×
Ad

ಉಡುಪಿ ಜಿಲ್ಲೆಯ 9 ಮಂದಿಗೆ ಕೊರೋನ ಸೋಂಕು ದೃಢ

Update: 2020-06-30 21:18 IST

ಉಡುಪಿ, ಜೂ.30: ಜಿಲ್ಲೆಯಲ್ಲಿ ಮಂಗಳವಾರ ಮಹಾರಾಷ್ಟ್ರದಿಂದ ಆಗಮಿಸಿದ ಒಂದೇ ಕುಟುಂಬದ ಮೂವರು ಸೇರಿದಂತೆ ಒಟ್ಟು 9 ಮಂದಿ ಯಲ್ಲಿ ಕೋವಿಡ್-19 ಸೋಂಕು ಕಂಡುಬಂದಿದೆ. ಇವರಲ್ಲಿ ಆ ಕುಟುಂಬದ 48ರ ಪುರುಷ ಮೃತ ಪಟಿದ್ದು, ಉಳಿದ ಎಂಟು ಮಂದಿಯನ್ನು ಜಿಲ್ಲೆಯ ವಿವಿಧ ಕೋವಿಡ್ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್‌ ಚಂದ್ರ ಸೂಡ ತಿಳಿಸಿದ್ದಾರೆ.

ಈ ಮೂಲಕ ಜಿಲ್ಲೆಯಲ್ಲಿ ಇದುವರೆಗೆ ಸೋಂಕು ಪತ್ತೆಯಾದವರ ಒಟ್ಟು ಸಂಖ್ಯೆ 1206ಕ್ಕೇರಿದೆ. ಉಡುಪಿ ಜಿಲ್ಲೆಯು ಈಗಲೂ ಬೆಂಗಳೂರು (4555) ಹಾಗೂ ಕಲಬುರಗಿ ಜಿಲ್ಲೆ (1436) ಜಿಲ್ಲೆಗಳ ಬಳಿಕ ಮೂರನೇ ಸ್ಥಾನದಲ್ಲಿ ಮುಂದುವರಿದಿದೆ. ಯಾದಗಿರಿ 941 ಕೇಸುಗಳೊಂದಿಗೆ ನಾಲ್ಕನೇ, ಬಳ್ಳಾರಿ 834 ಪ್ರಕರಣಗಳೊಂದಿಗೆ ಐದನೇ ಹಾಗೂ ದಕ್ಷಿಣ ಕನ್ನಡ ಜಿಲ್ಲೆ (741) ಆರನೇ ಸ್ಥಾನಗಳಲ್ಲಿವೆ.

ಇಂದು ಪಾಸಿಟಿವ್ ಬಂದ 9 ಮಂದಿಯಲ್ಲಿ ಮುಂಬೈಯಿಂದ ಬಂದ ಒಂದು ಕುಟುಂಬ ಅಲ್ಲದೇ, ತೆಲಂಗಾಣದ ಒಬ್ಬರು, ಬೆಂಗಳೂರಿನಿಂದ ಬಂದ ಇಬ್ಬರು ಹಾಗೂ ಜಿಲ್ಲೆಯ ಸ್ಥಳೀಯ ಪ್ರಾಥಮಿಕ ಸಂಪರ್ಕಿತರು 3 ಮಂದಿ ಸೇರಿದ್ದಾರೆ. ಉಡುಪಿ ತಾಲೂಕಿನ ಇಬ್ಬರು ಹಾಗೂ ಕುಂದಾಪುರದ 7 ಮಂದಿ ಇದರಲ್ಲಿ ಸೇರಿದ್ದಾರೆ. ಆರು ಮಂದಿ ಪುರುಷರು ಹಾಗೂ ಮೂವರು ಮಹಿಳೆಯರಿಗೆ ಪಾಸಿಟಿವ್ ಬಂದಿದೆ ಎಂದು ಅವರು ತಿಳಿಸಿದರು.

