ಜು. 2: ಕೆಪಿಸಿಸಿ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮ; ‘ದ.ಕ.ದಲ್ಲಿ 329 ಕಡೆ ನೇರಪ್ರಸಾರ ವ್ಯವಸ್ಥೆ’

Update: 2020-06-30 18:00 GMT

ಮಂಗಳೂರು, ಜೂ.30: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ಮೂವರು ಕಾರ್ಯಾಧ್ಯಕ್ಷರ ಪದಗ್ರಹಣ ಕಾರ್ಯಕ್ರಮ ಜು.2ರಂದು ಬೆಂಗಳೂರಿನಲ್ಲಿ ನಡೆಯಲಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 329 ಕಡೆಗಳಲ್ಲಿ ಈ ಕಾರ್ಯಕ್ರಮದ ನೇರಪ್ರಸಾರ ವ್ಯವಸ್ಥೆ ಮಾಡಲಾಗಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಮತ್ತು ಮಾಜಿ ಸಚಿವ ರಮಾನಾಥ ರೈ ತಿಳಿಸಿದ್ದಾರೆ.

ನಗರದ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ಮಂಗಳವಾರ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ 150 ಮಂದಿ ಹಿರಿಯ ಮುಖಂಡರ ಸಮ್ಮುಖದಲ್ಲಿ ಪದಗ್ರಹಣ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮವನ್ನು ಟಿವಿ, ಎಲ್‌ಇಡಿ ಪರದೆ, ಝೂಮ್ ಆ್ಯಪ್ ಮೂಲಕ ರಾಜ್ಯಾದ್ಯಂತ ಎಲ್ಲ ಕಾರ್ಯಕರ್ತರು, ಪಕ್ಷದ ಅಭಿಮಾನಿಗಳು ವೀಕ್ಷಿಸುವ ವ್ಯವಸ್ಥೆ ಮಾಡಲಾಗಿದೆ. ರಾಜ್ಯದ 7831 ಕಡೆ ಅಂದು ಬೆಳಗ್ಗೆ 10:30ರಿಂದ ಏಕಕಾಲದಲ್ಲಿ ಕಾರ್ಯಕ್ರಮ ನಡೆಯಲಿದೆ. ಇಂಥ ವ್ಯವಸ್ಥೆಯ ಮೂಲಕ ಇಷ್ಟು ದೊಡ್ಡ ಕಾರ್ಯಕ್ರಮ ನಡೆಸುತ್ತಿರುವುದು ಏಷ್ಯಾದಲ್ಲೇ ಮೊದಲು ಎಂದು ಹೇಳಿದರು.

ಜಿಲ್ಲಾ ಮಟ್ಟದಲ್ಲಿ, ಮಹಾನಗರ ಪಾಲಿಕೆ, ಪುರಸಭೆ, ನಗರಸಭೆಯ ಎಲ್ಲ ವಾರ್ಡ್‌ಗಳು, ಪ್ರತಿ ಗ್ರಾಮ ಪಂಚಾಯತ್‌ನಲ್ಲೂ ಈ ಕಾರ್ಯಕ್ರಮ ನಡೆಯಲಿದೆ. ಪ್ರತಿ ಕಾರ್ಯಕ್ರಮದಲ್ಲೂ ಎರಡು ರೀತಿಯ ಪರದೆಗಳಿರುತ್ತವೆ. ಒಂದು ಕಡೆ ಟಿವಿ ಪರದೆ ಅಥವಾ ಎಲ್‌ಇಡಿ ಸ್ಕ್ರೀನ್ ಮೂಲಕ ಪದಗ್ರಹಣ ಕಾರ್ಯಕ್ರಮದ ನೇರಪ್ರಸಾರ ಆದರೆ, ಇನ್ನೊಂದೆಡೆ ಝೂಮ್ ಆ್ಯಪ್ ಮೂಲಕ ಬೆಂಗಳೂರಿನ ಕಾರ್ಯಕ್ರಮವನ್ನು ಇಲ್ಲಿ ಹಾಗೂ ಇಲ್ಲಿನ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ವೀಕ್ಷಿಸುವ ಏರ್ಪಾಡು ಮಾಡಲಾಗಿದೆ ಎಂದು ಹರೀಶ್ ಕುಮಾರ್ ವಿವರಿಸಿದರು.

