ಡಿಕೆಶಿ ಪದಗ್ರಹಣ: ಉಡುಪಿ ಜಿಲ್ಲೆಯ 10 ಬ್ಲಾಕ್‌ಗಳ 176 ಕಡೆ ನೇರ ಪ್ರಸಾರ

Update: 2020-06-30 15:02 GMT

ಉಡುಪಿ, ಜೂ.30: ಡಿ.ಕೆ.ಶಿವಕುಮಾರ್ ಅವರು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ಪದಗ್ರಹಣ ಸ್ವೀಕಾರ ಸಮಾರಂಭ ವನ್ನು ಉಡುಪಿ ಜಿಲ್ಲೆಯ 10 ಬ್ಲಾಕ್‌ಗಳ 176 ಕಡೆಗಳಲ್ಲಿ ಝೂಮ್ ಕಾನ್ಫರೆನ್ಸ್ ಮೂಲಕ ನೇರ ಪ್ರಸಾರವಾಗಲಿದೆ ಎಂದು ಕೆಪಿಸಿಸಿಯ ಹಿರಿಯ ಉಪಾದ್ಯಕ್ಷ ಮಂಜುನಾಥ ಭಂಡಾರಿ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಅಧ್ಯಕ್ಷರೊಂದಿಗೆ ಮೂವರು ಕಾರ್ಯಾಧ್ಯಕ್ಷರು ಸಹ ಅಧಿಕಾರ ಸ್ವೀಕರಿಸಲಿದ್ದಾರೆ. ಬೆಳಗ್ಗೆ 11 ರಿಂದ ಸುಮಾರು ಒಂದೂವರೆ ಗಂಟೆಗಳ ಕಾಲ ನಡೆಯುವ ಈ ಕಾರ್ಯಕ್ರಮವನ್ನು ರಾಜ್ಯಾದ್ಯಂತ ಸುಮಾರು ಎಂಟರಿಂದ 10 ಸಾವಿರ ಕಡೆಗಳಿಂದ ನೇರ ಪ್ರಸಾರವಾಗಲಿದ್ದು 10ಲಕ್ಷಕ್ಕೂ ಅಧಿಕ ಮಂದಿ ಬೂತ್ ಮಟ್ಟದ ಕಾರ್ಯಕರ್ತರು ಸೇರಿ ರಾಜ್ಯದ ಒಂದು ಕೋಟಿಗೂ ಅಧಿಕ ಮಂದಿ ವೀಕ್ಷಿಸಲಿದ್ದಾರೆ ಎಂದರು.

ಅಂದು ಅಧ್ಯಕ್ಷರು, ಕಾರ್ಯಾಧ್ಯಕ್ಷರೊಂದಿಗೆ ಬೂತ್ ಮತ್ತು ಗ್ರಾಪಂ ಮಟ್ಟದ ಕಾರ್ಯಕರ್ತರು ಎರಡು ಪ್ರತಿಜ್ಞೆಗಳನ್ನು ಸ್ವೀಕರಿಸಲಿದ್ದಾರೆ. ಮೊದಲನೇಯದು ಡಾ.ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನದ ಪೀಠಿಕೆಗೆ ಬದ್ಧತೆಯ ಘೋಷಣೆ, ಇನ್ನೊಂದು ಕಾಂಗ್ರೆಸ್ ತತ್ವ, ಸಿದ್ಧಾಂತ ಗಳನ್ನು ಅನುಕರಿಸುವ ಪ್ರತಿಜ್ಞೆಯನ್ನು ಎಲ್ಲರೂ ಸ್ವೀಕರಿಸಲಿದ್ದಾರೆ ಎಂದರು.