ಬಸ್ ಚಾಲಕರಿಬ್ಬರಿಗೆ ಪಾಸಿಟಿವ್: ಜಿಲ್ಲೆಯ ಮಟ್ಟಿಗೆ ಆತಂಕವನ್ನುಂಟು ಮಾಡುವ ವಿಷಯವೆಂದರೆ ಕುಂದಾಪುರದ ಇಬ್ಬರು ಖಾಸಗಿ ಬಸ್‌ಗಳ ಚಾಲಕರಿಗೆ ಪಾಸಿಟಿವ್ ಬಂದಿರುವುದು. ಕುಂದಾಪುರ-ಬೆಂಗಳೂರು ನಡುವೆ ಓಡುವ ಬಸ್‌ನ ಚಾಲಕರಾಗಿರುವ (45,33) ಇವರನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಡಾ.ಸೂಡ ತಿಳಿಸಿದರು.

ಬಟ್ಟೆ ಅಂಗಡಿ ಮಾಲಕ: ರಾಜ್ಯ ಆರೋಗ್ಯ ಇಲಾಖೆಯ ಇಂದಿನ ಕೊರೋನ ಸೋಂಕಿತರ ಪಟ್ಟಿಯಲ್ಲಿ ಸ್ಥಾನ ಪಡೆದವರಲ್ಲಿ ಈಗಾಗಲೇ ಪಾಸಿಟಿವ್ ಬಂದರವರ ಸಂಪರ್ಕಿತ ಮೂವರು ಸೇರಿದ್ದಾರೆ. ಇವರಲ್ಲಿ ಒಬ್ಬರು ಹೆಜಮಾಡಿ ಸಮೀಪದ ಬಟ್ಟೆ ಅಂಗಡಿಯೊಂದರ ಮಾಲಕರು. ಇವರ ಮಗ ಬೆಂಗಳೂರಿಗೆ ತೆರಳಿದ್ದು, ಅವರ ಸಂಪರ್ಕದಿಂದ ಸೋಂಕು ತಗಲಿರಬೇಕೆಂದು ಶಂಕಿಸಲಾಗಿದೆ. ಇದೀಗ ಮಗನ ಗಂಟಲುದ್ರವದ ಮಾದರಿಯನ್ನೂ ಪರೀಕ್ಷೆಗೆ ಪಡೆಯಲಾಗಿದೆ ಎಂದು ಅವರು ತಿಳಿದರು.

11ಮಂದಿ ಬಿಡುಗಡೆ: ಜಿಲ್ಲೆಯಲ್ಲಿ ಕೋವಿಡ್ ಚಿಕಿತ್ಸೆಯ ಬಳಿಕ ಗುಣಮುಖ ರಾದ 11ಮಂದಿ ಇಂದು ಬಿಡುಗಡೆಗೊಂಡಿದ್ದಾರೆ. ಇವರಲ್ಲಿ ಉಡುಪಿ ಡಾ.ಟಿಎಂಎ ಪೈ ಆಸ್ಪತ್ರೆಯಿಂದ ಐವರು ಹಾಗೂ ಕಾರ್ಕಳ ಸರಕಾರಿ ಆಸ್ಪತ್ರೆಯ ಏಳು ಮಂದಿ ಸೇರಿದ್ದಾರೆ. ಈ ಮೂಲಕ ಬಿಡುಗಡೆಗೊಂಡವರ ಒಟ್ಟು ಸಂಖ್ಯೆ 1067ಕ್ಕೇರಿದೆ. ಇನ್ನು ಕೇವಲ 136 ಮಂದಿ ಮಾತ್ರ ಜಿಲ್ಲೆಯಲ್ಲಿ ಕೊರೋನ ಸೋಂಕಿನ ಚಿಕಿತ್ಸೆಯಲ್ಲಿದ್ದಾರೆ ಎಂದವರು ಹೇಳಿದರು.

ಕಳೆದ ನಾಲ್ಕು ದಿನಗಳಿಂದ ನಗರದ ಡಾ.ಟಿಎಂಎ ಪೈ ಕೋವಿಡ್ ಆಸ್ಪತ್ರೆಯ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇಬ್ಬರು ಹಿರಿಯ ನಾಗರಿಕರ ಸ್ಥಿತಿ ಇನ್ನೂ ಗಂಭೀರವಿದ್ದು, ಇಬ್ಬರಿಗೂ ವೆಂಟಿಲೇಟರ್‌ನಲ್ಲೇ ಚಿಕಿತ್ಸೆ ಮುಂದುವರಿದಿದೆ ಎಂದು ಡಿಎಚ್‌ಓ ವಿವರಿಸಿದರು.

