×
Ad

ಉಡುಪಿ: ಮುಂಬೈಯಿಂದ ಬಂದ ವ್ಯಕ್ತಿ ಸಾವು, ಪತ್ನಿ-ಮಗಳು ಕೊರೋನ ಪಾಸಿಟಿವ್

Update: 2020-06-30 21:13 IST

ಉಡುಪಿ, ಜೂ.30: ಉಡುಪಿ ಜಿಲ್ಲೆಯಲ್ಲಿ ನೋವೆಲ್ ಕೊರೋನ ವೈರಸ್ (ಕೋವಿಡ್-19) ಮೂರನೇ ಬಲಿಯನ್ನು ಪಡೆದಿದೆ. ಕೇವಲ ನಾಲ್ಕು ದಿನಗಳ ಹಿಂದಷ್ಟೇ ಮುಂಬೈಯಿಂದ ಊರಿಗೆ ಬಂದಿದ್ದ 48 ವರ್ಷ ಪ್ರಾಯದ ಪುರುಷರೊಬ್ಬರು ಕೊರೋನ ಸೋಂಕಿಗೆ ಬಲಿಯಾಗಿದ್ದಾರೆ.

ಅವರೊಂದಿಗೆ ಬಂದ ಪತ್ನಿ ಹಾಗೂ ಮಗಳಿಗೂ ಪಾಸಿಟಿವ್ ಬಂದಿದ್ದು ಕೋವಿಡ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತಿದ್ದಾರೆ.
ಬೈಂದೂರು ತಾಲೂಕು ಕಾಲ್ತೋಡು ಗ್ರಾಮ ಕಿರಿಮಂಜೇಶ್ವರದ ತಮ್ಮ ಮನೆಯಲ್ಲಿ ಮೃತಪಟ್ಟ ಇವರು, ಮುಂಬೈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯು ತಿದ್ದು, ಗುಣಮುಖರಾಗುವ ಸಾಧ್ಯತೆ ಕ್ಷೀಣಿಸಿದ್ದರಿಂದ ಕಳೆದ ಶುಕ್ರವಾರ (ಜೂ.26) ಕುಟುಂಬ ಸಮೇತ ಊರಿಗೆ ಆಗಮಿಸಿದ್ದರೆಂದು ಹೇಳಲಾಗಿದೆ.

ಯಕೃತ್, ಮಧುಮೇಹ ಹಾಗೂ ಇತರ ಕಾಯಿಲೆಯಿಂದ ಬಳಲುತಿದ್ದ ಅವರು ಜಿಲ್ಲಾಡಳಿತ ಅಥವಾ ಆರೋಗ್ಯ ಇಲಾಖೆಗೆ ಯಾವುದೇ ಮಾಹಿತಿ ನೀಡದೇ ಊರಿಗೆ ಬಂದಿದ್ದರು ಎಂದು ತಿಳಿದುಬಂದಿದೆ. ಶುಕ್ರವಾರ ಊರಿಗೆ ಬಂದ ಇವರು ರವಿವಾರ ಮೃತಪಟ್ಟಿದ್ದರು. ಮಾಹಿತಿ ತಿಳಿದ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಮನೆಗೆ ತೆರಳಿ ಅವರ ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗೆ ಪಡೆದಿದ್ದು ಇಂದು ಅದು ಪಾಸಿಟಿವ್ ಫಲಿತಾಂಶ ನೀಡಿದೆ.

ಇದರೊಂದಿಗೆ ಅವರ ಹೆಂಡತಿ (42) ಮತ್ತು ಮಗಳಿಗೂ (17) ಪಾಸಿಟಿವ್ ಬಂದಿದ್ದು, ಅವರನ್ನು ಕುಂದಾಪುರದ ಕೋವಿಡ್ ಆಸ್ಪತ್ರೆಗೆ ಸೇರಿಸಲಾಗಿದೆ. ಮೃತ ವ್ಯಕ್ತಿಯ ಅಂತ್ಯಕ್ರಿಯೆಯನ್ನು ಸೋಮವಾರ ಕೋವಿಡ್ ಮಾರ್ಗಸೂಚಿಯಂತೆ ಊರಿನಲ್ಲಿ ನೆರವೇರಿಸಲಾಗಿದೆ ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.

ಈ ಮೂಲಕ ಉಡುಪಿ ಜಿಲ್ಲೆಯಲ್ಲಿ ಕೋವಿಡ್‌ಗೆ ಮೂರನೇ ವ್ಯಕ್ತಿ ಬಲಿ ಯಾದಂತಾಯಿತು. ವಿಶೇಷವೆಂದರೆ ಸತ್ತವರು ಮೂವರೂ ಮುಂಬೈ ಯಿಂದಲೇ ಬಂದವರಾಗಿದ್ದಾರೆ. 54 ವರ್ಷ ಪ್ರಾಯದ ಉಳಿದಿಬ್ಬರೂ ಕ್ರಮವಾಗಿ ಮೇ 14 ಹಾಗೂ ಜೂ.20ರಂದು ಮೃತಪಟ್ಟಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News