ಕೋವಿಡ್ 19 : ಉಳ್ಳಾಲ ದರ್ಗಾ ಸಮಿತಿಯಿಂದ ಸರ್ವಧರ್ಮ ಸಮಾಲೋಚನಾ ಸಭೆ

Update: 2020-06-29 17:49 GMT

ಉಳ್ಳಾಲ : ಜಿಲ್ಲೆಯಲ್ಲಿ ಕೋವಿಡ್ 19 ಆರಂಭದಲ್ಲಿ ಬಹಳಷ್ಟು ಪರಿಣಾಮ ಬೀರದಿದ್ದರೂ ಲಾಕ್‍ಡೌನ್ ಮುಗಿದು ಸಂಚಾರ ಆರಂಭವಾದ ಬಳಿಕ ಅದರ ಬೆಳವಣಿಗೆ ಬೇರೆಬೇರೆ ರೀತಿಯಲ್ಲಿ ಕಂಡು ಬರುತ್ತಿದೆ. ರೋಗ ಬಂದರೆ ಶೀಘ್ರದಲ್ಲೇ ಚಿಕಿತ್ಸೆ ಮಾಡಿಸಿಕೊಳ್ಳಬೇಕಾದ್ದು ನಮ್ಮ ಕರ್ತವ್ಯ. ನಿರ್ಲಕ್ಷ್ಯ ಮಾಡಿದರೆ ತೊಂದರೆ ಜಾಸ್ತಿ ಇರುತ್ತದೆ. ಕೊರೊನ ಪೊಸಿಟಿವ್ ಪ್ರಕರಣಕ್ಕಿಂತ ಗುಣಮುಖರಾದವರ ಸಂಖ್ಯೆ ಜಾಸ್ತಿ ಇರುವುದರಿಂದ ಯಾರೂ ಭೀತಿಗೊಳಬೇಕಾದ ಅಗತ್ಯ ಇರುವುದಿಲ್ಲ  ಎಂದು ದ.ಕ. ಜಿಲ್ಲೆಯ ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್ ಹೇಳಿದರು.

ಅವರು ಉಳ್ಳಾಲ ದರ್ಗಾದಲ್ಲಿ ಸೋಮವಾರ ಕೋವಿಡ್ 19 ಕುರಿತು ನಡೆದ ಸರ್ವ ಧರ್ಮೀಯರ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.

ಕೋವಿಡ್ ನಿಯಂತ್ರಣ ಕಷ್ಟದ ಕೆಲಸವೇನಲ್ಲ. ಆದರೆ ಕೊರೊನ ನಿಯಂತ್ರಣಕ್ಕಾಗಿ  ಬಹಳಷ್ಟು ಶ್ರಮ ನಾವು ಪಡಬೇಕಾಗುತ್ತದೆ. ಇದಕ್ಕಾಗಿ ಎಲ್ಲರೂ ಸಾಕಾರ ನೀಡಬೇಕಾಗಿದೆ. ಹಿರಿಯರು ಮತ್ತು ಮಕ್ಕಳು  ವಾಸ ಮಾಡುವ  ಮನೆಯಲ್ಲಿರುವ ಯುವಕರು ಸುತ್ತಾಡಿ ಮನೆಗೆ ಬಂದರೆ ಕೊರೊನ ಹಿರಿಯರಿಗೆ ಬರುವ ಸಾಧ್ಯತೆ ಇರುತ್ತದೆ. ಒಂದು ವೇಳೆ ಬಂದರೆ ನಿಯಂತ್ರಣ ಕಷ್ಟವಾಗುತ್ತದೆ. ಆದ್ದರಿಂದ ಈ ಬಗ್ಗೆ ಜಾಗೃತರಾಗ ಬೇಕು. ಆರೋಗ್ಯದ  ತೊಂದರೆ ಇರುವವರು ಭೀತಿ ಪಡದೇ ತಕ್ಷಣ  ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಪೆರ್ಮನ್ನೂರು ಚರ್ಚ್‍ನ ಧರ್ಮಗುರು  ಜೆ.ಬಿ. ಸಲ್ದಾನ ಮಾತನಾಡಿ, ಆರೋಗ್ಯ ಎಲ್ಲರೂ ಬಯಸುತ್ತಾರೆ. ಆದರೆ ನಾವು ಆರೋಗ್ಯವಂತ ರಾಗಿರಬೇಕಾದರೆ ಅದಕ್ಕಾಗಿ ಸೇವೆ ಮುಡಿಪಾಗಿಡಬೇಕು. ಯುವಕರು ಒಂದಡೆ ಗುಂಪು ಗೂಡುವುದನ್ನು ಬಿಟ್ಟು ಜನರನ್ನು ರಕ್ಷಣೆ ಮಾಡುವ ಕಾರ್ಯದಲ್ಲಿ ನಿರತರಾದರೆ ಜನರಲ್ಲಿ ನಿರ್ಮಾಣ ಆಗಿರುವ ಭೀತಿ ದೂರ ಮಾಡಲು ಸಾಧ್ಯ ಎಂದರು.

