ಭಾರತ ತಂಡದಲ್ಲಿ ಒಟ್ಟಿಗೆ ಆಡುವ ಕನಸು ಹೊತ್ತಿರುವ ನಿಖಿಲ್-ವಿನಿಲ್ ಸೋದರರು

Update: 2020-07-01 05:42 GMT

 ಹೊಸದಿಲ್ಲಿ:ನೆವಿಲ್ಲೆ ಮತ್ತು ಡೆರಿಕ್ ಡಿ’ ಸೋಜಾ, ಪ್ರದೀಪ್ ಮತ್ತು ಪ್ರಸೂನ್ ಬ್ಯಾನರ್ಜಿ ಸೇರಿದಂತೆ ಹಲವು ಮಂದಿ ಸೋದರ ಜೋಡಿಗಳು ಭಾರತೀಯ ಫುಟ್ಬಾಲ್‌ನಲ್ಲಿ ಭಾರತದ ಜರ್ಸಿ ಧರಿಸಿ ಆಡಿರುವುದನ್ನು ನೋಡಿದ್ದೇವೆ. ಇದೀಗ ಅದೇ ಪಟ್ಟಿಗೆ ಸೇರುವ ನಿಟ್ಟಿನಲ್ಲಿ ನಿಖಿಲ್ ಮತ್ತು ವಿನಿಲ್ ಪೂಜಾರಿ ಪ್ರಯತ್ನ ಮುಂದುವರಿಸಿದ್ದಾರೆ.

 ನಿಖಿಲ್ ಮತ್ತು ವಿನಿಲ್ ಪೂಜಾರಿ ಅವರು ರಾಷ್ಟ್ರೀಯ ತಂಡಕ್ಕಾಗಿ ಜೊತೆಯಾಗಿ ಆಡುವ ಗುರಿಯನ್ನು ಹೊಂದಿದ್ದಾರೆ ಮತ್ತು ಅವರ ಹೆತ್ತವರ ಜೀವಮಾನದ ಕನಸನ್ನು ಈಡೇರಿಸುವ ಕನಸು ಕಾಣುತ್ತಿದ್ದಾರೆ.

 ‘‘ನಮ್ಮ ಹೆತ್ತವರು ಫುಟ್ಬಾಲ್‌ನಲ್ಲಿ ನಾವು ಮುಂದುವರಿಯುವುದನ್ನು ಎಂದಿಗೂ ತಡೆಯಲಿಲ್ಲ. ನಾವು ಅತ್ಯುತ್ತಮ ಪ್ರದರ್ಶನ ನೀಡಲು ಮತ್ತು ಕ್ರೀಡೆಯಲ್ಲಿ ವೃತ್ತಿಜೀವನವನ್ನು ಆರಂಭಿಸಲು ಮೊದಲಿನಿಂದಲೂ ನಮಗೆ ಪ್ರೋತ್ಸಾಹಿಸುತ್ತಿದ್ದರು. ಭಾರತೀಯ ತಂಡದ ನೀಲಿ ಜರ್ಸಿಯಲ್ಲಿ ನಮ್ಮನ್ನು ಒಟ್ಟಿಗೆ ನೋಡುವುದು ಯಾವಾಗಲೂ ಅವರ ಕನಸಾಗಿದೆ ಮತ್ತು ಭವಿಷ್ಯದಲ್ಲಿ ಅದನ್ನು ನಿಜವಾಗಿಸಲು ನಾವು ಆಶಿಸುತ್ತೇವೆ ’’ಎಂದು 24 ವರ್ಷದ ನಿಖಿಲ್ ಹೇಳಿದ್ದಾರೆ. ಇಬ್ಬರು ಸಹೋದರರಲ್ಲಿ ನಿಖಿಲ್ ಹಿರಿಯರಾಗಿದ್ದಾರೆ. ಅವರು 2017ರಲ್ಲಿ ಮಾರಿಷಸ್ ವಿರುದ್ಧ ಭಾರತ ತಂಡದಲ್ಲಿ ಆಡುವ ಮೂಲಕ ಅಂತರ್‌ರಾಷ್ಟ್ರೀಯ ಫುಟ್ಬಾಲ್‌ಗೆ ಪಾದಾರ್ಪಣೆ ಮಾಡಿದರು ಎಂದು ಜಾಲತಾಣ ವರದಿ ಮಾಡಿದೆ.

