ಉಡುಪಿ ಜಿಲ್ಲೆಯಲ್ಲಿ ಅಕ್ರಮ ಕ್ರಷರ್‌ಗಳ ವಿರುದ್ಧ ಕಾನೂನು ಕ್ರಮಕ್ಕೆ ವಿಫಲ ಆರೋಪ

Update: 2020-06-30 15:06 GMT

ಉಡುಪಿ, ಜೂ.30: ಉಡುಪಿ ಜಿಲ್ಲೆಯಲ್ಲಿ ಅಕ್ರಮವಾಗಿ, ಯಾವುದೇ ಪರವಾನಿಗೆ ಇಲ್ಲದೇ ಕಾರ್ಯಾಚರಿಸುತ್ತಿರುವ 40ಕ್ಕೂ ಅಧಿಕ ಜಲ್ಲಿಕಲ್ಲು ಕ್ರಷರ್ ಗಳನ್ನು ಕೂಡಲೇ ಬಂದ್ ಮಾಡಿಸಿ, ಅವುಗಳ ವಿರುದ್ಧ ಕಾನೂನು ಕ್ರಮ ಜರಗಿಸುವಂತೆ ಒತ್ತಾಯಿಸಿ ನೀಡಿದ ದೂರಿಗೆ ಸ್ಪಂಧಿಸದೇ, ಸರಕಾರದ ಬೊಕ್ಕಸಕ್ಕೆ ಕೋಟ್ಯಾಂತರ ರೂ.ನಷ್ಟವನ್ನುಂಟು ಮಾಡಿ ಕರ್ತವ್ಯ ಲೋಪವೆಸಗಿದ ಜಿಲ್ಲಾಧಿಕಾರಿ ಜಿ.ಜಗದೀಶ್ ವಿರುದ್ಧ ರಾಜ್ಯ ಉಚ್ಛ ನ್ಯಾಯಾಲಯಕ್ಕೆ ಸಾರ್ವಜನಿಕ ಹಿತಾಸಕ್ತಿ ದೂರು ಅರ್ಜಿ ಸಲ್ಲಿಸಲಾಗುವುದು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ರಾಜ್ಯ ಸಂಘಟನಾ ಸಂಚಾಲಕ ಶೇಖರ್ ಹಾವಂಜೆ ಹೇಳಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಒಟ್ಟು 45 ಕಲ್ಲು ಪುಡಿ ಮಾಡುವ ಘಟಕ (ಜಲ್ಲಿ ಕ್ರಷರ್)ಗಳಿದ್ದು, ಇವುಗಳಲ್ಲಿ 2-3ನ್ನು ಹೊರತು ಪಡಿಸಿ ಉಳಿದ ಎಲ್ಲಾ ಕ್ರಷರ್‌ಗಳು ಪರವಾನಿಗೆಯ ಫಾರಂ ಸಿ ಅವಧಿ ಮುಗಿದು ಒಂದೆರಡು ವರ್ಷ ಕಳೆದರೂ ಕಾರ್ಯಾಚರಿಸುತ್ತಿವೆ ಎಂದು ಅವರು ಆರೋಪಿಸಿದರು.

ಕ್ರಷರ್‌ಗೆ ಜಲ್ಲಿ ಹಾಗೂ ಇನ್ನಿತರ ಉತ್ಪನ್ನಗಳನ್ನು ಉತ್ಪಾದಿಸಲು ಕಚ್ಛಾವಸ್ತು ಗಳನ್ನು ಅಕ್ರಮವಾಗಿ ಅರಣ್ಯ ಇಲಾಖೆಯ ಡೀಮ್ಡ್ ಫಾರೆಸ್ಟ್ ‌ಗಳಿಂದ, ರಕ್ಷಿತಾರಣ್ಯ, ಕಸ್ತೂರಿರಂಗನ್ ವರದಿಯಲ್ಲಿ ಗುರುತಿಸಿದ ಸ್ಥಳಗಳ ಮೀಸಲು ಅರಣ್ಯ ಪ್ರದೇಶಗಳು ಹಾಗೂ ಪಶ್ಚಿಮ ಘಟ್ಟ ವ್ಯಾಪ್ತಿಯ ಅರಣ್ಯ ಇಲಾಖೆಗೆ ಸೇರಿದ ಭೂಮಿಗಳಿಂದ ಪಡೆಯುತಿದ್ದಾರೆ ಎಂದು ದೂರಿದರು.

ಕ್ರಷರ್‌ಗಳ ಮಾಲಕರು ಹೆಸರಿಗಷ್ಟೇ ಪಟ್ಟಾ ಭೂಮಿಯ ದಾಖಲೆ ತೋರಿಸಿ, ಅರಣ್ಯ ಭೂಮಿಗಳಲ್ಲೇ ಸ್ಫೋಟಕಗಳನ್ನು ಅಕ್ರಮವಾಗಿ ಸ್ಫೋಟಿಸಿ ಬಂಡೆಕಲ್ಲು ಗಳನ್ನು ತಂದು ಪರವಾನಿಗಯೇ (ಫಾರಂ ಸಿ) ಇಲ್ಲದ ಅನಧಿಕೃತ ಕ್ರಷರ್‌ಗಳಲ್ಲಿ ಜಲ್ಲಿ ಕಲ್ಲು ಹಾಗೂ ಇತರ ಉತ್ಪನ್ನ ಉತ್ಪಾದಿಸಿ ಅಕ್ರಮವಾಗಿ ಸಾಗಾಟ ಮಾಡುತಿದ್ದಾರೆ. ಈ ವಿಷಯವನ್ನು ದಾಖಲೆಗಳೊಂದಿಗೆ ಜಿಲ್ಲಾಡಳಿತದ ಗಮನಕ್ಕೆ ತಂದರೂ ಅವರ ವಿರುದ್ಧ ಯಾವುದೇ ಕಾನೂನು ಕ್ರಮ ಕೈಗೊಳ್ಳದೇ ಕಣ್ಣಿದ್ದೂ ಕುರುಡರಂತೆ ವರ್ತಿಸುತ್ತಿದೆ ಎಂದರು.

