ದ.ಕ. ಜಿಲ್ಲೆ : ಸೋಮವಾರ ಮತ್ತೆ 32 ಮಂದಿಗೆ ಕೊರೋನ

Update: 2020-06-29 14:33 GMT

ಮಂಗಳೂರು, ಜೂ. 29: ದ.ಕ. ಜಿಲ್ಲೆಯಲ್ಲಿ ಸೋಮವಾರ ಮತ್ತೆ 32 ಕೊರೋನ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದು, ನಾಲ್ವರು ಗುಣಮುಖ ರಾಗಿದ್ದಾರೆ. ಜಿಲ್ಲೆಯಲ್ಲಿ ಇದುವರೆಗಿನ ಒಟ್ಟು ಸೋಂಕಿತರ ಸಂಖ್ಯೆ 705ಕ್ಕೆ ಏರಿಕೆಯಾಗಿದೆ.

ಜಿಲ್ಲೆಯಲ್ಲಿ ಕೊರೋನ ಸೋಂಕು ಹೆಚ್ಚಳದಿಂದ ಪರಿಸ್ಥಿತಿಗೆ ಮತ್ತಷ್ಟು ಬಿಗಡಾಯಿಸಿದೆ. ಸೋಮವಾರ ಓರ್ವರು ಮೃತಪಟ್ಟಿದ್ದು, ಸೋಂಕಿತರ ಸಂಖ್ಯೆಯಲ್ಲೂ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಮೂಲ ಪತ್ತೆಯಾಗದಿರುವ ಪ್ರಕರಣಗಳು ಹೆಚ್ಚುತ್ತಿರುವುದು ಭೀತಿ ಮೂಡಿಸಿದೆ.

ಸೋಂಕಿತರ ಪೈಕಿ ಒಂಬತ್ತು ಮಂದಿಗೆ ಶೀತಜ್ವರದ ಲಕ್ಷಣದೊಂದಿಗೆ (ಐಎಲ್‌ಐ) ಸೋಂಕು ಕಾಣಿಸಿಕೊಂಡಿದೆ. ಉಸಿರಾಟ ಸಮಸ್ಯೆಯಿಂದಾಗಿ (ಎಸ್‌ಎಆರ್‌ಐ) ಆರು ಮಂದಿ, ಪ್ರಾಥಮಿಕ ಸಂಪರ್ಕದಲ್ಲಿದ್ದ 11 ಮಂದಿ, ಹೊರರಾಜ್ಯದಿಂದ ಬಂದ ಓರ್ವರಲ್ಲಿ ಸೋಂಕು ದೃಢಪಟ್ಟಿದೆ. ಐವರು ಸೋಂಕಿತರ ಮೂಲ ಇನ್ನೂ ನಿಗೂಢವಾಗಿಯೇ ಉಳಿದುಕೊಂಡಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ತಿಳಿಸಿದ್ದಾರೆ.

ನಾಲ್ಕು ಮಂದಿ ಡಿಸ್ಚಾರ್ಜ್: ಕೊರೋನ ಸೋಂಕಿನಿಂದ ವೆನ್ಲಾಕ್ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರ ಪೈಕಿ 4 ಮಂದಿ ಗುಣಮುಖರಾಗಿದ್ದು, ಸೋಮವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಒಟ್ಟು 426 ಮಂದಿ ಕೊರೋನ ಸೋಂಕು ಮುಕ್ತರಾಗಿ ಮನೆಗೆ ತೆರಳಿದಂತಾಗಿದೆ.

ನಾಲ್ವರಿಗೆ ಐಸಿಯುವಿನಲ್ಲಿ ಚಿಕಿತ್ಸೆ: ಪ್ರಸ್ತುತ 265 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಬಹುತೇಕರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಆದರೆ ವಿವಿಧ ಸೋಂಕಿನಿಂದ ಬಳಲುತ್ತಿರುವ ನಾಲ್ಕು ಮಂದಿಗೆ ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಡಯಾಬಿಟಿಸ್ ಮತ್ತು ನ್ಯುಮೋನಿಯಾದಿಂದ ಬಳಲುತ್ತಿರುವ 49 ವರ್ಷದ ವ್ಯಕ್ತಿ, ಲಿವರ್, ಡಯಾಬಿಟಿಸ್ ಮತ್ತು ಹೃದಯರೋಗ ಸಮಸ್ಯೆಯಿಂದ ಬಳಲುತ್ತಿರುವ 57 ವರ್ಷದ ಮಹಿಳೆ, ಡಯಾಬಿಟಿಸ್, ಅಧಿಕ ರಕ್ತದ ಒತ್ತಡ ಮತ್ತು ಪಾರ್ಕಿನ್‌ಸನ್ ಕಾಯಿಲೆಯಿಂದ ಬಳಲುತ್ತಿರುವ 78 ವರ್ಷದ ವ್ಯಕ್ತಿ ಮತ್ತು ನ್ಯುಮೋನಿಯಾದಿಂದ ಬಳಲುತ್ತಿರುವ 39 ವರ್ಷದ ವ್ಯಕ್ತಿಗೆ ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸೋಮವಾರ ಒಟ್ಟು 458 ಪರೀಕ್ಷಾ ವರದಿಗಳು ಬಂದಿದ್ದು, ಈ ಪೈಕಿ 32 ಪಾಸಿಟಿವ್ ಮತ್ತು 426 ನೆಗೆಟಿವ್ ಆಗಿವೆ ಎಂದು ವೈದ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News