ಈವರೆಗೆ ಸಮೂಹ ಆಧಾರಿತ ಪಕ್ಷವಾಗಿದ್ದ ಕಾಂಗ್ರೆಸ್‌ನ್ನು ಕೇಡರ್ ಆಧಾರಿತ ಪಕ್ಷವಾಗಿ ಪರಿವರ್ತಿಸುವ ಗುರಿಯನ್ನು ಡಿ.ಕೆ.ಶಿವಕುಮಾರ್ ಹೊಂದಿದ್ದಾರೆ. ಹೀಗಾಗಿ ಪಕ್ಷವನ್ನು ಬೂತ್ ಮಟ್ಟದಲ್ಲಿ ಕಟ್ಟಿ ಬೆಳೆಸುವ ಜವಾಬ್ದಾರಿ ಎಲ್ಲರ ಮೇಲಿದೆ. ಯುವಕರನ್ನು ಹಾಗೂ ವಿದ್ಯಾರ್ಥಿಗಳನ್ನು ಪಕ್ಷಕ್ಕೆ ಹೆಚ್ಚು ಹೆಚ್ಚು ಸೆಳೆಯುವ ಉದ್ದೇಶವಿದೆ ಎಂದು ಮಂಜುನಾಥ ಭಂಡಾರಿ ವಿವರಿಸಿದರು.

ಪಕ್ಷವನ್ನು ಪುನರ್‌ರೂಪಿಸುವ ನಿಟ್ಟಿನಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಡಿಜಿಟಲೀಕರಣವನ್ನು ಹೆಚ್ಚು ಹೆಚ್ಚು ಅಳವಡಿಸಿಕೊಳ್ಳಲು ಬೇಕಾದ ಸಿದ್ಧತೆಯನ್ನು ಸಹ ಮಾಡಿಕೊಳ್ಳಲಾಗುತ್ತಿದೆ. ಯುವಕರು ಹಾಗೂ ವಿದ್ಯಾರ್ಥಿಗಳನ್ನು ಪಕ್ಷದತ್ತ ಸೆಳೆಯಲು ಹಲವು ಕಾರ್ಯಕ್ರಮಗಳನ್ನು ಅಳವಡಿಸಿಕೊಳ್ಳಲಾಗುತ್ತಿದೆ ಎಂದು ಅವರು ನುಡಿದರು.

ಉಡುಪಿ ಜಿಲ್ಲೆಯಲ್ಲಿ ಪಕ್ಷದ ಹಿರಿಯ ನಾಯಕ ಹಾಗೂ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಪಕ್ಷದಲ್ಲಿ ಸಕ್ರೀಯರಾಗಿರದ ಕುರಿತು ಭಂಡಾರಿ ಅವರನ್ನು ಪ್ರಶ್ನಿಸಿದಾಗ, ಅವರೀಗಲೂ ಪಕ್ಷದಲ್ಲಿದ್ದಾರೆ. ನಮ್ಮ ಮಟ್ಟಿಗೆ ಅವರು ಪಕ್ಷದ ನಾಯಕರಲ್ಲೊಬ್ಬರು. ಪಕ್ಷದ ಚಟುವಟಿಕೆಗಳಲ್ಲಿ ಸಕ್ರಿಯರಾಗಿ ಭಾಗವಹಿಸುವುದು ಅವರಿಗೆ ಬಿಟ್ಟಿದ್ದು ಎಂದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ ಕುಮಾರ್ ಕೊಡವೂರು ಮಾತನಾಡಿ, ಜು.2ರ ಡಿಕೆಶಿ ಪದಗ್ರಹಣ ಕಾರ್ಯಕ್ರಮವನ್ನು ಬೆಳಗ್ಗೆ 10:30ರಿಂದ ಜಿಲ್ಲೆಯ 176 ಕಡೆಗಳಿಂದ ನೇರಪ್ರಸಾರವಾಗಲಿದೆ. ಜಿಲ್ಲೆಯಲ್ಲಿ ಸಾವಿರಾರು ಮಂದಿ ಇದನ್ನು ನೇರ ಪ್ರಸಾರದಲ್ಲಿ ವೀಕ್ಷಿಸಲಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಚಿವ, ಮಾಜಿ ಸಂಸದ ವಿನಯಕುಮಾರ್ ಸೊರಕೆ, ಮಾಜಿ ಶಾಸಕ ಯು.ಆರ್.ಸಭಾಪತಿ, ಪಕ್ಷದ ಹಿರಿಯ ಪದಾಧಿಕಾರಿ ಗಳಾದ ಹರೀಶ್ ಕಿಣಿ, ನರಸಿಂಹ ಮೂರ್ತಿ, ನವೀನ್ ಡಿಸೋಜ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News