ಕುಂದಾಪುರದ ಎಸೆಸೆಲ್ಸಿ ವಿದ್ಯಾರ್ಥಿನಿಗೆ ಕೊರೋನ ಪಾಸಿಟಿವ್ : ಜಿಲ್ಲೆಯಲ್ಲಿ ಎರಡನೇ ಪ್ರಕರಣ

Update: 2020-06-30 16:31 GMT

ಕುಂದಾಪುರ, ಜೂ.30: ಜಿಲ್ಲೆಯಲ್ಲಿ ಎಸೆಸೆಲ್ಸಿ ಪರೀಕ್ಷೆ ಬರೆಯುತ್ತಿರುವ ಮತ್ತೊಬ್ಬಳು ವಿದ್ಯಾರ್ಥಿನಿಗೆ ಕೊರೋನ ಸೋಂಕು ಇರುವುದು ದೃಢ ಪಟ್ಟಿದೆ. ಕುಂದಾಪುರದ ಕೇಂದ್ರ ಒಂದರಲ್ಲಿ ಎಸೆಸೆಲ್ಸಿ ಪರೀಕ್ಷೆ ಬರೆದ ಈ ವಿದ್ಯಾರ್ಥಿನಿಯ ವರದಿಯು ಇಂದು ಪಾಸಿಟಿವ್ ಎಂಬುದಾಗಿ ಬಂದಿದೆ.

ಈಗಾಗಲೇ ನಡೆದಿರುವ ದ್ವಿತೀಯ ಭಾಷೆ, ಗಣಿತ ಹಾಗೂ ವಿಜ್ಞಾನ ಪರೀಕ್ಷೆಗಳನ್ನು ಈ ವಿದ್ಯಾರ್ಥಿನಿ ಬರೆದಿದ್ದು, ಇದೀಗ ಕೊರೋನ ಪಾಸಿಟಿವ್ ಬಂದಿರುವುದರಿಂದ ಆಕೆ ಜು.1ರಂದು ನಡೆಯುವ ಸಮಾಜ ವಿಜ್ಞಾನ ಸೇರಿ ದಂತೆ ಮುಂದಿನ ಮೂರು ಪರೀಕ್ಷೆಗಳನ್ನು ಬರೆಯುವ ಅವಕಾಶ ದಿಂದ ವಂಚಿತರಾಗಿದ್ದಾರೆ.

ಜೂ.29ರ ಪರೀಕ್ಷೆ ಬರೆಯುತ್ತಿದ್ದ ಈ ವಿದ್ಯಾರ್ಥಿನಿಯಲ್ಲಿ ತೀವ್ರ ಸುಸ್ತು ಕಂಡು ಬಂದ ಕಾರಣ, ಕುಂದಾಪುರ ಸರಕಾರಿ ಆಸ್ಪತ್ರೆಯ ವೈದ್ಯರು ತೆರಳಿ ಚಿಕಿತ್ಸೆ ನೀಡಿದ್ದರು. ಬಳಿಕ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಬಂದು ಗಂಟಲು ದ್ರವದ ಮಾದರಿಯನ್ನು ತೆಗೆದು, ಆಕೆಯನ್ನು ಮನೆಗೆ ಕಳುಹಿ ಸಲಾಗಿತ್ತು. ಇಂದು ವರದಿ ಪಾಸಿಟಿವ್ ಬಂದ ಕಾರಣ ಆಕೆಯನ್ನು ಉಡುಪಿ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಮೇ ತಿಂಗಳಲ್ಲಿ ಮುಂಬೈಯಿಂದ ಜಿಲ್ಲೆಗೆ ಆಗಮಿಸಿ ಪಾಸಿಟಿವ್ ಕಾಣಿಸಿ ಕೊಂಡ ಇಬ್ಬರು, ಚಿಕಿತ್ಸೆ ಪಡೆದು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಗೊಂಡ ಬಳಿಕ ಈ ವಿದ್ಯಾರ್ಥಿನಿಯ ಮನೆಗೆ ಭೇಟಿ ನೀಡಿದ್ದರು. ಆದರೆ ಇವರಿಂದಲೇ ಈಕೆಗೆ ಸೋಂಕು ಬಂದಿದೆಯೇ ಎಂಬುದು ಇನ್ನು ಕೂಡ ದೃಢಪಟ್ಟಿಲ್ಲ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

ಪರೀಕ್ಷಾ ಕೋಣೆ ಬಂದ್: ಸೋಂಕಿತ ವಿದ್ಯಾರ್ಥಿನಿ ಪರೀಕ್ಷೆ ಬರೆದ ಕೇಂದ್ರದ ಕೋಣೆಯನ್ನು ಸ್ಯಾನಿಟೈಸ್ ಮಾಡಿ ಬಂದ್ ಮಾಡಲಾಗಿದೆ. ಈಕೆ ಯೊಂದಿಗೆ ಪರೀಕ್ಷೆ ಬರೆದ ಇತರ 19 ವಿದ್ಯಾರ್ಥಿಗಳಿಗೆ ನಾಳಿನ ಪರೀಕ್ಷೆ ಬರೆಯಲು ಬೇರೆ ಕೋಣೆಗಳ ವ್ಯವಸ್ಥೆ ಮಾಡಲಾಗಿದೆ.

ಈ 19 ವಿದ್ಯಾರ್ಥಿಗಳನ್ನು ಎರಡು ಕೋಣೆಯಲ್ಲಿ ಆರು ಅಡಿ ಅಂತರದಲ್ಲಿ ಕುಳ್ಳಿರಿಸಿ ಪರೀಕ್ಷೆ ಬರೆಸಲಾಗುವುದು. ಈ ಕೋಣೆಯಲ್ಲಿ ಕರ್ತವ್ಯ ನಿರ್ವಹಿಸಿದ ಶಿಕ್ಷಕಿಗೆ ನಾಳೆ ನಡೆಯುವ ಪರೀಕ್ಷೆಗೆ ಹಾಜರಾಗದಂತೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶೇಷಶಯನ ಕಾರಿಂಜ ತಿಳಿಸಿದ್ದಾರೆ.

ವಿದ್ಯಾರ್ಥಿನಿ ಮುಂದಿನ ಮೂರು ಪರೀಕ್ಷೆಯನ್ನು ಆಗಸ್ಟ್‌ನಲ್ಲಿ ನಡೆಯುವ ಪೂರಕ ಪರೀಕ್ಷೆಯಲ್ಲಿ ಫ್ರೇಷರ್ ಆಗಿ ಪರಿಗಣಿಸಿ ಬರೆಯಲು ಅವಕಾಶ ನೀಡಲಾಗುತ್ತದೆ. ಎರಡು ದಿನಗಳ ಹಿಂದೆಯಷ್ಟೆ ಹೆಜಮಾಡಿ ಕೇಂದ್ರದಲ್ಲಿ ಪರೀಕ್ಷೆ ಬರೆದ ಎಸೆಸೆಲ್ಸಿ ವಿದ್ಯಾರ್ಥಿನಿಯಲ್ಲೂ ಕೊರೋನ ಸೋಂಕು ಪತ್ತೆಯಾಗಿದ್ದು, ಆಕೆ ಇದೀಗ ಕಾರ್ಕಳ ಸರಕಾರಿ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News