ಮಧ್ಯಪ್ರದೇಶ : ಬಿಜೆಪಿ ಸರಕಾರ ಉರುಳಿಸಲು ಪ್ರಧಾನ ಕಾರ್ಯದರ್ಶಿ ವಿಜಯ್‌ ವರ್ಗಿಯ ಪ್ರಯತ್ನ

Update: 2020-06-28 15:54 GMT

ಭೋಪಾಲ, ಜೂ.28: ಮಧ್ಯಪ್ರದೇಶದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರಕಾರವನ್ನು ಉರುಳಿಸಲು ಪಕ್ಷದ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯ್‌ವರ್ಗಿಯ ಪ್ರಯತ್ನಿಸುತ್ತಿದ್ದಾರೆ ಎಂದು ಬಿಜೆಪಿ ಹಿರಿಯ ಮುಖಂಡ ಭನ್ವರ್‌ಸಿಂಗ್ ಶೆಖಾವತ್ ಆರೋಪಿಸಿದ್ದಾರೆ.

ವಿಜಯ್‌ ವರ್ಗಿಯಗೆ ಹೇಗಾದರೂ ಮಾಡಿ ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಬೇಕೆಂಬ ಉದ್ದೇಶವಿದೆ. 2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ಕಳೆದುಕೊಳ್ಳಲು ಅವರ ಈ ಮಹಾತ್ವಾಕಾಂಕ್ಷೆಯೇ ಕಾರಣ. ಮುಖ್ಯಮಂತ್ರಿ ಶಿವರಾಜ್ ಸಿಂಗ್‌ರನ್ನು ಕೆಳಗಿಳಿಸಲು ಅವರು ಶತಾಯಗತಾಯ ಪ್ರಯತ್ನಿಸಿದ್ದಾರೆ. ಚುನಾವಣೆಯಲ್ಲಿ 35 ಕ್ಷೇತ್ರಗಳ ಉಸ್ತುವಾರಿಯನ್ನು ವಿಜಯ್‌ವಗಿಯಗೆ ವಹಿಸಲಾಗಿತ್ತು. ಆದರೆ ಮಾಲ್ವಾ ಪ್ರದೇಶದ ಸುಮಾರು 12 ಕ್ಷೇತ್ರಗಳಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿಗಳೆದುರು ಬಂಡಾಯ ಅಭ್ಯರ್ಥಿಗಳನ್ನು ನಿಲ್ಲಿಸಿದರು. ಪಕ್ಷದ ಹೆಲಿಕಾಪ್ಟರ್‌ನಲ್ಲಿ ಹಣ ಸಾಗಿಸಿ ಬಂಡಾಯ ಅಭ್ಯರ್ಥಿಗಳಿಗೆ ಒದಗಿಸಿದರು. ಇದರಿಂದ ಬಿಜೆಪಿ 109 ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಯಿತು ಎಂದು ಶೆಖಾವತ್ ಆರೋಪಿಸಿದ್ದಾರೆ.

  3 ತಿಂಗಳ ಹಿಂದೆ ಕಾಂಗ್ರೆಸ್ ಶಾಸಕರ ಪಕ್ಷಾಂತರದ ಮೂಲಕ ಮತ್ತೆ ಅಧಿಕಾರಕ್ಕೆ ಬಂದಿರುವ ಶಿವರಾಜ್ ಸಿಂಗ್ ಚೌಹಾಣ್ ಸರಕಾರದ ವಿರುದ್ಧ ಮತ್ತೆ ಷಡ್ಯಂತ್ರ ಹೂಡುತ್ತಿದ್ದಾರೆ ಎಂದವರು ದೂರಿದ್ದಾರೆ. 2018ರ ಚುನಾವಣೆಯಲ್ಲಿ ಶೆಖಾವತ್ ಸೋತಿದ್ದರು. ಈ ಚುನಾವಣೆಯಲ್ಲಿ ಬಂಡಾಯ ಅಭ್ಯರ್ಥಿಯಾಗಿ ನಿಂತಿದ್ದ ಕಾರಣ ಪಕ್ಷದಿಂದ ಅಮಾನತುಗೊಂಡಿದ್ದ ರಾಜೇಶ್ ಅಗರ್‌ವಾಲ್‌ರ ಅಮಾನತು ರದ್ದುಗೊಳಿಸಿ ಮತ್ತೆ ಪಕ್ಷಕ್ಕೆ ಸೇರಿಸಿರುವುದು ಶೆಖಾವತ್ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಪಕ್ಷದ ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News