ಉಡುಪಿ ಜಿಲ್ಲೆಯ 18 ಮಂದಿಯಲ್ಲಿ ಕೊರೋನ ಸೋಂಕು ದೃಢ

Update: 2020-06-29 15:33 GMT

ಉಡುಪಿ, ಜೂ.29: ಜಿಲ್ಲೆಯಲ್ಲಿ ಸೋಮವಾರ 18 ಮಂದಿಯಲ್ಲಿ ಕೋವಿಡ್-19 ಸೋಂಕು ಕಂಡುಬಂದಿದೆ. ಇವರೆಲ್ಲರ ಸ್ಯಾಂಪಲ್ ಪರೀಕ್ಷೆ ಪಾಸಿಟಿವ್ ಫಲಿತಾಂಶ ನೀಡಿದ್ದು, ಎಲ್ಲರನ್ನು ಈಗಾಗಲೇ ವಿವಿಧ ಕೋವಿಡ್ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆಯನ್ನು ನೀಡಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್ ‌ಚಂದ್ರ ಸೂಡ ತಿಳಿಸಿದ್ದಾರೆ.

ಈ ಮೂಲಕ ಜಿಲ್ಲೆಯಲ್ಲಿ ಇದುವರೆಗೆ ಸೋಂಕು ಪತ್ತೆಯಾದವರ ಒಟ್ಟು ಸಂಖ್ಯೆ 1,197ಕ್ಕೇರಿದೆ. ಇಂದು ಪಾಸಿಟಿವ್ ಬಂದ 18 ಮಂದಿಯಲ್ಲಿ ಮಹಾರಾಷ್ಟ್ರ- ಮುಂಬೈಗಳಿಂದ ಆಗಮಿಸಿದ 5 ಮಂದಿ, ಬೆಂಗಳೂರಿನಿಂದ ಬಂದ ನಾಲ್ವರು ಹಾಗೂ ಜಿಲ್ಲೆಯ ಸ್ಥಳೀಯ ಪ್ರಾಥಮಿಕ ಸಂಪರ್ಕಿತರು 9 ಮಂದಿ ಸೇರಿದ್ದಾರೆ. ಉಡುಪಿ ತಾಲೂಕಿನ 9, ಕುಂದಾಪುರದ 4 ಹಾಗೂ ಕಾರ್ಕಳ ತಾಲೂಕಿನ ಐವರು ಇವರಲ್ಲಿದ್ದಾರೆ. 13 ಮಂದಿ ಪುರುಷರು, ನಾಲ್ವರು ಮಹಿಳೆಯರು ಹಾಗೂ 10 ವರ್ಷದೊಳಗಿನ ಒಬ್ಬ ಬಾಲಕಿಯಲ್ಲಿ ಸೋಂಕು ಪತ್ತೆಯಾಗಿದೆ ಎಂದು ಡಾ.ಸೂಡ ವಿವರಿಸಿದರು.

ಹೆಬ್ರಿ ಆಸ್ಪತ್ರೆಯ ಮತ್ತೊಬ್ಬ ಸಿಬ್ಬಂದಿಗೆ ಪಾಸಿಟಿವ್: ರಾಜ್ಯ ಆರೋಗ್ಯ ಇಲಾಖೆಯ ಕೊರೋನ ಸೋಂಕಿತರ ಪಟ್ಟಿಯಲ್ಲಿ ಇಂದು ಸ್ಥಾನ ಪಡೆದವರಲ್ಲಿ ಹೆಬ್ರಿ ಸಮುದಾಯ ಆರೋಗ್ಯ ಕೇಂದ್ರದ ಮತ್ತೊಬ್ಬ ಸಿಬ್ಬಂದಿ ಸೇರಿದ್ದಾರೆ. ಇದೇ ಆಸ್ಪತ್ರೆಯ ಆಯುಷ್ ವೈದ್ಯರು ಸೇರಿದಂತೆ ಒಟ್ಟು ಆರು ಮಂದಿ ಸಿಬ್ಬಂದಿಗಳು ನಿನ್ನೆ ಪಾಸಿಟಿವ್ ಬಂದವರ ಪಟ್ಟಿಯಲ್ಲಿದ್ದರು. ಈ ಮೂಲಕ ಸಿಎಚ್‌ಸಿಯ 7 ಮಂದಿ ಪಾಸಿಟಿವ್ ಬಂದಂತಾಯಿತು.

