ಮನಪಾಕ್ಕೆ ಮಾತ್ರ ಕೊರೋನ ಭಯವೇ ? : ಕಚೇರಿಯೆದುರು ಸಾರ್ವಜನಿಕರ ಅಸಮಾಧಾನದ ಮಾತು

Update: 2020-06-29 06:56 GMT

ಮಂಗಳೂರು, ಜೂ. 29: ನಗರದ ಎಲ್ಲಾ ಅಂಗಡಿ, ಮಾಲ್‌ಗಳು, ಕಚೇರಿಗಳು ಕಾರ್ಯ ನಿರ್ವಹಿಸುತ್ತಿವೆ. ಆದರೆ ಮಂಗಳೂರು ಮಹಾನಗರ ಪಾಲಿಕೆಯ ಕಚೇರಿಗೆ ಮಾತ್ರ ಸಾರ್ವಜನಿಕ ಪ್ರವೇಶ ನಿರ್ಬಂಧಿಸಲಾಗಿದೆ. ಕೊರೋನ ಭಯ ಈ ಕಚೇರಿಗೆ ಮಾತ್ರವೇ ? ಮನಪಾ ಕಚೇರಿಯೆದುರು ಸಾರ್ವಜನಿಕರಿಂದ ಕೇಳಿಬಂದ ಅಸಮಾಧಾನದ ಮಾತಿದು.

ಕೊರೋನ ತಡೆಗಟ್ಟುವ ನಿಟ್ಟಿನಲ್ಲಿ ಸುರಕ್ಷಿತ ಅಂತರ ಕಾಯ್ದುಕೊಳ್ಳಬೇಕಾಗಿರುವುದರಿಂದ ಮುಂಜಾಗೃತಾ ಕ್ರಮವಾಗಿ ಜೂನ್ 29ರಿಂದ ಒಂದು ವಾರ ಕಾಲ ಪಾಲಿಕೆ ಕಚೇರಿಗೆ ಸಾರ್ವಜನಿಕ ಪ್ರವೇಶವನ್ನು ನಿಷೇಧಿಸಿ ಮೇಯರ್ ನಿನ್ನೆ ಪ್ರಕಟನೆಯನ್ನು ಹೊರಡಿಸಿದ್ದರು.

ನಿನ್ನೆ ಸಂಜೆಯ ವೇಳೆಗೆ ಮೇಯರ್ ದಿವಾಕರ್ ಪಾಂಡೇಶ್ವರ ಅವರು ಈ ಪ್ರಕಟನೆಯನ್ನು ನೀಡಿದ್ದು, ಮಾಧ್ಯಮ, ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾಗಿದೆ. ನಿನ್ನೆ ರವಿವಾರ ಹಾಗೂ ಸಂಜೆಯ ವೇಳೆಗೆ ಮೇಯರ್ ಅವರು ದಿಢೀರನೆ ಈ ಸಾರ್ವಜನಿಕ ನಿರ್ಬಂಧದ ಪ್ರಕಟನೆ ನೀಡಿರುವ ಮಾಹಿತಿ ಕೆಲವರಿಗೆ ತಲುಪಿಲ್ಲ. ಪ್ರವೇಶ ದ್ವಾರದಲ್ಲೇ ಸಾರ್ವಜನಿಕ ಪ್ರವೇಶ ನಿರ್ಬಂಧ ಎಂಬ ಫಲಕವನ್ನು ಅಳವಡಿಸಲಾಗಿದೆ. ಹಾಗಿದ್ದರೂ ಮಾಹಿತಿ ಇಲ್ಲದ ಜನಸಾಮಾನ್ಯರು ಇಂದು ಬೆಳಗ್ಗಿನಿಂದ ಮನಪಾ ಕಚೇರಿಯತ್ತ ಬರುತ್ತಿದ್ದು, ಅಲ್ಲಿ ಸೆಕ್ಯೂರಿಟಿ ಗಾರ್ಡ್‌ಗಳು ಅವನ್ನು ಹಿಂದಕ್ಕೆ ಕಳುಹಿಸುತ್ತಿದ್ದಾರೆ.

ಕೆಲವರು ಮರು ಮಾತಿಲ್ಲದೆ ಹಿಂತಿರುಗಿದರೆ, ಮತ್ತೆ ಕೆಲವರು ಈ ರೀತಿ ಅಸಮಾಧಾನ ವ್ಯಕ್ತಪಡಿಸುತ್ತಾ ತೆರಳುತ್ತಿದ್ದಾರೆ. ಇನ್ನು ಕೆಲವರು ಸೆಕ್ಯುರಿಟಿ ಗಾರ್ಡ್ ಬಳಿ ತಮಗೆ ತುರ್ತಾಗಿ ಕೆಲಸ ಆಗಬೇಕಾಗಿದೆ. ಒಳ ಹೋಗಲು ಅವಕಾಶ ನೀಡಿ ಎಂದು ಮನವಿ ಮಾಡುತ್ತಿರುವ ದೃಶ್ಯವೂ ಕಂಡು ಬಂತು. ವಯೋವೃದ್ಧರು, ಮಹಿಳೆಯರು ಸೇರಿದಂತೆ ನೂರಾರು ಮಂದಿ ಜನನ ಮರಣ ಪ್ರಮಾಣ ಪತ್ರ ಸೇರಿದಂತೆ ವಿವಿಧ ಕೆಲಸ ಕಾರ್ಯಗಳಿಗಾಗಿ ಇಂದು ಕಚೇರಿಗೆ ಆಗವಿುಸಿ ನಿರಾಶೆಯಿಂದ ಹಿಂತಿರುಗುತ್ತಿದ್ದಾರೆ.

ಅಧಿಕಾರಿಗಳು, ಕಚೇರಿ ಸಿಬ್ಬಂದಿಗೆ ಮಾತ್ರವೇ ಸೆಕ್ಯುರಿಟಿ ಗಾರ್ಡ್ ತಪಾಸಣೆ ನಡೆಸಿ ಒಳಗೆ ಹೋಗಲು ಅವಕಾಶ ನೀಡುತ್ತಿದ್ದಾರೆ. ನಗರದ ರಸ್ತೆ, ಒಳಚರಂಡಿ ಸೇರಿದಂತೆ ವಿವಿಧ ರೀತಿಯ ಗುತ್ತಿಗೆ ಕಾರ್ಯ ನಿರ್ವಹಿಸುವ ಕೆಲ ಗುತ್ತಿಗೆದಾರರ ಗುಂಪೊಂದು ಕೂಡಾ ಕಚೇರಿ ಹೊರಗಡೆ ತಮ್ಮ ಬಿಲ್ ಪಾವತಿಯ ಕುರಿತು ಪ್ರವೇಶಕ್ಕಾಗಿ ಕಾಯುತ್ತಿದ್ದ ದೃಶ್ಯ ಕಂಡು ಬಂತು.

ಇದೇ ವೇಳೆ ಕೊರೋನ ಮುಂಜಾಗೃತಾ ಕ್ರಮವಾಗಿ ಮಂಗಳೂರು ಮಹಾನಗರ ಪಾಲಿಕೆ ಕಚೇರಿಯ ಸುತ್ತಮುತ್ತ ಅಗ್ನಿಶಾಮಕ ದಳದ ವಾಹನದ ಮೂಲಕ ಸ್ಯಾನಿಟೈಸೇಶನ್ ಕಾರ್ಯವೂ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News