ಹಿಂದೂ ಮುಖಂಡ ಭಗವಾನ್ ದಾಸ್ ಮಾತನಾಡಿ ಉಳ್ಳಾಲದಲ್ಲಿ ಜಾತಿ ಧರ್ಮ ಎನ್ನದೇ ಎಲ್ಲರೂ ಒಗ್ಗಟ್ಟಿನಿಂದ ಕೊರೋನವನ್ನು ಎದುರಿಸಲು ದರ್ಗಾ ಸಮಿತಿಯಿಂದ ವಾಲಿಯಂಟರನ್ನು ಮಾಡಿ ಜನರಲ್ಲಿ ಕೊರೋನ ಬಗ್ಗೆ ಜಾಗ್ರತಿ ಮೂಡಿಸಬೇಕು ಎಂದರು.

ಶಾಸಕ ಯು.ಟಿ. ಖಾದರ್ ಮಾತನಾಡಿ ವೈರಸ್ ನಿಯಂತ್ರಣ ಮಾಡುವುದು ನಮ್ಮ ಗುರಿಯಾದರೂ ಅದು ಒಮ್ಮಲೇ ನಿಯಂತ್ರಣಕ್ಕೆ ಬರುವು ದಿಲ್ಲ. ನಾವು ರೋಗ ಬರುತ್ತದೆ ಎಂದು ಹೆದರುವ ಅವಶ್ಯಕತೆ ಇಲ್ಲ. ಕೊರೊನಕ್ಕಿಂತ ಮೊದಲು ಡೆಂಗ್ಯೂ, ಮಲೇರಿಯಾದಂತಹ ಖಾಯಿಲೆ ಬಂದಿದೆ. ಇದೊಂದು  ಅದೇ ರೀತಿಯ ವೈರಸ್ ಅಷ್ಟೇ. ಒಂದು ಮನೆಯಲ್ಲಿ 15 ಮಂದಿಗೆ ಕೊರೊನ ಬಂದಿದೆ ಎಂದುಕೊಂಡು  ನಾವೇ ಹೆದರಿ ಓಡಬೇಕಾಗಿಲ್ಲ. ಈ ಸಂದರ್ಭ ರಾಜಕೀಯವನ್ನು ಬದಿಗಿಟ್ಟು  ನಮ್ಮ ಪಕ್ಕದ ಮನೆಯಲ್ಲಿ ಯಾರಿಗೆ ತೊಂದರೆ ಆಗಿದೆಯೋ ಅವರಿಗೆ ಚಿಕಿತ್ಸೆ ಒದಿಸಿಕೊಡುವಂತಹ ವ್ಯವಸ್ಥೆ ಮಾಡಬೇಕೇ ಹೊರತು ಅವರನ್ನು ಕೊರೊನ ಭೀತಿಯಿಂದ ಮೂಲೆಗುಂಪು ಮಾಡುವ ಕೆಲಸ ಮಾಡಬಾರದು. ಈ ವೇಳೆ ಎಲ್ಲರೂ ಕೈಜೋಡಿಸಿ ವೈರಸ್ ನಿಯಂತ್ರಿಸುವಲ್ಲಿ ಸಹಕರಿಸಬೇಕು ಎಂದು ಕರೆ ನೀಡಿದರು.

ಫಾರೂಕ್ ಉಳ್ಳಾಲ್ ಮಾತನಾಡಿ ಕೊರೋನ ಪಾಸಿಟೀವ್ ಆಗಿರುವ ಮನೆಗಳಿಗೆ ಅಧಿಕಾರಿಗಳು ಒಂದೇ ವಾಹನದಲ್ಲಿ ಗೌಪ್ಯವಾಗಿ ಬಂದು ಪರಿಶೀಲನೆ ಮಾಡಬೇಕು, ಈ ವಿಚಾರವನ್ನು ಅಧಿಕೃತ ಅದಿಕಾರಿಗೆ ಮಾತ್ರ ತಿಳಿಸಬೇಕು ಇಲ್ಲದಿದ್ದರೆ 2-3 ವಾಹನದಲ್ಲಿ ಬಂದು ಪರಿಶೀಲನೆ ಮಾಡಿದರೆ ಜನರೆಡೆ ಗಂಬೀರ ಪರಿಸ್ಥಿತಿ ನಿರ್ಮಾಣವಾಗುತ್ತದೆ, ಅದಕ್ಕೆ ಅವಕಾಶ ಮಾಡಿ ಕೊಡಬಾರದೆಂದು ಹೇಳೀದರು.

