೀಲರು ಎದುರಿಸುತ್ತಿರುವ ಸಂಕಷ್ಟಗಳನ್ನೂ ಸಮಿತಿಯು ತನ್ನ ಪತ್ರದಲ್ಲಿ ಪ್ರಮುಖವಾಗಿ ಬಿಂಬಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News