ಪ್ರಾಥಮಿಕ ಸಂಪರ್ಕಿತರು 6 ಮಂದಿ : ಸೋಮವಾರ ಸ್ಥಳೀಯವಾಗಿ ಪಾಸಿಟಿವ್ ಬಂದವರಲ್ಲಿ ಹೆಬ್ರಿ ಆಸ್ಪತ್ರೆಯ ಸಿಬ್ಬಂದಿ ಅಲ್ಲದೇ, ಜಿಲ್ಲೆಯಲ್ಲಿ ಈಗಾಗಲೇ ಪಾಸಿಟಿವ್ ಬಂದವರ ಪ್ರಾಥಮಿಕ ಸಂಪರ್ಕಿತರು ಆರು ಮಂದಿ, ಕೆಲದಿನಗಳ ಹಿಂದೆ ಪಾಸಿಟಿವ್ ಆದ ಮಣಿಪಾಲ ಕೆಎಂಸಿ ಸ್ಟಾಫ್ ನರ್ಸ್‌ರ ಸಂಪರ್ಕಿತರು ಹಾಗೂ ಉಡುಪಿ ಬನ್ನಂಜೆ ರಸ್ತೆಯಲ್ಲಿರುವ ಹೊಟೇಲ್ ಒಂದರ ಬಾಣಸಿಗರು ಸೇರಿದ್ದಾರೆ.

ಬೆಂಗಳೂರಿನಿಂದ ಊರಿಗೆ ಮರಳಿ ಬಂದು ಪಾಸಿಟಿವ್ ಆದ ನಾಲ್ವರಲ್ಲಿ ಇಬ್ಬರು ಬೈಂದೂರು ತಾಲೂಕಿನ ವಂಡ್ಸೆಯವರಾದರೆ, ಒಬ್ಬರು ಉಡುಪಿ ಹಾಗೂ ಒಬ್ಬರು ಹೆಬ್ರಿಯವರು ಎಂದು ಡಾ.ಸೂಡ ತಿಳಿಸಿದರು.

ಐವರು ಬಿಡುಗಡೆ: ಜಿಲ್ಲೆಯಲ್ಲಿ ಸೋವಿಡ್ ಚಿಕಿತ್ಸೆಯ ಬಳಿಕ ಗುಣಮುಖ ರಾದ ಐವರು ಇಂದು ಬಿಡುಗಡೆಗೊಂಡಿದ್ದಾರೆ. ಇವರಲ್ಲಿ ಉಡುಪಿ ಡಾ. ಟಿಎಂಎ ಪೈ ಆಸ್ಪತ್ರೆಯಿಂದ ಮೂವರು ಹಾಗೂ ಕಾರ್ಕಳ ಸರಕಾರಿ ಆಸ್ಪತ್ರೆಯ ಇಬ್ಬರು ಸೇರಿದ್ದಾರೆ. ಈ ಮೂಲಕ ಬಿಡುಗಡೆಗೊಂಡವರ ಒಟ್ಟು ಸಂಖ್ಯೆ 1056ಕ್ಕೇರಿದೆ. ಇನ್ನು ಕೇವಲ 139 ಮಂದಿ ಮಾತ್ರ ಜಿಲ್ಲೆಯಲ್ಲಿ ಕೊರೋನ ಸೋಂಕಿನ ಚಿಕಿತ್ಸೆಯಲ್ಲಿದ್ದಾರೆ ಎಂದವರು ಹೇಳಿದರು.

ಕಳೆದ ಮೂರು ದಿನಗಳಿಂದ ನಗರದ ಡಾ.ಟಿಎಂಎ ಪೈ ಕೋವಿಡ್ ಆಸ್ಪತ್ರೆಯ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇಬ್ಬರು ಹಿರಿಯ ನಾಗರಿಕರ ಸ್ಥಿತಿ ಇನ್ನೂ ಗಂಭೀರವಿದ್ದು,ಇಬ್ಬರಿಗೂ ವೆಂಟಿಲೇಟರ್‌ನಲ್ಲೇ ಚಿಕಿತ್ಸೆ ಮುಂದುವರಿದಿದೆ ಎಂದು ಡಿಎಚ್‌ಓ ವಿವರಿಸಿದರು.