  ನಿಖಿಲ್‌ಗಿಂತ ಎರಡು ವರ್ಷ ಕಿರಿಯರಾಗಿರುವ ವಿನಿಲ್ ಪೂಜಾರಿ ಕಳೆದ ಎರಡು ಋತುಗಳಲ್ಲಿ ಐ-ಲೀಗ್‌ನಲ್ಲಿ ಚರ್ಚಿಲ್ ಬ್ರದರ್ಸ್ ಎಫ್‌ಸಿ ಪರವಾಗಿ ಕಾಣಿಸಿಕೊಂಡಿದ್ದರು. ‘‘ಕ್ರೀಡಾಚಟುವಟಕೆ ಗಳಲ್ಲಿ ಭಾಗವಹಿಸಲು ನಮಗೆ ಯಾವಾಗಲೂ ಹೆತ್ತವರು ಪ್ರೋತ್ಸಾಹ ನೀಡುತ್ತಿದ್ದರು. ಶಾಲೆಯಲ್ಲಿ ಕಲಿಯುತ್ತಿರುವಾಗ ಶೈಕ್ಷಣಿಕವಾಗಿ ಕಡಿಮೆ ಅಂಕಗಳನ್ನು ಗಳಿಸಿದ ಸಂದರ್ಭಗಳೂ ಇದ್ದವು. ಆದರೆ ನಮ್ಮ ಪೋಷಕರು ನಮ್ಮನ್ನು ಆಟವಾಡುವುದನ್ನು ಎಂದಿಗೂ ತಡೆಯಲಿಲ್ಲ. ಅವರು ಯಾವಾಗಲೂ ನನ್ನನ್ನು ಮತ್ತು ನಿಖಿಲ್ ಅವರನ್ನು ಬೆಂಬಲಿಸಿದ್ದಾರೆ ಮತ್ತು ನಮ್ಮ ಪರವಾಗಿ ನಿಂತಿದ್ದಾರೆ. ನಮ್ಮ ಸಲುವಾಗಿ ಮೌನವಾಗಿ ತ್ಯಾಗ ಮಾಡುತ್ತಿದ್ದಾರೆ. ನಾವಿಬ್ಬರು ಒಟ್ಟಿಗೆ ಭಾರತದ ಪರ ಆಡುವುದನ್ನು ನೋಡಬೇಕೆಂಬ ಅವರ ಕನಸನ್ನು ಒಂದು ದಿನ ಈಡೇರಿಸಬಹುದೆಂದು ನಾವು ಭಾವಿಸುತ್ತೇವೆ’’ ಎಂದು ಅವರು ಹೇಳಿದರು. ಈಗ ನಾವು ಒಟ್ಟಿಗೆ ಅಮೂಲ್ಯವಾದ ಸಮಯವನ್ನು ಕಳೆಯುತ್ತೇವೆ. ಫುಟ್ಬಾಲ್ ಮತ್ತು ಇತರ ವಿಷಯಗಳ ಬಗ್ಗೆ ಮಾತನಾಡುತ್ತೇವೆ ಮತ್ತು ಹೋಮ್‌ವರ್ಕ್‌ನ್ನು ನಮ್ಮ ನಡುವೆ ಹಂಚಿಕೊಳ್ಳುತ್ತೇವೆ ಎಂದು ಏಶ್ಯನ್ ಚಾಂಪಿಯನ್ಸ್ ಖತಾರ್ ವಿರುದ್ಧ ಕಳೆದ ವರ್ಷ ದೋಹಾದಲ್ಲಿ ಐತಿಹಾಸಿಕ 0-0 ಡ್ರಾ ದಾಖಲಿಸಿದ ಭಾರತದ ಫುಟ್ಬಾಲ್ ತಂಡದ ಸದಸ್ಯರಾಗಿದ್ದ ನಿಖಿಲ್ ಹೇಳಿದರು.