114 ನೆಗೆಟಿವ್: ಮಂಗಳವಾರ 114 ಮಂದಿಯ ಗಂಟಲುದ್ರವದ ಮಾದರಿ ನೆಗೆಟಿವ್ ಆಗಿ ಬಂದಿವೆ. ಅಲ್ಲದೇ ಇಂದು ಇನ್ನೂ ಒಟ್ಟು 288 ಮಂದಿಯ ಗಂಟಲುದ್ರವದ ಸ್ಯಾಂಪಲ್‌ಗಳನ್ನು ಸೋಂಕಿನ ಪರೀಕ್ಷೆಗಾಗಿ ಕಳುಹಿಸಲಾಗಿದೆ. ಇದರಲ್ಲಿ ಕೋವಿಡ್ ಶಂಕಿತರು 30 ಮಂದಿ, ಕೋವಿಡ್ ಸಂಪರ್ಕಿತರು 60, ಉಸಿರಾಟ ತೊಂದರೆಯ ನಾಲ್ವರು, ಶೀತಜ್ವರದಿಂದ ಬಳಲುವ 20 ಹಾಗೂ ಕೋವಿಡ್ ಹಾಟ್‌ಸ್ಪಾಟ್‌ಗಳಿಂದ ಬಂದ 174 ಮಂದಿಯ ಸ್ಯಾಂಪಲ್‌ಗಳು ಸೇರಿವೆ.

ಇಂದು ಪಡೆದ 114 ಮಂದಿ ಸ್ಯಾಂಪಲ್‌ಗಳೊಂದಿಗೆ ಜಿಲ್ಲೆಯಲ್ಲಿ ಈವರೆಗೆ ಸಂಗ್ರಹಿಸಿದ ಮಾದರಿಗಳ ಒಟ್ಟು ಸಂಖ್ಯೆ 14,556ಕ್ಕೇರಿದೆ. ಇವುಗಳಲ್ಲಿ ಈವರೆಗೆ 12,976 ನೆಗೆಟಿವ್, 1206 ಪಾಸಿಟಿವ್ ಆಗಿದ್ದು, ಮೂವರು ಮೃತಪಟ್ಟಿದ್ದಾರೆ. ಇನ್ನು ಒಟ್ಟು 374 ಸ್ಯಾಂಪಲ್ ಗಳ ಪರೀಕ್ಷಾ ವರದಿ ಬರಬೇಕಿದೆ. ಸೋಮವಾರ 15 ಮಂದಿಯನ್ನು ಐಸೋಲೇಷನ್ ವಾರ್ಡ್‌ಗೆ ದಾಖಲಿಸಲಾಗಿದೆ. ಇವರಲ್ಲಿ ಉಸಿರಾಟ ತೊಂದರೆಯವರು ಆರು ಮಂದಿ ಹಾಗೂ ಶೀತಜ್ವರದಿಂದ ಬಳಲುವ 9 ಮಂದಿ ಸೇರಿದ್ದಾರೆ.

ಜಿಲ್ಲೆಯ ಆಸ್ಪತ್ರೆಗಳ ಐಸೋಲೇಶನ್ ವಾರ್ಡ್‌ಗಳಿಂದ ಇಂದು 9 ಮಂದಿ ಬಿಡುಗಡೆಗೊಂಡಿದ್ದು, 71 ಮಂದಿ ಇನ್ನೂ ವೈದ್ಯರ ನಿಗಾದಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ. ಇಂದು ಕೊರೋನ ಸೋಂಕಿನ ಗುಣಲಕ್ಷಣದ 17 ಮಂದಿ ಸೇರಿದಂತೆ ಒಟ್ಟು 5855 ಮಂದಿಯನ್ನು ಕೊರೋನ ತಪಾಸಣೆ ಗಾಗಿ ನೊಂದಾಯಿಸಿ ಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಈಗ 872 ಮಂದಿ ಹೋಮ್ ಕ್ವಾರಂಟೈನ್ ನಲ್ಲಿದ್ದಾರೆ ಎಂದು ಡಾ.ಸುಧೀರ್‌ಚಂದ್ರ ಸೂಡ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News