ಬೆಳಪುವಿನಲ್ಲಿ ಅತ್ಯಾಧುನಿಕ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ : ಪ್ರೀತಿ ಗೆಹ್ಲೋಟ್

Update: 2020-06-29 17:35 GMT

ಪಡುಬಿದ್ರಿ: ಬೆಳಪುವಿನಲ್ಲಿ ರಾಜ್ಯಕ್ಕೆ ಮಾದರಿಯಾದ ಅತ್ಯಾಧುನಿಕ ತ್ಯಾಜ್ಯ ವಿಲೇವಾರಿ ಘಟಕವನ್ನು ನಿರ್ಮಿಸಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದೆಂದು ಉಡುಪಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರೀತಿ ಗೆಹ್ಲೋಟ್ ತಿಳಿಸಿದರು.

ಬೆಳಪು ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ತ್ಯಾಜ್ಯ ವಿಲೇವಾರಿ ಘಟಕದ ಯೋಜನಾ ಪ್ರದೇಶವನ್ನು ಪರಿಶೀಲಿಸಿದ ಅವರು ಮಾತನಾಡಿದರು. 

ಪ್ಲಾಸ್ಟಿಕ್, ಘನ ಮತ್ತು ದ್ರವ ತ್ಯಾಜ್ಯವನ್ನು ಬೇರ್ಪಡಿಸುವ ವಿಧಾನ, ಕೋಳಿ ತ್ಯಾಜ್ಯಕ್ಕಾಗಿ ಪ್ರತ್ಯೇಕ ಘಟಕ ಮಾಡಿರುವುದನ್ನು ಮಾಹಿತಿ ಪಡೆದ ಅವರು ಪಂಚಾಯತ್ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಬೆಳಪುವಿನಲ್ಲಿ ಈಗಾಗಲೇ ಹಲವಾರು ಮಾದರಿ ಯೋಜನೆಗಳನ್ನು ಅನುಷ್ಟಾನ ಮಾಡಿರುವ ಬಗ್ಗೆ ಪಂಚಾಯತ್ ಅಧ್ಯಕ್ಷರಾದ ದೇವಿಪ್ರಸಾದ್ ಶೆಟ್ಟಿಯವರು ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಿಗೆ ಮಾಹಿತಿ ನೀಡಿದರು.

ಬೆಳಪು ಗ್ರಾಮದ ಮುಂದಿನ ಅಭಿವೃದ್ಧಿಯ ದೃಷ್ಟಿಯಿಂದ ಅತ್ಯಾಧುನಿಕವಾದ ಯೋಜನೆಯ ಮೂಲಕ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗಾಗಿ ಈಗಾಗಲೇ 3.00 ಎಕ್ರೆ ಜಾಗವನ್ನು ಮೀಸಲಿಡಲಾಗಿದೆ. ಕಸದಿಂದ ರಸ ಹಾಗೂ ರಾಸಾಯನಿಕ ಸಾವಯವ ಗೊಬ್ಬರ ಮಾಡುವ ಘಟಕವನ್ನು ಸ್ಥಾಪಿಸುವ ಉದ್ದೇಶದೊಂದಿಗೆ ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ಯೋಜನೆಯನ್ನು ರೂಪಿಸಬೇಕೆಂಬುದು ನಮ್ಮ ಆಶಯ. ಸುತ್ತ ಮುತ್ತಲಿನ ಗ್ರಾಮದ ತ್ಯಾಜ್ಯ ವಿಲೇವಾರಿಗೂ ಸೂಕ್ತವಾಗಿ ಸಹಕಾರ ನೀಡಿದರೆ ಅವಕಾಶ ಕಲ್ಪಿಸುವ ಉದ್ದೇಶ ನಮ್ಮದಾಗಿದೆ ಎಂದು ದೇವಿಪ್ರಸಾದ್ ಶೆಟ್ಟಿ ತಿಳಿಸಿದರು.

ಪಂಚಾಯತ್ ಭೇಟಿ ಸಂದರ್ಭದಲ್ಲಿ ಜಿಲ್ಲಾ  ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಶೋಭಾ ಭಟ್, ಪಿ.ಡಿ.ಒ ಹೆಚ್. ಆರ್. ರಮೇಶ್, ಕಾರ್ಯದರ್ಶಿ ಸುಮಿತ್ರಾ ಆಚಾರ್ಯ ಹಾಗೂ ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News