ಬೆಳೆ ವಿಮೆ ಯೋಜನೆ ವ್ಯಾಪ್ತಿಗೆ ಉಡುಪಿ ಜಿಲ್ಲೆಯ ಅಡಿಕೆ, ಕಾಳುಮೆಣಸು

Update: 2020-06-28 15:48 GMT

ಉಡುಪಿ, ಜೂ. 28: ತೋಟಗಾರಿಕೆ ಬೆಳೆ ವಿಮೆಗೆ ಸಂಬಂಧಿಸಿ ಮರು ವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆ ವಿಮೆ ಕಾರ್ಯಕ್ರಮದಲ್ಲಿ ಮೂರು ವರ್ಷ(2020, 2021, 2022)ಗಳಿಗೆ ಮುಂಗಾರು ಹಂಗಾಮಿಗೆ ಅನ್ವಯಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಈ ಯೋಜನೆ ಯಲ್ಲಿ ಕೇಂದ್ರ ಸರಕಾರ ನೀಡಿರುವ ಮಾನದಂಡಗಳ ಆಧಾರದಲ್ಲಿ ತೋಟಗಾರಿಕಾ ರೈತರಿಗೆ ಹವಾಮಾನ ವೈಪರೀತ್ಯದಿಂದ ಉಂಟಾದ ಬೆಳೆ ನಷ್ಟಕ್ಕೆ ವಿವಾ ಪರಿಹಾರವನ್ನು ನೀಡಲಾಗುತ್ತದೆ.

ಈ ಯೋಜನೆಯನ್ನು ಮುಂಗಾರು ಹಂಗಾಮಿಗೆ ಉಡುಪಿ ಜಿಲ್ಲೆಯಲ್ಲಿ ಅಡಿಕೆ ಬೆಳೆಗೆ 160 ವಿಮಾ ಘಟಕಗಳಿಗೆ ಹಾಗೂ ಕಾಳುಮೆಣಸು ಬೆಳೆಯಲ್ಲಿ 104 ವಿಮಾ ಘಟಕಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಈ ಯೋಜನೆಯಡಿ ಉಡುಪಿ ಜಿಲ್ಲೆಯಲ್ಲಿ 2020, 2021, 2022ನೇ ಮುಂಗಾರು ಹಂಗಾಮಿಗೆ ಅಡಿಕೆ ಮತ್ತು ಕರಿಮೆಣಸು ಬೆಳೆಗಳನ್ನು ಅಧಿಸೂಚಿಸಿ ಆದೇಶ ಹೊರಡಿಸ ಲಾಗಿದೆ. 2020ರ ಮುಂಗಾರು ಹಂಗಾಮಿಗೆ ಸಂಬಂಧಿಸಿ ವಿಮಾ ಕಂತು ಪಾತಿಸಲು ಜೂ.30 ಅಂತಿಮ ದಿನವಾಗಿದೆ

ಶೇ.5ರಷ್ಟು ವಿಮಾ ಕಂತು

ಈ ಯೋಜನೆಯ ಪ್ರಕಾರ ಬೆಳೆ ಸಾಲ ಪಡೆದಿರುವ ಹಾಗೂ ಬೆಳೆ ಸಾಲ ಹೊಂದಿಲ್ಲದ ರೈತರಿಗೆ ಅಧಿಸೂಚಿತ ಬೆಳೆಗಳಿಗೆ ವಿಮಾ ಕಂತನ್ನು ಪಾವತಿಸಿ ವಿಮೆಯನ್ನು ಹೊಂದಬಹುದಾಗಿದೆ. ಪ್ರತೀ ಹೆಕ್ಟೆರ್ ಅಡಿಕೆಗೆ 128000ರೂ. ಹಾಗೂ ಕರಿಮೆಣಸಿಗೆ 47000ರೂ. ವಿಮಾ ಮೊತ್ತ ನೀಡಲಾಗುತ್ತದೆ. ಅದಕ್ಕೆ ರೈತರು ಅಡಿಕೆಗೆ 6,400 ರೂ. ಮತ್ತು ಕರಿ ಮೆಣಸಿಗೆ 2350ರೂ. ವಿಮಾ ಕಂತು(ಶೇ.5) ಪಾವತಿಸಬೇಕಾಗುತ್ತದೆ.

