ಚೀನಾ: ಉಯಿಘರ್ ಮುಸ್ಲಿಂ ಮಹಿಳೆಯರ ಮೇಲೆ ಗರ್ಭನಿರೋಧಕ ವಿಧಾನಗಳ ಬಲವಂತದ ಹೇರಿಕೆ

Update: 2020-06-30 16:09 GMT

ಬೀಜಿಂಗ್, ಜೂ. 30: ಉಯಿಘರ್ ಮುಸ್ಲಿಮರ ಜನಸಂಖ್ಯೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಚೀನಾವು ಕ್ಸಿನ್‌ಜಿಯಾಂಗ್‌ನಲ್ಲಿ ಮಹಿಳೆಯರ ಮೇಲೆ ಗರ್ಭನಿರೋಧಕ ವಿಧಾನಗಳನ್ನು ಬಲವಂತವಾಗಿ ಹೇರುತ್ತಿದೆ ಎಂದು ತನಿಖಾ ವರದಿಯೊಂದು ಆರೋಪಿಸಿದೆ.

ಸಂತಾನಹರಣ ಶಸ್ತ್ರಚಿಕಿತ್ಸೆಗೆ ಒಳಗಾಗುವಂತೆ ಅಥವಾ ಗರ್ಭನಿರೋಧಕ ಸಾಧನಗಳನ್ನು ಅಳವಡಿಸಿಕೊಳ್ಳುವಂತೆ ಅಧಿಕಾರಿಗಳು ಮಹಿಳೆಯರ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಚೀನಾದ ವಿದ್ವಾಂಸ ಅಡ್ರಿಯಾನ್ ಝೆಂಝ್ ತನ್ನ ವರದಿಯಲ್ಲಿ ಹೇಳಿದ್ದಾರೆ.

ಅವರ ವರದಿಯ ಬೆನ್ನಿಗೇ, ಈ ಆರೋಪಗಳ ಬಗ್ಗೆ ತನಿಖೆ ನಡೆಸುವಂತೆ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ವಿಶ್ವಸಂಸ್ಥೆಗೆ ಕರೆ ನೀಡಲಾಗಿದೆ.

ಅದೇ ವೇಳೆ, ಈ ಆರೋಪಗಳನ್ನು ತಳ್ಳಿಹಾಕಿರುವ ಚೀನಾವು, ಆರೋಪಗಳು ಆಧಾರರಹಿತ ಎಂದಿದೆ.

ಲಕ್ಷಾಂತರ ಉಯಿಘರ್ ಮುಸ್ಲಿಮರನ್ನು ಬಂಧನ ಶಿಬಿರಗಳಲ್ಲಿ ಇರಿಸಿರುವುದಕ್ಕಾಗಿ ಚೀನಾವು ಈಗಾಗಲೇ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಭಾರೀ ಟೀಕೆಯನ್ನು ಎದುರಿಸುತ್ತಿದೆ.

ಅಧಿಕೃತ ಪ್ರಾದೇಶಿಕ ಅಂಕಿಸಂಖ್ಯೆಗಳು, ನೀತಿ ದಾಖಲೆಗಳು ಮತ್ತು ಕ್ಸಿನ್‌ಜಿಯಾಂಗ್‌ನಲ್ಲಿರುವ ಉಯಿಘರ್ ಜನಾಂಗೀಯ ಮಹಿಳೆಯರೊಂದಿಗೆ ನಡೆಸಿದ ಸಂದರ್ಶನಗಳ ಆಧಾರದಲ್ಲಿ ಝೆಂಝ್ ತನ್ನ ವರದಿಯನ್ನು ಬರೆದಿದ್ದಾರೆ.

ಅನುಮೋದಿತ ಸಂಖ್ಯೆಗಿಂತ ಹೆಚ್ಚಿನ ಮಕ್ಕಳನ್ನು ಹೊಂದಿರುವ ಉಯಿಘರ್ ಮಹಿಳೆಯರು ಹಾಗೂ ಇತರ ಜನಾಂಗೀಯ ಅಲ್ಪಸಂಖ್ಯಾತ ಮಹಿಳೆಯರು ಗರ್ಭಪಾತಕ್ಕೆ ಒಳಗಾಗಲು ನಿರಾಕರಿಸಿದರೆ ಅವರನ್ನು ಬಂಧನ ಶಿಬಿರಗಳಿಗೆ ಕಳುಹಿಸುವ ಬೆದರಿಕೆಯನ್ನು ಒಡ್ಡಲಾಗುತ್ತಿದೆ ಎಂದು ವರದಿ ಆರೋಪಿಸಿದೆ.