ಉಳ್ಳಾಲ ದರ್ಗಾ ಅಧ್ಯಕ್ಷ ರಶೀದ್ ಹಾಜಿ ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ನುಡಿದರು. ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಗುರು ಪ್ರಸಾದ್, ಉಳ್ಳಾಲನಗರ ಸಭಾ ಆರೋಗ್ಯಾಧಿಕಾರಿ ಜೈ ಶಂಕರ್, ಚೀರುಂಭ ಬಗವತಿ ಕ್ಷೇತ್ರ ಮುಕ್ತೇಶರಾದ ಸುರೇಶ್ ಭಟ್ನಗರ,  ಉಳ್ಳಾಲ ಮುಸ್ಲಿಮ್ ಒಕ್ಕೂಟ ಅಧ್ಯಕ್ಷ ಇಸ್ಮಾಯೀಲ್ ಉಳ್ಳಾಲ, ಬಿಜೆಪಿ ಮುಖಂಡ ಭಗವಾನ್ ದಾಸ್ ತೊಕ್ಕೊಟ್ಟು, ಕಾಂಗ್ರೆಸ್ ಮುಖಂಡ ಸದಾಶಿವ ಉಳ್ಳಾಲ್, ಪೆರ್ಮನ್ನೂರು ಚರ್ಚ್ ಪಾಲನ ಸಮಿತಿ ಉಪಾಧ್ಯಕ್ಷ ಮೌರೀಸ್ ಮೊಂತೆರೋ, ಮಾಜಿ ಪರಸಭಾಧ್ಯಕ್ಷ ಬಾಝಿಲ್ ಡಿಸೋಜ, ಯು.ಎ ಇಸ್ಮಾಯೀಲ್, ಉಳ್ಳಾಲ ದರ್ಗಾ ಪ್ರ.ಕಾರ್ಯದರ್ಶಿ ತ್ವಾಹಾ ಹಾಜಿ,  ಉಪಾಧ್ಯಕ್ಷ ಇಸ್ಮಾಯೀಲ್ ಮೋನು, ಬಾವ ಮುಹಮ್ಮದ್,  ಕೋಶಾಧಿ ಕಾರಿ ಯು.ಕೆ ಇಲ್ಯಾಸ್, ಜತೆ ಕಾರ್ಯದರ್ಶಿ ನೌಶದ್ ಅಲಿ, ಆಝಾದ್ ಇಸ್ಮಾಯೀಲ್, ಚಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷರಾದ ಮುಸ್ತಫ ಅಬ್ದುಲ್ಲ, ಯು.ಕೆ ಇಬ್ರಾಹೀಮ್, ಜತೆ ಕಾರ್ಯದರ್ಶಿ ಹಾಜಿ ಎ.ಕೆ ಮೊಹಿಯದ್ದೀನ್, ಕೋಶಾಧಿಕಾರಿ ಜೆ.ಅಬ್ದುಲ್ ಹಮೀದ್, ಅರಬಿಕ್ ಟ್ರಸ್ಟ್ ಜತೆ ಕಾರ್ಯ ದರ್ಶಿ ಆಸಿಫ್ ಅಬ್ದುಲ್ಲ, ಸದಸ್ಯರಾದ ಫಾರೂಕ್ ಉಳ್ಳಾಲ್, ಅಬೂಬಕರ್ ಅಲಿನಗರ, ಹಸೈನಾರ್ ಬೊಟ್ಟು, ಮೊಯ್ದೀನ್ ಹಾಜಿ ಪೇಟೆ, ಯು.ಕೆ ಹಮ್ಮಬ್ಬ, ಅದ್ದಾಕ, ಕಾದರ್ ಮೊಯ್ಲಾರ್, ಹಸನಬ್ಬ, ಇಬ್ರಾಹೀಮ್ ಹಾಜಿ ಉಳ್ಳಾಲಬೈಲು, ಹನೀಫ್ಹ್ ಸೋಲಾರ್, ಕಲೀಲ್ ಕಿಲಿರಿಯ, ಹಮೀದ್ ಕೋಡಿ, ಜಬ್ಬಾರ್ ಮೇಲಂಗಡಿ, ಸಿ.ಎಮ್ ಹನೀಫ್, ಅಲಿಮೋನು, ಉಳ್ಳಾಲ ನಗರಸಭಾ ಕೌನ್ಸಿಲರುಗಳು, ವಿವಿಧ ಸಂಘಟಣೆಯ ಪದಾಧಿಕಾರಿ ಗಳು, ದರ್ಗಾ ಮತ್ತು ಟ್ರಸ್ಟ್ ಸದಸ್ಯರುಗಳು, ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News