ಈ ಯೋಜನೆಯಡಿ ಸರಕಾರದ ಪಾಲನ್ನು ಕೇಂದ್ರ ಹಾಗೂ ರಾಜ್ಯ ಸರಕಾರ ಗಳು ತಲಾ ಶೇ.50ರ ಅನುಪಾತದಲ್ಲಿ ಭರಿಸುತ್ತದೆ. ವಿವಿಧ ಕೇಂದ್ರ ಗಳಲ್ಲಿ ದಾಖಲಿಸಲಾದ ಹವಾಮಾನ ಅಂಶಗಳ ಮಾಹಿತಿಯ ಆಧಾರದಲ್ಲಿ ಬೆಳೆ ವಿಮೆ ನಷ್ಟ ಪರಿಹಾರವನ್ನು ಇತ್ಯರ್ಥ ಪಡಿಸಲಾಗುವುದು. ಬೆಳೆವಿಮೆಗಳಿಗೆ ಸಂಬಂಧಿಸಿ ಅಧಿಸೂಚಿತ ಬೆಳೆಗಳ ಟರ್ಮ್ ಶೀಟ್‌ಗಳನ್ನು ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷತೆಯ ತಾಂತ್ರಿಕ ಸಮಿತಿಯಲ್ಲಿ ಅನುಮೋದಿಸಿ ಸಲ್ಲಿಸಲಾಗಿದೆ.

72 ಗಂಟೆಯೊಳಗೆ ಮಾಹಿತಿ

ಸ್ಥಳೀಯ ನಿರ್ಧಿಷ್ಟ ಪ್ರಕೃತಿ ವಿಕೋಪಗಳಾದ ಆಲಿ ಕಲ್ಲು ಮಳೆ, ಭೂ ಕುಸಿತ ಮತ್ತು ಮೇಘ ಸ್ಫೋಟಗಳಿಂದ ಬೆಳೆ ನಷ್ಟ ಸಂಭಂವಿಸಿದಲ್ಲಿ ಬೆಳೆ ವಿಮೆ ಮಾಡಿಸಿ ರುವ ರೈತರು ಹಾನಿ ಸಂಭವಿಸಿದ 72 ಗಂಟೆಗೊಳಗಾಗಿ ಬೆಳೆ ವಿವರ, ಹಾನಿಯ ವ್ಯಾಪ್ತಿ ಹಾಗೂ ಹಾನಿಯ ಕಾರಣಗಳನ್ನು ಲಿಖಿತವಾಗಿ ನೀಡಬೇಕು. ಇಂತಹ ಸಂಧರ್ದಲ್ಲಿ ಉಂಟಾಗುವ ನಷ್ಟದ ನಿರ್ಧರಣೆಯನ್ನು ವೈಯಕ್ತಿಕವಾಗಿ ನಿರ್ಧರಿಸಿ, ಬೆಳೆ ವಿಮಾ ನಷ್ಟ ಪರಿಹಾರವನ್ನು ವಿಮಾ ಸಂಸ್ಥೆಯು ಕಂದಾಯ, ತೋಟಗಾರಿಕೆ ಹಾಗೂ ಕೃಷಿ ಇಲಾಖೆಗಳ ಸಮನ್ವಯದೊಂದಿಗೆ ಇತ್ಯರ್ಥ ಪಡಿಸುತ್ತದೆ.

ಹಣಕಾಸು ಸಂಸ್ಥೆಗಳಿಂದ ಬೆಳೆ ಸಾಲವನ್ನು ಹೊಂದಿಲ್ಲದ ತೋಟಗಾರಿಕೆ ರೈತರು ನಿಗದಿತ ಅರ್ಜಿಯೊಂದಿಗೆ ಜಮೀನಿನ ಪಹಣಿ ಪ್ರತಿ, ಉಳಿತಾಯ ಖಾತೆ ಪಾಸ್ ಪುಸ್ತಕ, ಆಧಾರ್ ಕಾರ್ಡ್ ಅಥವಾ ಸರಕಾರದ ಇತರೆ ಯಾವುದೇ ಅಧಿಕೃತ ಗುರುತಿನ ಚೀಟಿ, ಸ್ವಯಂ ಘೋಷಿಸಿ ದೃಢೀಕರಿಸಿದ ಜಮೀನಿನ ಬೆಳೆ ಪತ್ರ ಹಾಗೂ ಪ್ರಿಮಿಯಂ ವಿಮಾ ಮೊತ್ತದೊಂದಿಗೆ ಸಲ್ಲಿಸಿ ನೊಂದಣಿ ಮಾಡಿಸಿಕೊಳ್ಳಬಹುದು.

ಹೆಚ್ಚಿನ ವಿವರಗಳಿಗೆ ತೋಟಗಾರಿಕೆ ಉಪನಿರ್ದೇಶಕರು, ಜಿ.ಪಂ., ಉಡುಪಿ (9448999225), ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ಜಿಪಂ, ಉಡುಪಿ( 9900 046117/0820-2522837), ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ಜಿಪಂ, ಕುಂದಾಪುರ(9900565469/08254 -230813), ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ಜಿ.ಪಂ., ಕಾರ್ಕಳ (9481440812/08258-230288) ಇವರನ್ನು ಸಂಪರ್ಕಿಸಬೇಕು ಎಂದು ಜಿಲ್ಲಾ ತೋಟಗಾರಿಕೆ ಇಲಾಖೆ ಉಪನಿರ್ದೇಶಕರ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News