ಉಯಿಘರ್ ಮಹಿಳೆಯರು ‘ನಿರ್ದಯಿ’ ಜನನ ನಿಯಂತ್ರಣ ಕಾರ್ಯಕ್ರಮಗಳನ್ನು ಎದುರಿಸಿದ್ದಾರೆ ಎಂದು ವರದಿಯ ಲೇಖಕರು ಹೇಳಿದ್ದಾರೆ.

ಅಲ್ಲಿ ಕಾನೂನುಬದ್ಧವಾಗಿ ಎರಡು ಮಕ್ಕಳನ್ನು ಪಡೆಯಬಹುದಾಗಿದೆ. ಒಂದೇ ಮಕ್ಕಳನ್ನು ಹೊಂದಿರುವ ಮಹಿಳೆಯರಿಗೆ ಬಲವಂತವಾಗಿ ಗರ್ಭನಿರೋಧಕ ಸಾಧನಗಳನ್ನು ಅಳವಡಿಸಲಾಗುತ್ತಿದೆ ಹಾಗೂ ಎರಡು ಮಕ್ಕಳನ್ನು ಹೊಂದಿರುವ ಮಹಿಳೆಯರನ್ನು ಸಂತಾನಹರಣ ಶಸ್ತ್ರಚಿಕಿತ್ಸೆಗಳಿಗೆ ಒಳಗಾಗುವಂತೆ ಬಲವಂತಪಡಿಸಲಾಗುತ್ತಿದೆ ಎಂದು ವರದಿ ಆರೋಪಿಸಿದೆ.

ಕ್ಸಿನ್‌ಜಿಯಾಂಗ್‌ನಲ್ಲಿ ಇತ್ತೀಚಿನ ವರ್ಷಗಳಲ್ಲಿ ಸಹಜ ಜನಸಂಖ್ಯಾ ಬೆಳವಣಿಗೆಯು ನಾಟಕೀಯವಾಗಿ ಕಡಿಮೆಯಾಗಿದೆ ಎಂದು ಝೆಂಝ್ ಹೇಳಿದ್ದಾರೆ. 2015 ಮತ್ತು 2018ರ ನಡುವಿನ ಅವಧಿಯಲ್ಲಿ ಎರಡು ಅತಿ ದೊಡ್ಡ ಉಯಿಘರ್ ರಾಜ್ಯಗಳಲ್ಲಿ ಜನಸಂಖ್ಯೆ ಬೆಳವಣಿಗೆ ದರವು 84 ಶೇಕಡದಷ್ಟು ಕಡಿಮೆಯಾಗಿದೆ ಹಾಗೂ 2019ರಲ್ಲಿ ಅದು ಇನ್ನಷ್ಟು ಇಳಿಕೆ ಕಂಡಿದೆ ಎಂದು ವರದಿ ತಿಳಿಸಿದೆ.

ಬಲವಂತದ ಸಂತಾನಹರಣ ನಿಲ್ಲಿಸಿ: ಪಾಂಪಿಯೊ

ಉಯಿಘರ್ ಮಹಿಳೆಯರ ಮೇಲೆ ಸಂತಾನಹರಣ ಕ್ರಮಗಳನ್ನು ಬಲವಂತವಾಗಿ ಹೇರುವುದನ್ನು ನಿಲ್ಲಿಸುವಂತೆ ಅಮೆರಿಕದ ವಿದೇಶ ಕಾರ್ಯದರ್ಶಿ ಮೈಕ್ ಪಾಂಪಿಯೊ ಸೋಮವಾರ ಒತ್ತಾಯಿಸಿದ್ದಾರೆ.

‘‘ಈ ಭಯಾನಕ ಕ್ರಮಗಳನ್ನು ತಕ್ಷಣ ಕೊನೆಗೊಳಿಸುವಂತೆ ನಾವು ಚೀನಾ ಕಮ್ಯುನಿಸ್ಟ್ ಪಕ್ಷಕ್ಕೆ ಕರೆ ನೀಡುತ್ತೇವೆ ಹಾಗೂ ಅಮಾನವೀಯ ಶೋಷಣೆಗಳನ್ನು ಕೊನೆಗೊಳಿಸುವಂತೆ ಒತ್ತಾಯಿಸುವ ಅಮೆರಿಕದ ಪ್ರಯತ್ನಗಳಿಗೆ ಕೈಜೋಡಿಸುವಂತೆ ಎಲ್ಲ ದೇಶಗಳಿಗೆ ಮನವಿ ಮಾಡುತ್ತೇವೆ’’ ಎಂದು ಹೇಳಿಕೆಯೊಂದರಲ್ಲಿ ಪಾಂಪಿಯೊ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News