ಮೈಕ್ರೋ ಫೈನಾನ್ಸ್ ಸಾಲ ಬಡ್ಡಿ ಸಹಿತ ಮನ್ನಾಕ್ಕೆ ಜನವಾದಿ ಆಗ್ರಹ

Update: 2020-06-29 16:54 GMT

ಕುಂದಾಪುರ, ಜೂ.29: ಸ್ತ್ರೀ ಶಕ್ತಿ, ಸ್ವಸಹಾಯ ಸಂಘಗಳು, ರಾಷ್ಟ್ರೀಕೃತ/ಸಹಕಾರ ಬ್ಯಾಂಕುಗಳು, ಸಹಕಾರ ಸಂಘಗಳು, ಧರ್ಮಸ್ಥಳ, ಕಿರುಸಾಲ ಸಂಸ್ಥೆಗಳು ಮುಂತಾದವುಗಳಿಂದ ಪಡೆದ ಸಾಲಗಳನ್ನು ಬಡ್ಡಿ ಸಹಿತ ಮನ್ನಾ ಮಾಡಲು ಒತ್ತಾಯಿಸಿ ಅಖಿಲ ಭಾರತ ಜನವಾದಿ ಮಹಿಳ ಸಂಘಟನೆಯು ಸೋಮವಾರ ಕುಂದಾಪುರ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿತು.

ಮಹಿಳೆಯರನ್ನು ಸಾಲದ ಕಂತು ಕಟ್ಟಲು ಹಿಂಸಿಸುತ್ತಿರುವ ಬ್ಯಾಂಕ್ ಮತ್ತು ಮೈಕ್ರೋ ಫೈನಾನ್ಸ್ ಸಂಸ್ಥೆಗಳ ವಿರುದ್ಧ ಕ್ರಮ ಜರುಗಿಸಬೇಕು. ಸಾಲಗಳ ಮೇಲಿನ ಬಡ್ಡಿಯನ್ನು ಶೇ.75 ಕೇಂದ್ರ ಸರಕಾರ ಹಾಗೂ ಶೇ.25ರಷ್ಟು ರಾಜ್ಯ ಸರಕಾರಗಳು ಭರಿಸಬೇಕು. ಇದಕ್ಕೆ ಅಗತ್ಯವಾದ ಆರ್ಥಿಕ ಸಂಪನ್ಮೂಲವನ್ನು ಕೇಂದ್ರ ಸರಕಾರವು ಕೂಡಲೇ ಬಿಡುಗಡೆ ಮಾಡಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಯಿತು.

ಸರಕಾರವು ತಕ್ಷಣ ಸ್ವಸಹಾಯ ಸಂಘಗಳ ಮಹಿಳೆಯರಿಗೆ ಶೂನ್ಯ ಬಡ್ಡಿ ದರದಲ್ಲಿ ಹೊಸ ಸಾಲವನ್ನು ಮಂಜೂರು ಮಾಡಲು ರಾಷ್ಟ್ರೀಕೃತ ಬ್ಯಾಂಕುಗಳಿಗೆ ಆದೇಶ ನೀಡಬೇಕು. ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳ ಸದಸ್ಯರಿಗೆ ತರಬೇತಿ,ಕಚ್ಛಾ ಪದಾರ್ಥಗಳು ಹಾಗು ಮಾರಾಟದ ವ್ಯವಸ್ಥೆ ಮಾಬೇಕು ಎಂದು ಸಂಘಟನೆ ಆಗ್ರಹಿಸಿದೆ.

ಈ ಸಂದರ್ಭದಲ್ಲಿ ಜನವಾದಿ ಮಹಿಳಾ ಸಂಘಟನೆಯ ತಾಲೂಕು ಅಧ್ಯಕ್ಷೆ ಆರತಿ, ಕಾರ್ಯದರ್ಶಿ ಶೀಲಾವತಿ, ಮುಖಂಡರಾದ ಬಲ್ಕೀಸ್, ನಾಗರತ್ನ ನಾಡ, ಸಿಐಟಿಯು ಮುಖಂಡರಾದ ಎಚ್.ನರಸಿಂಹ, ಸುರೇಶ್ ಕಲ್ಲಾಗರ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News