ಮಂಗಳೂರಿನ ಹುಡುಗರು

24 ರ ಹರೆಯದ ನಿಖಿಲ್ ಪೂಜಾರಿ ಭಾರತದ ವೃತ್ತಿಪರ ಫುಟ್ಬಾಲ್ ಆಟಗಾರ. ಇವರು ಭಾರತೀಯ ಕ್ಲಬ್ ಹೈದರಾಬಾದ್ ಎಫ್‌ಸಿ ಮತ್ತು ಭಾರತೀಯ ರಾಷ್ಟ್ರೀಯ ತಂಡದಲ್ಲಿ ಫಾರ್ವರ್ಡ್ ಆಗಿ ಆಡುತ್ತಿದ್ದಾರೆ.

ನಿಖಿಲ್ ಸೋದರ ವಿನಿಲ್ ಪೂಜಾರಿ ಭಾರತದ ಪರ ಅವಕಾಶಕ್ಕಾಗಿ ಕಾಯುತ್ತಿದ್ದಾರೆ

  ಕರ್ನಾಟಕದ ಮಂಗಳೂರಿನಲ್ಲಿ 1995, ಸೆ.3ರಂದು ಜನಿಸಿದ ನಿಖಿಲ್ ಪೂಜಾರಿ ತಮ್ಮ ವೃತ್ತಿಜೀವನವನ್ನು ರಿಯಾನ್ ಎಫ್‌ಸಿ ಯೊಂದಿಗೆ ಮುಂಬೈನಲ್ಲಿ ಪ್ರಾರಂಭಿಸಿದರು. ರಿಯಾನ್ ಎಫ್‌ಸಿಯಲ್ಲಿದ್ದಾಗ ಮಹಾರಾಷ್ಟ್ರದ ಅಂಡರ್-19ತಂಡದಲ್ಲಿ ಅವಕಾಶ ಗಿಟ್ಟಿಸಿಕೊಂಡರು. ಬಳಿಕ ಮುಂಬೈ ತಂಡ ಸೇರಿದರು. ಆ.16, 2016ರಲ್ಲಿ ಕೋಲ್ಕತಾ ಮೂಲದ ಈಸ್ಟ್ ಬೆಂಗಾಲ್ ಸೇರ್ಪಡೆಗೊಂಡರು. ಭವಾನಿಪೋರ್ ವಿರುದ್ಧ ತನ್ನ ಮೊದಲ ಕೋಲ್ಕತಾ ಫುಟ್ಬಾಲ್ ಲೀಗ್ ಪಂದ್ಯಗಳಲ್ಲಿ ತಮ್ಮ ಮೊದಲ ತಂಡಕ್ಕೆ ಪಾದಾರ್ಪಣೆ ಮಾಡಿದರು. ಪಂದ್ಯದಲ್ಲಿ ಜಿತೆನ್ ಮುರ್ಮುಗೆ 78 ನೇ ನಿಮಿಷದಲ್ಲಿ ಬದಲಿಯಾಗಿ ಬಂದರು. 23 ಸೆಪ್ಟೆಂಬರ್ 2016 ರಂದು ಬೋರ್ಡೊಲಾಯ್ ಟ್ರೋಫಿಯ ಗ್ರೂಪ್ ಹಂತದ ಪಂದ್ಯದಲ್ಲಿ ಬಾಂಗ್ಲಾದೇಶದ ಬೊಂಗೊಬಿ ಅಗ್ರಗಾಮಿ ವಿರುದ್ಧ ತನ್ನ 87ನೇ ನಿಮಿಷದಲ್ಲಿ ಮೊದಲ ಗೋಲು ಗಳಿಸಿದರು.

2017ರಲ್ಲಿ ಭಾರತ ತಂಡದ ಪರ ಅವಕಾಶ ಗಿಟ್ಟಿಸಿಕೊಂಡ ನಿಖಿಲ್ ಪೂಜಾರಿ ಅವರು 2018ರ ಸ್ಯಾಫ್ ಚಾಂಪಿಯನ್‌ಶಿಪ್‌ನಲ್ಲಿ ಮಾಲ್ಡೀವ್ಸ್ ವಿರುದ್ಧ ತನ್ನ ಚೊಚ್ಚಲ ಅಂತರ್‌ರಾಷ್ಟ್ರೀಯ ಗೋಲು ಗಳಿಸಿದರು. ಅವರು ಈ ವರೆಗೆ 8 ಅಂತರ್‌ರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News