ಕೊರೋನ ಸೋಂಕಿತರ ಅಂತ್ಯಸಂಸ್ಕಾರದಲ್ಲಿ ಅಮಾನವೀಯ ಕ್ರಮ: ಎಸ್ಕೆಎಸ್ಸೆಸ್ಸೆಫ್ ಖಂಡನೆ
ಮಂಗಳೂರು : ಬಳ್ಳಾರಿಯಲ್ಲಿ ಕೊರೋನದಿಂದ ಮೃತಪಟ್ಟ ಮೃತದೇಹಗಳನ್ನು ಅವಮಾನಿಯವಾಗಿ ಒಂದೇ ಗುಂಡಿಯಲ್ಲಿ ಹಾಕಿ ಅಂತ್ಯ ಸಂಸ್ಕಾರ ನಡೆಸಿರುವ ಘಟನೆ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಇಂತಹ ಅಧಿಕಾರಿಗಳ ನೀಚ ಕೃತ್ಯವನ್ನು ಎಸ್ಕೆಎಸ್ಸೆಸ್ಸೆಫ್ ವಿಖಾಯ ದ.ಕ ಜಿಲ್ಲಾ ಸಮಿತಿಯೂ ತೀರ್ವವಾಗಿ ಖಂಡಿಸುವುದಾಗಿ ಪ್ರಕಟನೆ ತಿಳಿಸಿದೆ.
ಮನುಷ್ಯತ್ವ ಮರೆತ ಸಿಬ್ಬಂದಿಗಳು ಯಾವುದೇ ಕರುಣೆ ತೋರದೆ ಮೃತದೇಹಗಳನ್ನು ಒಂದರ ಮೇಲೊಂದರಂತೆ ಎಸೆಯುವುದು ಹೇಯ ಕೃತ್ಯವಾಗಿದೆ. ಮೃತದೇಹವು ತನ್ನದೇ ಆದ ಘನತೆಯನ್ನು ಹೊಂದಿರುತ್ತದೆ ಹಾಗೂ ಗೌರವಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವೂ ಆಗಿರುತ್ತದೆ. ಆದರೆ ಬಳ್ಳಾರಿಯಲ್ಲಿ ನಡೆದಂತಹ ಈ ಘಟನೆ ಇಡೀ ನಾಗರಿಕ ಸಮಾಜವನ್ನು ತಲೆತಗ್ಗಿಸುವಂತೆ ಮಾಡಿದೆ.
ಜಿಲ್ಲಾಡಲಿತ ಮತ್ತು ಆರೋಗ್ಯ ಇಲಾಖೆಯ ನಿರ್ಲಕ್ಷ್ಯವೇ ಈ ಘಟನೆಗೆ ನೇರ ಕಾರಣವಾಗಿದೆ.ಈ ಘಟನೆಗೆ ಕಾರಣರಾದವರ ವಿರುದ್ಧ ಕೂಡಲೇ ಕಾನೂನು ಕ್ರಮ ಜರುಗಿಸಬೇಕು ಮತ್ತು ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಬೇಕು. ಆಯಾ ಧರ್ಮದ ವಿಧಿ ವಿಧಾನದಂತೆ ಮೃತದೇಹ ಸಂಸ್ಕಾರಕ್ಕೆ ವ್ಯವಸ್ಥೆಯನ್ನು ಕಲ್ಪಿಸುವಂತೆ ಎಸ್ಕೆಎಸ್ಸೆಸ್ಸೆಫ್ ವಿಖಾಯ ದ.ಕ ಜಿಲ್ಲಾ ಸಮಿತಿ ಸರಕಾರವನ್ನು ಒತ್ತಾಯಿಸುತ್ತಿದೆ ಎಂದು ಎಸ್ಕೆಎಸ್ಸೆಸ್ಸೆಫ್ ವಿಖಾಯ ದ.ಕ ಜಿಲ್ಲಾ ಸಮಿತಿ ಪ್ರಕಟನೆಯಲ್ಲಿ ತಿಳಿಸಿದೆ.