​ಮಂಗಳೂರು : 10 ವೈದ್ಯರಿಗೆ ಕೊರೋನ ಸೋಂಕು

Update: 2020-06-30 15:30 GMT
ಸಾಂದರ್ಭಿಕ ಚಿತ್ರ

ಮಂಗಳೂರು, ಜೂ. 30: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನ ಸೋಂಕಿತರ ಸಂಖ್ಯೆಯಲ್ಲಿ ಗಣನೀಯವಾಗಿ ಏರಿಕೆ ಕಂಡಿದೆ. ಈ ನಡುವೆ ಸಾಮೂಹಿಕವಾಗಿ ವೈದ್ಯರೂ ಕೊರೋನ ವೈರಸ್ ಗೆ ತುತ್ತಾಗುತ್ತಿರುವುದು ತೀವ್ರ ಕಳವಳಕ್ಕೆ ಕಾರಣವಾಗಿದೆ. ಮಂಗಳವಾರ ಒಂದೇ ದಿನ 10 ಮಂದಿ ವೈದ್ಯರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ವೈದ್ಯಾಧಿಕಾರಿಗಳು ಮಾಹಿತಿ ನೀಡಿದ್ದು, ಇನ್ನೂ ಹಲವು ಮಂದಿ ವೈದ್ಯರು, ದಾದಿಯರು ಸೋಂಕಿಗೆ ತುತ್ತಾಗುವ ಭೀತಿಯೂ ಎದುರಾಗಿದೆ.

ಎಲ್ಲ ಅಪಾಯಗಳ ನಡುವೆಯೂ ಕೋವಿಡ್ ವಾರಿಯರ್‌ಗಳಾಗಿ ಮುಖ್ಯ ಸ್ಥಾನದಲ್ಲಿದ್ದು ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯರೇ ದೊಡ್ಡ ಮಟ್ಟದಲ್ಲಿ ಸೋಂಕಿಗೆ ಈಡಾಗುತ್ತಿರುವುದು ಮುಂದಿನ ದಿನಗಳಲ್ಲಿ ಜಟಿಲ ಸಮಸ್ಯೆಗೆ ಕಾರಣವಾಗಲಿದೆ ಎಂದು ಹಿರಿಯ ಅಧಿಕಾರಿಗಳು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.

ರೋಗಿಗಳ ಚಿಕಿತ್ಸೆಯಲ್ಲಿ ಹಗಲಿರುಳು ತೊಡಗಿಕೊಂಡಿದ್ದ ಈ ವೈದ್ಯರಿಗೆ ಪಾಸಿಟಿವ್ ಬಂದಿದ್ದರಿಂದ ಕೋವಿಡ್ ಆಸ್ಪತ್ರೆಯ ಅನೇಕ ವೈದ್ಯರು, ದಾದಿಯರು ಕ್ವಾರಂಟೈನ್‌ಗೆ ತೆರಳಿದ್ದಾರೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.

ಇನ್ನೊಂದೆಡೆ ಜಿಲ್ಲೆಯ ಪ್ರಮುಖ 2-3 ಖಾಸಗಿ ಆಸ್ಪತ್ರೆಯ ಸುಮಾರು 10 ವೈದ್ಯರಿಗೂ ಸೋಂಕು ದೃಢಪಟ್ಟಿದ್ದು, ಈ ಆಸ್ಪತ್ರೆಗಳ 60ಕ್ಕೂ ಅಧಿಕ ಮಂದಿ ಸಿಬ್ಬಂದಿಯನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಪ್ರತಿದಿನವೂ ವೈದ್ಯರ ಸಂಪರ್ಕಕ್ಕೆ ಹಲವು ಮಂದಿ ಬರುವುದರಿಂದ ಸಾರ್ವಜನಿಕರಿಗೂ ಸೋಂಕು ಹರಡಿರುವ ತೀವ್ರ ಆತಂಕ ಸೃಷ್ಟಿಯಾಗಿದೆ.

ಒಂದೇ ದಿನ 10 ವೈದ್ಯರಿಗೆ ಸೋಂಕು ಹರಡಿದ್ದು ಕೊರೋನ ವಾರಿಯರ್‌ಗಳಾದ ಇತರ ಸಿಬ್ಬಂದಿಗಳ ಭೀತಿಗೆ ಕಾರಣವಾಗಿದೆ. ತೀವ್ರಗತಿಯಲ್ಲಿ ಸೋಂಕು ಹರಡುತ್ತಿರುವಾಗ ವೈದ್ಯರೇ ಸೋಂಕಿಗೆ ತುತ್ತಾದರೆ ಪರಿಸ್ಥಿತಿ ಎದುರಿಸುವುದು ತೀರಾ ತ್ರಾಸದಾಯಕವಾಗಲಿದೆ ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News