83 ವರ್ಷ ಆಗುವವರೆಗೂ ಪುಟಿನ್ ರಶ್ಯದ ಅಧ್ಯಕ್ಷ?

Update: 2020-06-28 16:57 GMT

ಮಾಸ್ಕೋ (ರಶ್ಯ), ಜೂ. 28: ಎರಡು ದಶಕಗಳಿಂದ ನಿರಂತರವಾಗಿ ಅಧಿಕಾರದ ಸವಿಯನ್ನು ಅನುಭವಿಸಿದ ಬಳಿಕ, ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್‌ರ ಜನಪ್ರಿಯತೆ ಈಗ ಸಾರ್ವಕಾಲಿಕ ಕುಸಿತವನ್ನು ಕಂಡಿದೆ. ಕೊರೋನ ವೈರಸ್ ದಾಳಿ ಹಾಗೂ ತೈಲ ಬೆಲೆಯಲ್ಲಿನ ಕುಸಿತದಿಂದಾಗಿ ರಶ್ಯದ ಆರ್ಥಿಕತೆಯು ಈಗ ನೆಲಕಚ್ಚಿದೆ. ಹಾಗಾದರೆ, ತನ್ನ ಅಧ್ಯಕ್ಷೀಯ ಅವಧಿಯನ್ನು ಇನ್ನೂ 16 ವರ್ಷಗಳ ಕಾಲ ವಿಸ್ತರಿಸಲು ಸಾಧ್ಯವಾಗುವ ಕ್ರಮಗಳನ್ನು ತೆಗೆದುಕೊಳ್ಳಲು ಪುಟಿನ್‌ಗೆ ಇದು ಸೂಕ್ತ ಕಾಲವೇ?

ಆದರೆ, ತನಗೆ ವಿರುದ್ಧವಾಗಿ ಕೆಲಸ ಮಾಡುವ ಯಾವುದೇ ಅಂಶಗಳನ್ನು ನಿವಾರಿಸಿಕೊಂಡು ಮುನ್ನಡೆಯುವುದು ಹೇಗೆನ್ನುವುದು ಪುಟಿನ್‌ ಗೆ ಚೆನ್ನಾಗಿ ಗೊತ್ತು. ತನ್ನ ಅಧ್ಯಕ್ಷೀಯ ಅವಧಿಯನ್ನು ವಿಸ್ತರಿಸುವುದಕ್ಕೆ ಸಂಬಂಧಿಸಿದ ಸಂವಿಧಾನ ತಿದ್ದುಪಡಿಯನ್ನು ತರಲು ಅವರು ಈಗ ಮುಂದಾಗಿದ್ದಾರೆ. ಇದಕ್ಕೆ ಸಂಬಂಧಿಸಿದ ಚುನಾವಣೆ ಜುಲೈ 1ಕ್ಕೆ ಮುಕ್ತಾಯಗೊಳ್ಳುತ್ತದೆ. ಅದರ ಫಲಿತಾಂಶದ ಬಗ್ಗೆ ಈಗ ಯಾವುದೇ ಕುತೂಹಲ ಯಾರಿಗೂ ಇಲ್ಲ.

ಈ ಸಂವಿಧಾನ ತಿದ್ದುಪಡಿ ಅನುಮೋದನೆಗೊಂಡರೆ, ಅವರ ಈಗಿನ ಅಧ್ಯಕ್ಷೀಯ ಅವಧಿ 2024ರಲ್ಲಿ ಮುಕ್ತಾಯಗೊಂಡ ಬಳಿಕ ಇನ್ನೂ ತಲಾ 6 ವರ್ಷಗಳ 2 ಅವಧಿಗೆ ರಶ್ಯದ ಅಧ್ಯಕ್ಷರಾಗಬಹುದು. ಅಂದರೆ ಅವರು 2036ರ ವರೆಗೆ ಅವರಿಗೆ 83 ವರ್ಷ ಆಗುವವರೆಗೂ ಅಧಿಕಾರವನ್ನು ಅನುಭವಿಸಬಹುದು.

ಹೆಚ್ಚುತ್ತಿರುವ ಸಾರ್ವಜನಿಕ ಅತೃಪ್ತಿಯ ನಡುವೆಯೇ, ಭಾರೀ ಸಂಖ್ಯೆಯಲ್ಲಿ ಮತದಾನವಾಗುವಂತೆ ಖಚಿತಪಡಿಸಲು ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ. ಅರ್ಹ ಮತದಾರರ ಪೈಕಿ 50 ಶೇಕಡಕ್ಕಿಂತಲೂ ಅಧಿಕ ಮಂದಿ ಮತದಾನಗೈದರೆ ಹಾಗೂ ಪುಟಿನ್ ಪರವಾಗಿ ಸರಳ ಬಹುಮತ ಲಭಿಸಿದರೆ ಅವರ ವಿಜಯಕ್ಕೆ ಅಷ್ಟೇ ಸಾಕು. ಆದರೆ, ಭಾರೀ ಬಹುಮತದಿಂದ ಗೆಲ್ಲುವ ಯೋಜನೆಯನ್ನು ಪುಟಿನ್ ಹಾಕಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News