ಹೀಗಾಗಿ ಇಂಥ ಅಕ್ರಮ ಕ್ರಷರ್‌ಗಳಿಂದ ಸರಕಾರಕ್ಕೆ ಕಳೆದ ಎರಡು-ಮೂರು ವರ್ಷಗಳಿಂದ ಯಾವುದೇ ರಾಜಧನ ಸಂದಾಯವಾಗುತ್ತಿಲ್ಲ. ಆದರೆ ಕ್ರಷರ್‌ಗಳ ಮಾಲಕರು ಪ್ರತಿದಿನ 15ರಿಂದ 25 ಲಕ್ಷ ರೂ.ಗಳ ಸಂಪಾದನೆ ಮಾಡುತಿದ್ದಾರೆ. ಈ ಅಕ್ರಮ ದಂದೆಯಿಂದ ಸರಕಾರಕ್ಕೆ ಲಕ್ಷಾಂತರ ಕೋಟಿ ರೂ.ಗಳು ವಂಚನೆ ಯಾಗಿವೆ ಎಂದೂ ಶೇಖರ ಹಾವಂಜೆ ವಿವರಿಸಿದರು.

ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ ನಡೆಯುವಂತೆ, ಅಕ್ರಮವಾದ ಜಲ್ಲಿ ಕ್ರಷರ್‌ಗಳು ಕಾರ್ಯಾಚರಿಸುತ್ತಿವೆ. ಇವುಗಳಲ್ಲಿ ಅಧಿಕ ಕ್ರಷರ್‌ಗಳು ಕಾರ್ಕಳ ಹಾಗೂ ಬ್ರಹ್ಮಾವರ ತಾಲೂಕುಗಳಲ್ಲಿವೆ. ಇತ್ತೀಚೆಗೆ ಜಿಲ್ಲೆಗೆ ಆಗಮಿಸಿದ ಉಸ್ತುವಾರಿ ಕಾರ್ಯದರ್ಶಿ ಮಹೇಶ್ವರ ರಾವ್, ಅಕ್ರಮ ಮರಳುಗಾರಿಕೆ ನಡೆಸುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡುವಂತೆ ತಿಳಿಸಿದ್ದು, ಅದನ್ನು ಕ್ರಷರ್‌ಗಳ ಮಾಲಕರ ವಿರುದ್ಧವೂ ಕೈಗೊಳ್ಳ ಬೇಕು. ಜಿಲ್ಲಾ ಮಟ್ಟದ ಟಾಸ್ಕ್‌ಫೋರ್ಸ್ ಸಮಿತಿ ಈ ಬಗ್ಗೆಯೂ ತನಿಖೆ ನಡೆಸಬೇಕು ಎಂದು ಹಾವಂಜೆ ಒತ್ತಾಯಿಸಿದರು.

ಜಿಲ್ಲೆಯಲ್ಲಿ ಹಲವು ಲಕ್ಷ ಕೋಟಿ ರೂ.ಅವ್ಯವಹಾರ ನಡೆದ ಕ್ರಷರ್ ಹಗರಣದ ತನಿಖೆಗೆ ಒತ್ತಾಯಿಸಿ ಉಚ್ಚನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲು ದಸಂಸ ನಿರ್ಧರಿಸಿದೆ ಎಂದು ಶೇಖರ್ ಹಾವಂಜೆ, ಜಿಲ್ಲೆಯಲ್ಲಿ ಫಾರಂ ಸಿ ಇಲ್ಲದೇ ಕಾರ್ಯಾಚರಿಸುತ್ತಿರುವ ಎಲ್ಲಾ ಕ್ರಷರ್‌ಗಳನ್ನು ಬಂದ್ ಮಾಡಬೇಕು ಹಾಗೂ ಅವುಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಬೇಕು ಎಂದು ನಮ್ಮ ಬೇಡಿಕೆ. ಒಂದು ವಾರದಲ್ಲಿ ಇದು ಕಾರ್ಯ ರೂಪಕ್ಕೆ ಬಾರದಿದ್ದರೆ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದ ಅವರು ಜಿಲ್ಲಾಧಿಕಾರಿಗಳು ರಾಜಕೀಯ ಒತ್ತಡಕ್ಕೆ ಮಣಿದಿದ್ದಾರೆ ಎಂದು ಆರೋಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ದಸಂಸದ ಜಿಲ್ಲಾ ಸಂಚಾಲಕ ವಿಶ್ವನಾಥ ಬೆಳ್ಳಂಪಳ್ಳಿ, ಜಿಲ್ಲಾ ಸಂಘಟನಾ ಸಂಚಾಲಕ ರಾಜೇಶ್ ಕೆಳಾರ್ಕಳಬೆಟ್ಟು, ರಮೇಶ್ ಮಾಭಿಯಾನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News