ಪಾದೂರು ಪರಿಸರದಲ್ಲಿ ಅನಿಲ ಸೋರಿಕೆಯ ವಾಸನೆ : ಸ್ಥಳೀಯರಲ್ಲಿ ಆತಂಕ

Update: 2020-06-29 16:58 GMT

ಕಾಪು, ಜೂ.29: ಮಜೂರು ಗ್ರಾಪಂ ವ್ಯಾಪ್ತಿಯ ಪಾದೂರಿನ ಐಎಸ್‌ಪಿ ಆರ್‌ಎಲ್‌ನಲ್ಲಿರುವ ಕಚ್ಚಾ ತೈಲ ಸಂಗ್ರಹಗಾರ ಪರಿಸರದಲ್ಲಿ ಇಂದು ಬೆಳಗ್ಗೆ ಯಿಂದ ಅನಿಲ ಸೋರಿಕೆಯಂತಹ ವಾಸನೆ ಬರುತ್ತಿದ್ದು, ಇದರಿಂದ ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದರು. ಈ ಹಿನ್ನೆಲೆಯಲ್ಲಿ ಕಾಪು ತಹಶೀಲ್ದಾರ್ ಹಾಗೂ ಇಲಾಖಾಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

ತೈಲ ಸಂಗ್ರಹಗಾರದ ಸುತ್ತಮುತ್ತಲಿನ ಪರಿಸರದಲ್ಲಿ ಬೆಳಗ್ಗೆ 11ಗಂಟೆಯಿಂದ ಅನಿಲ ಸೋರಿಕೆಯಾಗಿರುವ ರೀತಿಯಲ್ಲಿ ವಾಸನೆ ಬರುತ್ತಿದ್ದು, ಇದರಿಂದ ಆತಂಕಿತರಾದ ಸ್ಥಳೀಯರು ಈ ಕುರಿತು ಮಜೂರು ಗ್ರಾಪಂಗೆ ಮಾಹಿತಿ ನೀಡಿದ್ದಾರೆ. ಮಧ್ಯಾಹ್ನ ಮೂರು ಗಂಟೆಯವರೆಗೆ ವಾಸನೆ ಕಡಿಮೆಯಾಗದ ಹಿನ್ನೆಲೆಯಲ್ಲಿ ಈ ಸಂಬಂಧ ಗ್ರಾಪಂ ಅಧ್ಯಕ್ಷ ಸಂದೀಪ್ ರಾವ್, ಜಿಲ್ಲಾಧಿಕಾರಿ ಗಳಿಗೆ ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಜಿಲ್ಲಾಧಿಕಾರಿಗಳ ಸೂಚನೆಯಂತೆ ಕಾಪು ತಹಶೀಲ್ದಾರ್ ಮುಹಮ್ಮದ್ ಇಸಾಕ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಪರಿಸರ ಅಧಿಕಾರಿ ವಿಜಯಾ ಹೆಗ್ಡೆ ಹಾಗೂ ಕಾಪು ವೃತ್ತ ನಿರೀಕ್ಷಕ ಮಹೇಶ್ ಪ್ರಸಾದ್ ಕೂಡ ಇದ್ದರು. ಈ ಅನಿಲ ಸೋರಿಕೆ ಯಂತಹ ವಾಸನೆಯಿಂದ ವೃದ್ಧರು ಹಾಗೂ ಮಕ್ಕಳು ವಾಂತಿ ಮತ್ತು ತಲೆ ತಿರುಗಿ ಬಿದ್ದಿ ರುವುದಾಗಿ ಸಾರ್ವಜನಿಕರು ಆರೋಪಿಸಿದರು.

ಜನರ ಅಹವಾಲು ಆಲಿಸಿದ ಅಧಿಕಾರಿಗಳು, ಸಂಗ್ರಹಾಗಾರದ ಕಚೇರಿಗೆ ತೆರಳಿ ಸಂಬಂಧಪಟ್ಟ ವ್ಯವಸ್ಥಾಪಕರನ್ನು ವಿಚಾರಿಸಿದರು. ಅನಿಲ ಸೋರಿಕೆ ಸಂಬಂಧ ಪರಿಶೀಲನೆ ನಡೆಸಿ ಕೂಡಲೇ ಕ್ರಮ ತೆಗೆದುಕೊಳ್ಳುವಂತೆ ಅವರಿಗೆ ತಹಶೀಲ್ದಾರ್ ಹಾಗೂ ಪರಿಸರ ಅಧಿಕಾರಿಗಳು ಸೂಚನೆ ನೀಡಿದರು. ಸಂಜೆ ವೇಳೆ ವಾಸನೆ ಕ್ರಮೇಣ ಕಡಿಮೆ ಆಗಿದೆ ಎಂದು ತಿಳಿದುಬಂದಿದೆ.

ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ಸಂದೀಪ್ ರಾವ್, ಉಪಾಧ್ಯಕ್ಷೆ ಸಹಾನ ತಂತ್ರಿ, ಜಿಪಂ ಸದಸ್ಯೆ ಶಿಲ್ಪಾ ಜಿ.ಸುವರ್ಣ, ತಾಪಂ ಸದಸ್ಯೆ ಶಶಿಪ್ರಪಭಾ ಶೆಟ್ಟಿ, ಜನ ಜಾಗೃತಿ ಸಮಿತಿ ಸಂಚಾಲಕ ಅರುಣ್ ಶೆಟ್ಟಿ ಪಾದೂರು ಮೊದಲಾದವರು ಉಪಸ್ಥಿತರಿದ್ದರು.

ಸ್ಥಳಕ್ಕೆ ಹೋದಾಗ ಕೆಲವು ಭಾಗದಲ್ಲಿ ಅನಿಲ ಸೋರಿಕೆಯಂತಹ ವಾಸನೆ ಬರುತ್ತಿತ್ತು. ಕೆಲವು ಕಡೆಗಳಲ್ಲಿ ಆ ವಾಸನೆ ಇರಲಿಲ್ಲ. ತೈಲ ಸಂಗ್ರಹಗಾರದ ವ್ಯವಸ್ಥಾಪಕರಲ್ಲಿ ಈ ಬಗ್ಗೆ ವಿಚಾರಿಸಿದ್ದೇವೆ. ಅವರಲ್ಲಿ ಎಲ್ಲವೂ ಸರಿಯಾಗಿದೆ ಎಂದು ತಿಳಿಸಿದ್ದಾರೆ. ಆದರೂ ಪರಿಶೀಲನೆ ಮಾಡಿ ಕ್ರಮ ತೆಗೆದುಕೊಳ್ಳುವಂತೆ ನಿರ್ದೇಶನ ನೀಡಿದ್ದೇವೆ. ನಾವು ಸಂಜೆ ವಾಪಾಸ್ಸು ಬರುವಾಗ ಎಲ್ಲೂ ವಾಸನೆ ಇರಲಿಲ್ಲ ಇಲ್ಲ’

-ವಿಜಯಾ ಹೆಗ್ಡೆ, ಪರಿಸರ ಅಧಿಕಾರಿ, ಉಡುಪಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News