74 ನೆಗೆಟಿವ್: ಸೋಮವಾರ 74 ಮಂದಿಯ ಗಂಟಲುದ್ರವದ ಮಾದರಿ ನೆಗೆಟಿವ್ ಆಗಿ ಬಂದಿವೆ. ಅಲ್ಲದೇ ಇಂದು ಇನ್ನೂ ಒಟ್ಟು 35 ಮಂದಿಯ ಗಂಟಲುದ್ರವದ ಸ್ಯಾಂಪಲ್‌ಗಳನ್ನು ಸೋಂಕಿನ ಪರೀಕ್ಷೆಗಾಗಿ ಕಳುಹಿಸಲಾಗಿದೆ. ಇದರಲ್ಲಿ ಕೋವಿಡ್ ಶಂಕಿತರು 15 ಮಂದಿ, ಕೋವಿಡ್ ಸಂಪರ್ಕಿತರು 6, ಉಸಿರಾಟ ತೊಂದರೆಯ ಒಬ್ಬರು, ಶೀತಜ್ವರದಿಂದ ಬಳಲುವ 6 ಹಾಗೂ ಕೋವಿಡ್ ಹಾಟ್‌ಸ್ಪಾಟ್‌ಗಳಿಂದ ಬಂದ 7 ಮಂದಿಯ ಸ್ಯಾಂಪಲ್‌ಗಳು ಸೇರಿವೆ.

ಇಂದು ಪಡೆದ 35 ಮಂದಿ ಸ್ಯಾಂಪಲ್‌ಗಳೊಂದಿಗೆ ಜಿಲ್ಲೆಯಲ್ಲಿ ಈವರೆಗೆ ಸಂಗ್ರಹಿಸಿದ ಮಾದರಿಗಳ ಒಟ್ಟು ಸಂಖ್ಯೆ 14,268ಕ್ಕೇರಿದೆ. ಇವುಗಳಲ್ಲಿ ಈವರೆಗೆ 12,862 ನೆಗೆಟಿವ್, 1197 ಪಾಸಿಟಿವ್ ಆಗಿವೆ. ಇನ್ನು ಒಟ್ಟು 209 ಸ್ಯಾಂಪಲ್ ಗಳ ಪರೀಕ್ಷಾ ವರದಿ ಬರಬೇಕಿದೆ. ಸೋಮವಾರ 10 ಮಂದಿಯನ್ನು ಐಸೋಲೇಷನ್ ವಾರ್ಡ್‌ಗೆ ದಾಖಲಿಸಲಾಗಿದೆ. ಇವರಲ್ಲಿ ಉಸಿರಾಟ ತೊಂದರೆ ಯವರು ನಾಲ್ವರು, ಕೋವಿಡ್ ಸಂಪರ್ಕಿತರು ಇಬ್ಬರು ಹಾಗೂ ಶೀತಜ್ವರದಿಂದ ಬಳಲುವ ನಾಲ್ವರು ಸೇರಿದ್ದಾರೆ.

ಜಿಲ್ಲೆಯ ಆಸ್ಪತ್ರೆಗಳ ಐಸೋಲೇಶನ್ ವಾರ್ಡ್‌ಗಳಿಂದ ಇಂದು 12 ಮಂದಿ ಬಿಡುಗಡೆಗೊಂಡಿದ್ದು, 71 ಮಂದಿ ಇನ್ನೂ ವೈದ್ಯರ ನಿಗಾದಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ. ಇಂದು ಕೊರೋನ ಸೋಂಕಿನ ಗುಣಲಕ್ಷಣದ 11 ಮಂದಿ ಸೇರಿದಂತೆ ಒಟ್ಟು 5838 ಮಂದಿಯನ್ನು ಕೊರೋನ ತಪಾಸಣೆ ಗಾಗಿ ನೊಂದಾಯಿಸಿ ಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಈಗ 801 ಮಂದಿ ಹೋಮ್ ಕ್ವಾರಂಟೈನ್ ನಲ್ಲಿದ್ದಾರೆ ಎಂದು ಡಾ.ಸುಧೀರ್‌ ಚಂದ್ರ ಸೂಡ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News