ಕೊರೋನ ಬದಲು ಜನರ ಬದುಕು ಹತ್ತಿಕ್ಕಲು ಮುಂದಾದ ಕೇಂದ್ರ: ಬಿ.ಕೆ. ಇಮ್ತಿಯಾಝ್

Update: 2020-06-28 17:03 GMT

ಮಂಗಳೂರು : ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವು ಕೊರೋನ ಸೋಂಕು ಹತ್ತಿಕ್ಕುವ ಬದಲು ಜನರ ಬದುಕನ್ನೇ ನಾಶಗೊಳಿಸಲು ಹೊರಟಿದೆ ಎಂದು ಡಿವೈಎಫ್‌ಐ ದ.ಕ. ಜಿಲ್ಲಾಧ್ಯಕ್ಷ ಬಿ.ಕೆ.ಇಮ್ತಿಯಾಝ್ ವಾಗ್ದಾಳಿ ನಡೆಸಿದ್ದಾರೆ.

ಲಾಕ್‌ಡೌನ್ ಸಂದರ್ಭದಲ್ಲಿ ಕೇಂದ್ರ ಸರಕಾರದ ಸಂಪೂರ್ಣ ವೈಫಲ್ಯ ಖಂಡಿಸಿ ಸಿಪಿಎಂ ನೇತೃತ್ವದಲ್ಲಿ ಜಿಲ್ಲೆಯಾದ್ಯಂತ ವಾರಪೂರ್ತಿ ನಡೆಯುವ ಕಾರ್ಯಕ್ರಮದ ಭಾಗವಾಗಿ ಜಪ್ಪಿನಮೊಗರಿನಲ್ಲಿ ರವಿವಾರ ನಡೆದ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಜಾಗತಿಕ ಮಟ್ಟದಲ್ಲಿ ಕೊರೋನ ಸೋಂಕು ವ್ಯಾಪಕವಾಗಿ ಹರಡಿದ ಸಂದರ್ಭ ಭಾರತ ಅಷ್ಟೊಂದು ಅಪಾಯಕ್ಕೆ ಒಳಗಾಗಿರಲಿಲ್ಲ. ಆ ಸಮಯ ದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಬದಲು ತೀರಾ ನಿರ್ಲಕ್ಷ ವಹಿಸಿದ್ದರ ಫಲವಾಗಿ ಇಂದು ಐದು ಲಕ್ಷಕ್ಕೂ ಮಿಕ್ಕಿ ಕೊರೋನ ಸೋಂಕಿತರು ದೇಶದಲ್ಲಿರುವುದು ಸರಕಾರದ ವೈಫಲ್ಯವನ್ನು ಎತ್ತಿ ತೋರಿಸಿದೆ ಎಂದು ಅವರು ಖಂಡಿಸಿದರು.

ಜನವರಿ 30ರಂದು ವಿಶ್ವ ಆರೋಗ್ಯ ಸಂಸ್ಥೆಯು ಕೊರೋನವನ್ನು ಜಾಗತಿಕ ಸಾಂಕ್ರಾಮಿಕ ರೋಗವೆಂದು ಘೋಷಿಸಿ, ಜಗತ್ತಿನ ಎಲ್ಲ ರಾಷ್ಟ್ರ ಗಳಿಗೂ ಎಚ್ಚರಿಕೆ ರವಾನಿಸಿತು. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಸೇರಿದಂತೆ ದೇಶದ ಹಲವು ವೈಜ್ಞಾನಿಕ ಸಂಸ್ಥೆಗಳು ವಿವಿಧ ಶಿಫಾರಸುಗಳನ್ನೊಳಗೊಂಡ ಎರಡು ವರದಿಗಳನ್ನು ಕೇಂದ್ರ ಸರಕಾರಕ್ಕೆ ಸಲ್ಲಿಸಿದವು. ಅತ್ಯಂತ ತುರ್ತು ಆದ್ಯತೆಯ ಮೇಲೆ ಗಮನ ಹರಿಸಿ ಜನರ ಜೀವ ರಕ್ಷಿಸಬೇಕಾದ ಕೇಂದ್ರ ಸರಕಾರ ಈ ಸಂದರ್ಭದಲ್ಲೂ ಕಾರ್ಪೊರೇಟ್ ಕಂಪೆನಿಗಳ ಹಿತ ಕಾಯುವ ಮೂಲಕ ದೇಶದ್ರೋಹಿಯಾಗಿ ವರ್ತಿಸಿದೆ ಎಂದು ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಭಾಗವಹಿಸಿದ ಸಿಪಿಎಂ ಮಂಗಳೂರು ನಗರ ಮುಖಂಡ ದಿನೇಶ್ ಶೆಟ್ಟಿ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಶಾಸಕರ ಬೇಜವಾಬ್ದಾರಿ ವರ್ತನೆಯನ್ನು ತೀವ್ರವಾಗಿ ಖಂಡಿಸಿದರು. ಕೊರೋನ ಸಂಕಷ್ಟದ ಕಾಲದಲ್ಲಿ ನಿಷ್ಪಕ್ಷಪಾತವಾಗಿ ಕಾರ್ಯ ನಿರ್ವಹಿಸಬೇಕಾದ ಜಿಲ್ಲಾಡಳಿತವನ್ನು ಸಂಪೂರ್ಣವಾಗಿ ತಮ್ಮ ಹತೋಟಿಯಲ್ಲಿಟ್ಟು ಕೀಳು ಮಟ್ಟದ ರಾಜಕೀಯ ನಡೆಸಿದ್ದಾರೆ. ಕೊರೋನವನ್ನು ಮುಂದಿಟ್ಟು ಬಡಪಾಯಿ ಜನರ ಬದುಕನ್ನೇ ನಾಶ ಮಾಡಲು ಹೊರಟಿರುವುದು ಅಕ್ಷಮ್ಯ ಎಂದು ಟೀಕಿಸಿದರು.

ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾಧ್ಯಕ್ಷೆ ಜಯಂತಿ ಬಿ. ಶೆಟ್ಟಿ ಮಾತನಾಡಿ, ಕೆಲಸ ಕಳೆದುಕೊಂಡ ಕಾರ್ಮಿಕರು, ಬೀಡಿ, ಹೋಟೆಲ್, ಬೀದಿಬದಿ, ಹಮಾಲಿ, ಟೈಲರ್, ಬಸ್ ನೌಕರರು, ಖಾಸಗಿ ಶಾಲಾ ಶಿಕ್ಷಕರು, ಕಲಾವಿದರು, ಬಿಸಿಯೂಟ ಕಾರ್ಮಿಕರಿಗೆ ವಿಶೇಷ ಪ್ಯಾಕೇಜ್ ನೀಡಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಿಪಿಎಂ ನಾಯಕರಾದ ಮನೋಜ್ ಶೆಟ್ಟಿ, ಉದಯಚಂದ್ರ ರೈ, ಚಂದ್ರಹಾಸ ಜೆ., ಜಯಲಕ್ಷ್ಮೀ, ಡಿವೈಎಫ್‌ಐ ಘಟಕಾಧ್ಯಕ್ಷ ಅಭಿಷೇಕ್ ಶೆಟ್ಟಿ ಮುಂತಾದವರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News