ಇರಾನ್: ಅನಿಲ ಸೋರಿಕೆಯಿಂದ ಕ್ಲಿನಿಕ್‌ನಲ್ಲಿ ಸ್ಫೋಟ ; 19 ಮಂದಿ ಮೃತ್ಯು

Update: 2020-07-01 03:52 GMT

ಟೆಹರಾನ್: ಇರಾನ್ ರಾಜಧಾನಿಯ ಕ್ಲಿನಿಕ್ ಒಂದರಲ್ಲಿ ಸಂಭವಿಸಿದ ಅನಿಲ ಸೋರಿಕೆ ಹಾಗೂ ಸ್ಫೋಟದಿಂದ ಕನಿಷ್ಠ 19 ಮಂದಿ ಜೀವ ಕಳೆದುಕೊಂಡಿದ್ದಾರೆ.

ದುರಂತದಲ್ಲಿ 13 ಮಂದಿ ಮೃತಪಟ್ಟಿದ್ದಾರೆ ಎಂದು ಮೊದಲು ಅಧಿಕಾರಿಗಳು ಪ್ರಕಟಿಸಿದ್ದರು. ಮೃತರ ಸಂಖ್ಯೆ 19ಕ್ಕೇರಿರುವುದನ್ನು ಟೆಹರಾನ್ ಅಗ್ನಿಶಾಮಕ ಪಡೆಯ ವಕ್ತಾರ ಜಲಾಲ್ ಮಲಕಿ ಆ ಬಳಿಕ ಸರ್ಕಾರಿ ಟಿವಿಗೆ ದೃಢಪಡಿಸಿದ್ದಾರೆ.

ಮೃತರಲ್ಲಿ 15 ಮಹಿಳೆಯರು ಹಾಗೂ ನಾಲ್ವರು ಪುರುಷರು ಸೇರಿದ್ದಾರೆ. ಅಗ್ನಿಶಾಮಕ ದಳ ಸಿಬ್ಬಂದಿ 20 ಮಂದಿಯನ್ನು ರಕ್ಷಿಸಿದ್ದಾರೆ ಎಂದು ಜಲಾಲ್ ಹೇಳಿಕೆಯನ್ನು ಉಲ್ಲೇಖಿಸಿ ಸರ್ಕಾರಿ ಸ್ವಾಮ್ಯದ ಸುದ್ದಿಸಂಸ್ಥೆ ಇರ್ನಾ ವರದಿ ಮಾಡಿದೆ.

ಒಂದಕ್ಕಿಂತ ಹೆಚ್ಚು ಸ್ಫೋಟ ಸಂಭವಿಸಿ, ಬೆಂಕಿಯ ಜ್ವಾಲೆ ಮತ್ತು ದಟ್ಟ ಹೊಗೆ ಹರಡಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವೀಡಿಯೊಗಳಲ್ಲಿ ಕಂಡುಬರುತ್ತಿದೆ.

ಈ ಭೀಕರ ಸ್ಫೋಟ ಮತ್ತು ಬೆಂಕಿಗೆ ವೈದ್ಯಕೀಯ ಕ್ಲಿನಿಕ್‌ನಲ್ಲಿ ಸಂಭವಿಸಿದ ಅನಿಲ ಸೋರಿಕೆ ಕಾರಣ ಎಂದು ಟೆಹರಾನ್ ಗವರ್ನರ್ ಹಮೀದ್ ರೆಝಾ ಗೌಡರ್ಝಿ ಸ್ಪಷ್ಟಪಡಿಸಿದ್ದಾರೆ.

ತಾಜ್‌ರಿಶ್ ಬಝಾರ್ ಸಮೀಪದ ಜನತೆ ಘಟನಾ ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆಗೆ ತಡೆ ಉಂಟಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ. ವೈದ್ಯಕೀಯ ಕೇಂದ್ರದಲ್ಲಿ ಇನ್ನಷ್ಟು ಆಮ್ಲಜನಕ ಸಿಲಿಂಡರ್‌ಗಳಿದ್ದು, ಮತ್ತಷ್ಟು ಸ್ಫೋಟದ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News