ಸರಕಾರದ ನಿರ್ಲಕ್ಷದಿಂದ ಕೊರೋನ ಪಾಸಿಟಿವ್ ಪ್ರಕರಣ ಹೆಚ್ಚಳ : ಐವನ್ ಡಿಸೋಜ ಆರೋಪ

Update: 2020-06-30 17:00 GMT

ಮಂಗಳೂರು, ಜೂ.30: ರಾಜ್ಯ ಸರಕಾರದ ನಿರ್ಲಕ್ಷ್ಯದಿಂದ ಕೊರೋನ ಪಾಸಿಟಿವ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜ ಆರೋಪಿಸಿದರು.

ನಗರದ ಕಾಂಗ್ರೆಸ್ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕೊರೋನ ಸೋಂಕು ಸಮಾಜಕ್ಕೆ ಹರ ಡುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ಕ್ವಾರಂಟೈನ್ ವಿಚಾರದಲ್ಲಿ ಆಡಳಿತ ವರ್ಗದ ವೈಫಲ್ಯ ಎದ್ದುಕಾಣುತ್ತಿವೆ. ಕ್ವಾರಂಟೈನ್ ವ್ಯವಸ್ಥೆ ಸರಿಯಾಗಿ ಮಾಡದ ಕಾರಣ ಸಮಸ್ಯೆಯಾಗಿದೆ. ರಾಜ್ಯ ಸರಕಾರ 5 ಮಂದಿ ಸಚಿವರಿಗೆ ಕೊರೋನ ನಿರ್ವಹಣೆಯ ಉಸ್ತುವಾರಿ ನೀಡಿದ್ದು, ಒಬ್ಬರಿಗೊಬ್ಬರು ಸಮನ್ವಯತೆಯಿಲ್ಲವಾಗಿದೆ. ಸರಕಾರಿ ಆಸ್ಪತ್ರೆಗಳಲ್ಲಿ ಬೆಡ್ ಕೊರತೆಯಿಂದ ಖಾಸಗಿ ಆಸ್ಪತ್ರೆಗಳಿಗೆ ತೆರಳಲು ಅಧಿಕಾರಿಗಳು ಹೇಳುತ್ತಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ಪ್ರತಿನಿತ್ಯ 5 ಸಾವಿರ ರೂ. ಕನಿಷ್ಠ ಬಿಲ್, ಐಸಿಯುವಿಗೆ 15 ಸಾವಿರ ರೂ. ಬಿಲ್ ಮಾಡುತ್ತಿದ್ದಾರೆ. ಸಾಮಾನ್ಯ ನಾಗರಿಕ ಇದನ್ನು ಭರಿಸುವುದು ಸಾಧ್ಯವೇ? ಎಂದು ಪ್ರಶ್ನಿಸಿದರು.

ಖಾಸಗಿ ಆಸ್ಪತ್ರೆಗಳ ಬಿಲ್ಲನ್ನು ಸರಕಾರ ಭರಿಸಲು ಮುಂದಾಗಬೇಕು ಎಂದ ಐವನ್, ಸರಕಾರ ಮಾಡಿದ ದರಕ್ಕೆ ಯಾವ್ಯಾವ ಖಾಸಗಿ ಆಸ್ಪತ್ರೆ ಯವರು ಒಪ್ಪಿದ್ದಾರೆ ? ರೈಲುಗಳಲ್ಲಿ ತಾವು ಮಾಡಿದ ಆಸ್ಪತ್ರೆ ಏನಾಯ್ತು? ಎಂದು ಪ್ರಶ್ನಿಸಿದರು.

ರಾಜ್ಯ ಸರಕಾರ ರವಿವಾರ ಲಾಕ್‌ಡೌನ್ ಮಾಡಲು ಮುಂದಾಗಿರುವುದರಿಂದ ಏನು ಪ್ರಯೋಜನವಿದೆ ? ರಾತ್ರಿ 8ರಿಂದ ಬೆಳಗ್ಗೆ 5ರವರೆಗೆ ಕರ್ಫ್ಯೂ ಮಾಡುವುದರಿಂದ ಏನೂ ಪ್ರಯೋಜವಿಲ್ಲ. ಕೊರೋನ ವಿಚಾರದಲ್ಲಿ ಸರಕಾರ ಅಸಹಾಯಕತೆ ವ್ಯಕ್ತಪಡಿಸಿದೆ. ರಿಕ್ಷಾ-ಟ್ಯಾಕ್ಸಿ ಚಾಲಕರ ಸಹಿತ ಸರಕಾರ ಘೋಷಣೆ ಮಾಡಿದ ಕೋವಿಡ್ ಪರಿಹಾರ ಇನ್ನೂ ಶೇ.90ರಷ್ಟು ಮಂದಿಗೆ ಬಂದಿಲ್ಲ ಎಂದು ಆರೋಪಿಸಿದರು.

ಚೈನಾ ಮೊಬೈಲ್ ಇಟ್ಟುಕೊಂಡು ಅದರಲ್ಲಿ ಚೀನಾ ಆ್ಯಪ್‌ಗಳನ್ನು ನಿಷೇಧ ಮಾಡಿ ಏನು ಪ್ರಯೋಜನ?. ಚೀನಾ ಸೈನಿಕರ ದೇಶದ ಗಡಿಯೊಳಗೆ ಪ್ರವೇಶ ಮಾಡಿಲ್ಲ ಎಂದು ಹೇಳುವ ಪ್ರಧಾನಿ ದೇಶದ 20 ಸೈನಿಕರು ಹುತಾತ್ಮರಾದ ಬಗ್ಗೆ ಮಾತನಾಡಲಿ ಎಂದ ಐವನ್, ಜು.2ರಂದು ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ. ಶಿವಕುಮಾರ್ ಹಾಗೂ 3 ಮಂದಿ ಕಾರ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುತ್ತಿದ್ದು, ಈ ಕಾರ್ಯಕ್ರಮ ಬೂತ್ ಮಟ್ಟದಲ್ಲಿ ಪಕ್ಷ ಬಲವರ್ಧನೆಗೆ ಮಹತ್ವದ ಕಾರ್ಯಕ್ರಮವಾಗಿದೆ ಎಂದರು.

ಡಿಸಿಸಿ ಕಾರ್ಯದರ್ಶಿ ನೀರಜ್‌ಪಾಲ್, ಅಲ್ಪಸಂಖ್ಯಾತ ವಿಭಾಗ ಕಾರ್ಯದರ್ಶಿ ಹೈಮೋನ್, ಪಕ್ಷದ ಕಚೇರಿ ಕಾರ್ಯದರ್ಶಿ ನಝೀರ್ ಬಜಾಲ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News