ಕುತ್ತಾರ್ : ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿರುದ್ಧ ಡಿವೈಎಫ್‌ಐ ಪ್ರತಿಭಟನೆ

Update: 2020-06-29 18:01 GMT

ತೊಕ್ಕೊಟ್ಟು : ಕಳೆದ 21 ದಿನಗಳಿಂದ ನಿರಂತರವಾಗಿ ಪಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಸುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಡಿವೈಎಫ್‌ಐ ಉಳ್ಳಾಲ ವಲಯ ಸಮಿತಿಯ ವತಿಯಿಂದ ಕುತ್ತಾರ್ ಪೆಟ್ರೋಲ್ ಪಂಪ್ ಮುಂಭಾಗ ಇಂದು ಭಿತ್ತಿಪತ್ರ ಪ್ರದರ್ಶಿಸಿ ಪ್ರತಿಭಟನೆ ನಡೆಸಲಾಯಿತು.

ಸಭೆಯನ್ನುದ್ದೇಶಿಸಿ ಮಾತನಾಡಿದ ಡಿವೈಎಫ್‌ಐ ಉಳ್ಳಾಲ ವಲಯ ಸಮಿತಿಯ ಅಧ್ಯಕ್ಷ ಅಶ್ರಫ್ ಕೆಸಿರೋಡ್ ಜನತೆ ಲಾಕ್‌ಡೌನ್ ನಂತರ ಆರ್ಥಿಕವಾಗಿ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಜನತೆಯ ಜೊತೆ ನಿಲ್ಲಬೇಕಿದ್ದ ಕೇಂದ್ರ ಸರ್ಕಾರ ನಿರಂತರವಾಗಿ ಕಳೆದ 21 ದಿನಗಳಿಂದ ಪೆಟ್ರೋಲ್, ಡೀಸೆಲ್ ದರ ಏರಿಸುವ ಮೂಲಕ ಜನವಿರೋಧಿಯಾಗಿ ವರ್ತಿಸುತ್ತಿದೆ. ಇದರ ವಿರುದ್ಧ ದೇಶದ ಜನತೆ ಬೀದಿಗಿಳಿದು ಪ್ರತಿಭಟಿಸುತ್ತಿದ್ದಾರೆ. ಆದರೆ ಇಲ್ಲಿನ ಕೆಲ ಗೋಧಿ ಮೀಡಿಯಾಗಳು ಸರ್ಕಾರದ ಜನ ವಿರೋಧಿ ನಿರ್ಧಾರವನ್ನು ಪ್ರಶ್ನಿಸುವ ಬದಲು ಪ್ರತಿಭಟಿಸುತ್ತಿರುವವರ ವಿರುದ್ಧವೇ ವರದಿ ಮಾಡುತ್ತಿವೆ. ಇದು ಸದ್ಯದ ಮಟ್ಟಿಗೆ ಆತಂಕಕಾರಿ ಬೆಳವಣೆಗೆ ಎಂದು ಅವರು ಹೇಳಿದರು.

ಸಭೆಯನ್ನುದ್ದೇಶಿಸಿ ಡಿವೈಎಫ್‌ಐ ಜಿಲ್ಲಾ ಮುಖಂಡ ಅಡ್ವಕೇಟ್ ನಿತಿನ್ ಕುತ್ತಾರ್ ಮಾತನಾಡಿ, ದೇಶದ ಜನತೆ ಕೋವಿಡ್ ಜೊತೆ ಬಿಜೆಪಿಯನ್ನೂ ಸೋಲಿಸಬೇಕಿದೆ. ಬಿಜೆಪಿ ಮತ್ತು ದೇಶದ ಪ್ರಧಾನಿ ಮೋದಿ ಕೇವಲ ಭಾವನಾತ್ಮಕ ವಿಷಯಗಳನ್ನು ಪ್ರಸ್ತಾಪಿಸಿ ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ಸದ್ಯ ಪೆಟ್ರೋಲ್ ಹಾಗೂ ಡಿಸೇಲ್ ಬೆಲೆ ಏರಿಕೆ ದೇಶದ ಕೃಷಿ ಹಾಗೂ ಕೈಗಾರಿಕೆಗಳ ಮೇಲೆ ಪರಿಣಾಮ ಬೀರಲಿದ್ದು, ಇದರಿಂದ ಆಹಾರ ಮತ್ತು ದಿನಬಳಕೆಯ ವಸ್ತುಗಳ ಬೆಲೆ ಗಗನಕ್ಕೇರಲಿದೆ ಎಂದರು.

ಸಭೆಯಲ್ಲಿ ಡಿವೈಎಫ್‌ಐ ಜಿಲ್ಲಾ ನಾಯಕರಾದ ಜೀವನ್ ರಾಜ್ ಕುತ್ತಾರ್, ರಫೀಕ್ ಹರೇಕಳ, ಸಿಪಿಐಎಂ ಮುಖಂಡರಾದ ಮಹಾಬಲ ದೆಪ್ಪಲಿಮಾರ್, ಜಯರಾಂ ತೇವುಲ, ಚಂದ್ರಹಾಸ್ ಕುತ್ತಾರ್, ಇಬ್ರಾಹಿಂ ಮದಕ, ರೈತ ಸಂಘದ ಶೇಖರ್ ಕುತ್ತಾರ್, ಬರಹಗಾರ ಕೆ.ಆರ್ ನಾಥ್, ಡಿವೈಎಫ್‌ಐ ನಾಯಕರಾದ ಅಶ್ರಫ್ ಹರೇಕಳ, ನವಾಝ್ ಉರುಮಣೆ, ಮಿಥುನ್ ಕುತ್ತಾರ್ , ಶಮ್ಮಾಸ್ ಕೆಸಿ ರೋಡ್ , ಸಮಾಜ ಸೇವಕ ಲತೀಫ್ ಕೈರಳಿ, ಎಸ್‌ಎಫ್‌ಐ ಜಿಲ್ಲಾ ಕಾರ್ಯದರ್ಶಿ ವಿಕಾಸ್ ಕುತ್ತಾರ್ ಉಪಸ್ಥಿತರಿದ್ದರು.

ಡಿವೈಎಫ್‌ಐ ಉಳ್ಳಾಲ ವಲಯ ಕಾರ್ಯದರ್ಶಿ ಸುನಿಲ್ ತೇವುಲ ಸ್ವಾಗತಿಸಿ, ಉಪಾಧ್ಯಕ್ಷ ರಝಾಕ್ ಮೊಂಟೆಪದವು ವಂದಿಸಿದರು. ಸಭೆಗೂ ಮುನ್ನ ಕುತ್ತಾರ್ ಜಂಕ್ಷನ್‌ ನಿಂದ ಪೆಟ್ರೋಲ್ ಪಂಪ್ ವರೆಗೆ ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗುತ್ತಾ ಬೈಕುಗಳನ್ನು ತಳ್ಳಿಕೊಂಡು ಬಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News