ಭಾರತದ ಪ್ರಪ್ರಥಮ ಕೊರೋನ ಲಸಿಕೆ ‘ಕೊವಾಕ್ಸಿನ್’ ಮಾನವರ ಮೇಲೆ ಪ್ರಯೋಗಕ್ಕೆ ಅನುಮತಿ

Update: 2020-06-30 16:39 GMT

ಹೊಸದಿಲ್ಲಿ, ಜೂ.30: ಕೊರೋನ ಸೋಂಕಿಗೆ ಭಾರತದಲ್ಲಿ ಸಿದ್ಧವಾಗಿರುವ ಕೊವಾಕ್ಸಿನ್ ಲಸಿಕೆಯನ್ನು ಮನುಷ್ಯನ ಮೇಲೆ ಪರೀಕ್ಷಾರ್ಥ ಪ್ರಯೋಗಿಸುವ ಪ್ರಕ್ರಿಯೆ ಜುಲೈಯಿಂದ ಆರಂಭವಾಗಲಿದೆ ಎಂದು ಭಾರತ್ ಬಯೋಟೆಕ್ ಸಂಸ್ಥೆ ತಿಳಿಸಿದೆ.

ತಾನು ಕೊರೋನ ರೋಗಕ್ಕೆ ಲಸಿಕೆಯನ್ನು ಯಶಸ್ವಿಯಾಗಿ ಅಭಿವೃದ್ಧಿಗೊಳಿಸಿದ್ದು, ಇದನ್ನು ಪ್ರಥಮ ಮತ್ತು ದ್ವಿತೀಯ ಹಂತದಲ್ಲಿ ಮನುಷ್ಯರ ಮೇಲಿನ ಪರೀಕ್ಷಾರ್ಥ ಪ್ರಯೋಗಕ್ಕೆ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ(ಡಿಸಿಜಿಐ)ದಿಂದ ಅನುಮತಿ ಪಡೆಯಲಾಗಿದೆ. ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್(ಐಸಿಎಂಆರ್) ಮತ್ತು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ(ಎನ್‌ಐವಿ) ಸಹಯೋಗದಿಂದ ಲಸಿಕೆಯನ್ನು ಸಿದ್ಧಪಡಿಸಲಾಗಿದೆ ಎಂದು ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಸಂಸ್ಥೆ ಹೇಳಿದೆ.

 ಪುಣೆಯ ರಾಷ್ಟ್ರೀಯ ವೈರಾಣು ಸಂಸ್ಥೆ(ಎನ್‌ಐವಿ)ಯಲ್ಲಿ ಸಾರ್ಸ್ ಸಿಒವಿ2 ತಳಿಯನ್ನು ಪ್ರತ್ಯೇಕಿಸಿ ಭಾರತ್ ಬಯೊಟೆಕ್‌ಗೆ ವರ್ಗಾಯಿಸಲಾಗಿದೆ. ಭಾರತ್ ಬಯೋಟೆಕ್‌ನ ಬಿಎಸ್‌ಎಲ್-3 (ಜೈವಿಕ ಸುರಕ್ಷತೆ ಹಂತ 3)ರಲ್ಲಿ ದೇಶೀಯವಾಗಿ ನಿಷ್ಕ್ರಿಯ ಲಸಿಕೆಯನ್ನು ಅಭಿವೃದ್ಧಿಗೊಳಿಸಲಾಗಿದೆ . ಪೂರ್ವಭಾವಿ ಕ್ಲಿನಿಕಲ್ ಅಧ್ಯಯನಗಳಿಂದ ಲಭ್ಯವಾದ ವರದಿಯನ್ನು , ಸುರಕ್ಷತೆ ಮತ್ತು ನಿರೋಧಕ ಪ್ರತಿಕ್ರಿಯೆಯ ವಿವರವನ್ನು ಸಂಸ್ಥೆ ಸಲ್ಲಿಸಿದ ಬಳಿಕ ಕೇಂದ್ರ ಆರೋಗ್ಯ ಇಲಾಖೆಯಡಿ ಬರುವ ಔಷಧ ನಿಯಂತ್ರಕರು ಮನುಷ್ಯರ ಮೇಲಿನ ಪ್ರಥಮ ಮತ್ತು ದ್ವಿತೀಯ ಹಂತದ ಪರೀಕ್ಷಾರ್ಥ ಪ್ರಯೋಗಕ್ಕೆ ಅನುಮತಿ ನೀಡಿದ್ದಾರೆ . ದೇಶದಾದ್ಯಂತ ಜುಲೈ ತಿಂಗಳಿಂದ ಮನುಷ್ಯರ ಮೇಲೆ ಪ್ರಯೋಗ ಆರಂಭಿಸಲಾಗುವುದು ಎಂದು ಭಾರತ್ ಬಯೊಟೆಕ್‌ನ ಆಡಳಿತ ನಿರ್ದೇಶಕ ಡಾ. ಕೃಷ್ಣ ಯೆಲ್ಲ ಹೇಳಿದ್ದಾರೆ.

ಕ್ಲಿನಿಕಲ್ ಪೂರ್ವಭಾವಿ ಪರೀಕ್ಷೆಯ ಫಲಿತಾಂಶ ಆಶಾದಾಯಕವಾಗಿದ್ದು, ವ್ಯಾಪಕ ಸುರಕ್ಷತೆ ಮತ್ತು ಪರಿಣಾಮಕಾರಿ ರೋಗನಿರೋಧಕ ಪ್ರತಿಕ್ರಿಯೆ ಲಭ್ಯವಾಗಿದೆ. ಭವಿಷ್ಯದಲ್ಲೂ ಎದುರಾಗಬಹುದಾದ ಸಾಂಕ್ರಾಮಿಕ ರೋಗಗಳನ್ನು ನಿಭಾಯಿಸುವಲ್ಲಿ ಭಾರತದ ಶಕ್ತಿಯನ್ನು ಪ್ರದರ್ಶಿಸಲು ಲಸಿಕೆ ಅಭಿವೃದ್ಧಿ ಕಾರ್ಯಕ್ಕೆ ಮಹತ್ವ ನೀಡಲು ಸಂಸ್ಥೆ ನಿರ್ಧರಿಸಿದೆ ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News