ಉಡುಪಿ: ಜಿಲ್ಲೆಯ ಮತ್ತೊಬ್ಬ ಎಸೆಸೆಲ್ಸಿ ವಿದ್ಯಾರ್ಥಿನಿಗೆ ಕೊರೋನ ಪಾಸಿಟಿವ್

Update: 2020-06-30 09:37 GMT
ಸಾಂದರ್ಭಿಕ ಚಿತ್ರ

ಉಡುಪಿ, ಜೂ.30: ಜಿಲ್ಲೆಯಲ್ಲಿ ಇದೀಗ ಎಸೆಸೆಲ್ಸಿ ಪರೀಕ್ಷೆ ಬರೆಯುತ್ತಿರುವ ಎರಡನೇ ವಿದ್ಯಾರ್ಥಿನಿಗೆ ಕೊರೋನ ಪಾಸಿಟಿವ್ ಕಂಡುಬಂದಿದೆ. ಕುಂದಾಪುರ ಬೋರ್ಡ್ ಶಾಲೆಯ ವಿದ್ಯಾರ್ಥಿನಿಯಲ್ಲಿ ಇಂದು ಕೋವಿಡ್-19 ಸೋಂಕು ಪತ್ತೆಯಾಗಿದೆ ಎಂದು ಶಿಕ್ಷಣ ಇಲಾಖೆಯ ಮೂಲಗಳು ತಿಳಿಸಿವೆ.

ಈ ವಿದ್ಯಾರ್ಥಿನಿ ಈಗಾಗಲೇ ನಡೆದಿರುವ ದ್ವಿತೀಯ ಭಾಷೆ, ಗಣಿತ ಹಾಗೂ ವಿಜ್ಞಾನ ಪರೀಕ್ಷೆಗಳನ್ನು ಬರೆದಿದ್ದು, ನಾಳೆ ನಡೆಯುವ ಸಮಾಜ ವಿಜ್ಞಾನ ಪರೀಕ್ಷೆಗೆ ಸಿದ್ಧಳಾಗುತಿದ್ದಳು ಎಂದು ತಿಳಿದುಬಂದಿದೆ. ಆಕೆಗೆ ಇನ್ನುಳಿದ ಮೂರು ಪರೀಕ್ಷೆಯನ್ನು ಆಗಸ್ಟ್‌ನಲ್ಲಿ ನಡೆಯುವ ಸಪ್ಲಿಮೆಂಟರಿ ಪರೀಕ್ಷೆಯಲ್ಲಿ ಬರೆಯುವಂತೆ ತಿಳಿಸಲಾಗಿದೆ. ಆರೋಗ್ಯ ಇಲಾಖೆ ಆಕೆಯನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸುವ ಸಿದ್ಧತೆ ನಡೆಸಿದೆ.

ಆಕೆಗೆ ಈ ಸೋಂಕು ಎಲ್ಲಿಂದ ಬಂತೆಂಬುದು ಸದ್ಯಕ್ಕೆ ಖಚಿತವಾಗಿಲ್ಲ. ಆದರೆ ಸುಮಾರು ಎರಡು ತಿಂಗಳ ಹಿಂದೆ ಮುಂಬೈಯಿಂದ ಬಂದು ಪಾಸಿಟಿವ್ ಕಾಣಿಸಿಕೊಂಡ ಇಬ್ಬರು ಆಸ್ಪತ್ರೆಗೆ ದಾಖಲಾಗಿ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡ ಬಳಿಕ ವಿದ್ಯಾರ್ಥಿನಿಯ ಮನೆಗೆ ಬಂದಿದ್ದರೆಂದು ಹೇಳಲಾಗುತ್ತಿದೆ. ಆದರೆ ಆಕೆಗೆ ಅವರಿಂದಲೇ ಸೋಂಕು ಬಂತೇ ಎಂಬುದು ಇನ್ನೂ ಖಚಿತವಾಗಿಲ್ಲ.

ಎರಡು ದಿನಗಳ ಹಿಂದಷ್ಟೇ ವಿಜ್ಞಾನ ಪರೀಕ್ಷೆ ಬರೆಯಲು ಸಿದ್ದಳಾಗುತಿದ್ದ ಹೆಜಮಾಡಿಯ ಒಬ್ಬ ವಿದ್ಯಾರ್ಥಿನಿಯಲ್ಲೂ ಕೊರೋನ ಸೋಂಕು ಪತ್ತೆಯಾಗಿದ್ದು, ಆಕೆಯನ್ನು ಇದೀಗ ಕಾರ್ಕಳ ಕೋವಿಡ್ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡ ಲಾಗುತ್ತಿದೆ. ಆಕೆಯೂ ಆಗಸ್ಟ್‌ನಲ್ಲಿ ಫ್ರೆಷರ್ ಆಗಿ ಉಳಿದ ನಾಲ್ಕು ಪರೀಕ್ಷೆ ಬರೆಯಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News