ಬೆಂಗಳೂರಿನ ಕಾರ್ಯಕ್ರಮದಲ್ಲಿ ದೀಪ ಬೆಳಗಿಸುವುದು, ವಂದೇ ಮಾತರಂ ಗೀತೆ, ಪ್ರತಿಜ್ಞಾವಿಧಿ ಸ್ವೀಕಾರ ಕಾರ್ಯಕ್ರಮಗಳು ನಡೆಯು ವಂತೆಯೇ ಸ್ಥಳೀಯವಾಗಿಯೂ ಅದೇ ಕಾರ್ಯಕ್ರಮಗಳು ನಡೆಯಲಿವೆ. ಈ ಕಾರ್ಯಕ್ರಮಕ್ಕಾಗಿ ಪ್ರತಿ ಗ್ರಾಮ ಪಂಚಾಯತ್‌ನಲ್ಲಿ ಡಿಜಿಟಲ್ ಯೂತ್‌ಗಳ ನೇಮಕ ಮಾಡಲಾಗಿದೆ. ಟ್ರಾಕರ್ ಮೂಲಕ ಪಕ್ಷದ ವೀಕ್ಷಕರ ಕಾರ್ಯ ಚಟುವಟಿಕೆಗಳನ್ನು ಪಕ್ಷದ ಕೇಂದ್ರ ಕಚೇರಿಯಿಂದಲೇ ನಿರ್ವಹಿಸಲಾಗುತ್ತಿದೆ ಎಂದರು.

‘ವೆನ್ಲಾಕ್‌ನಲ್ಲಿ ಬಡವರ ಚಿಕಿತ್ಸೆಗೆ ವ್ಯವಸ್ಥೆಯಾಗಲಿ’: ದ.ಕ. ಜಿಲ್ಲೆಯಲ್ಲಿ ಪ್ರಸ್ತುತ ಖಾಸಗಿ ಆಸ್ಪತ್ರೆಗಳ ಒಂದು ಬ್ಲಾಕ್‌ನ್ನು ಕೋವಿಡ್‌ಗೆ ಮೀಸಲಿ ರಿಸಿ, ಉಳಿದ ಭಾಗವನ್ನು ಸಾರ್ವಜನಿಕರ ಇತರ ರೋಗಗಳ ಚಿಕಿತ್ಸೆಗೆ ಏರ್ಪಾಡು ಮಾಡಲಾಗಿದೆ. ಇದರಿಂದಾಗಿ ಸಾರ್ವಜನಿಕರು ಆಸ್ಪತ್ರೆಗೆ ಹೋಗಲು ಭಯಪಡುವ ವಾತಾವರಣ ನಿರ್ಮಾಣವಾಗಿದೆ. ಇಂಥ ವ್ಯವಸ್ಥೆ ಕೈಬಿಟ್ಟು ಜಿಲ್ಲೆಯಲ್ಲಿ ಎಷ್ಟು ಆಸ್ಪತ್ರೆಗಳಿವೆಯೋ ಅದರ ಅರ್ಧದಷ್ಟನ್ನು ಕೋವಿಡ್ ಚಿಕಿತ್ಸೆಗೆ ಮೀಸಲಿಟ್ಟು, ಉಳಿದ ಆಸ್ಪತ್ರೆಗಳನ್ನು ಬೇರೆ ರೋಗಿಗಳಿಗೆ ಮೀಸಲಿಡಬೇಕು. ವೆನ್ಲಾಕ್ ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆ ಮಾಡದೆ ಈ ಹಿಂದಿನಂತೆ ಬಡವರ ಚಿಕಿತ್ಸೆಗೆ ಅನುವು ಮಾಡಿಕೊಡಬೇಕು. ಜಿಲ್ಲಾಡಳಿತ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಹರೀಶ್ ಕುಮಾರ್ ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News